ದಾವಣಗೆರೆ: ‘ಹೈಕಮಾಂಡ್‌ನಿಂದ ಯಾವುದೇ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಆದೇಶ ಬಂದಿದೆ. ಹಾಗಾಗಿ ನಾವು ಶಾಸಕರು ಯಾರೂ ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲ್ಲ’ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಮೀಟಿಂಗ್ ನಡೆಯುತ್ತಿದೆ. ಹೈಕಮಾಂಡ್‌ನಿಂದ ಬಂದಿರುವ ಆದೇಶದ ಹಿನ್ನೆಲೆಯಲ್ಲಿ ನಾವ್ಯಾರೂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಬದಲಾವಣೆಯ ಬಗ್ಗೆ ನಮಗೇನು ಗೊತ್ತು? ನಮಗೆ ಯಾವುದೇ ಮಾಹಿತಿ ಇಲ್ಲ,’ ಎಂದು ಪ್ರತಿ ಬಾರಿ ಸಿಎಂ ಆಗಬೇಕೆಂದು ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸುತ್ತಿದ್ದ ಶಿವಗಂಗಾ ಬಸವರಾಜ್ ಈ ರೀತಿ ಸ್ಪಷ್ಟಪಡಿಸಿದರು.
‘ಇತಿಹಾಸ ಸೃಷ್ಟಿಯಾಗುವಲ್ಲಿ ಯಾವಾಗಲೂ ಪರಿಶ್ರಮ ಇರುತ್ತದೆ’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು, ಅವರು ಹೇಳಿದಂತೆ ಪರಿಶ್ರಮ ಇರುವ ಕಡೆ ಇತಿಹಾಸ ಸೃಷ್ಟಿಯಾಗುತ್ತದೆ. ಆದರೆ ಪ್ರಸ್ತುತ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ನಾವೇನೂ ಮಾತನಾಡಲ್ಲ,’ ಎಂದು ‘ನೋ ಕಾಮೆಂಟ್ಸ್’ ಎಂದರು.
ದೆಹಲಿ ಪ್ರವಾಸದ ಕುರಿತು ಕೇಳಲಾದ ಪ್ರಶ್ನೆಗೆ, ‘ಕೆಲವರು ಅವರ ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿರಬಹುದು, ನಮಗೆ ಅದರ ಸಂಪೂರ್ಣ ಮಾಹಿತಿ ಇಲ್ಲ,’ ಎಂದು ಪ್ರತಿಕ್ರಿಯಿಸಿದರು.






















