SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಕರ್ತವ್ಯ ಮರೆತರೆ ಜನತೆಗೆ ದ್ರೋಹ – CM ಖಡಕ್ ಸಂದೇಶ

ಬೆಳಗಾವಿ: ಕರ್ತವ್ಯ ಮರೆತರೆ ಜನತೆಗೆ ದ್ರೋಹ – CM ಖಡಕ್ ಸಂದೇಶ

0
18

ಬೆಳಗಾವಿ: “ನಾವು ಎರಡು ಕಣ್ಣಲ್ಲಿ ನೂರು ಜನರನ್ನು ನೋಡಿದರೆ, ನೂರು ಜನರ ಇನ್ನೂರು ಕಣ್ಣುಗಳು ನಮ್ಮನ್ನು ಗಮನಿಸುತ್ತಿರುತ್ತವೆ. ಜನ ನಮ್ಮನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನಸೇವೆಯಲ್ಲಿ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅರಬೈಲ್ ಘಾಟ್ ಬಳಿ ಭೀಕರ ಅಪಘಾತ: ಧಾರವಾಡ ಮೂಲದ ಆರು ಜನ ಸಾವು!

“ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಬಳಿ ಹೋಗಿ ಮತ ಕೇಳಬೇಕು. ಆದರೆ ಅಧಿಕಾರಿಗಳಿಗೆ ಅಂತಹ ಅಗತ್ಯವಿಲ್ಲ. ಆದರೂ ಕರ್ತವ್ಯ ಮರೆತರೆ ಅದು ಜನತೆಗೆ ಮಾಡುವ ದ್ರೋಹವಾಗುತ್ತದೆ. ಅಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಸರ್ಕಾರದ ಮೇಲೆ ಜನರು ಇಟ್ಟಿರುವ ನಿರೀಕ್ಷೆ ಈಡೇರುತ್ತದೆ” ಎಂದರು.

ಸಭೆಯ ವೇಳೆ ಯಾವುದೇ ಅಧಿಕಾರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದರೆ ಅಮಾನತು ಆದೇಶ ನೀಡಲಾಗುವುದು ಎಂದು ಎಚ್ಚರಿಸಿದ ಮುಖ್ಯಮಂತ್ರಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲೇ ನೆಲೆಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ರೈಲಿನಲ್ಲಿ ‘ಹನಿಮೂನ್ ಸೂಟ್’ ಅಲಂಕಾರ: ಸಿಬ್ಬಂದಿ ಅಮಾನತು!

ಜನರನ್ನು ಸಣ್ಣಪುಟ್ಟ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು, ಜನರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ತಮ್ಮ ಅಧೀನದಲ್ಲಿರುವ ಅಧಿಕಾರಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಿತ್ಯದ ಮಾಹಿತಿ ಹೊಂದಿರಬೇಕು ಎಂದರು.

ಸರ್ಕಾರ ಸ್ಥಾಪಿಸಿರುವ “ಪ್ರಜಾಸೇವಾ ಇಲಾಖೆ” ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ನೆರವಾಗಬೇಕು ಎಂದು ತಿಳಿಸಿದ ಅವರು, ಜನಸ್ಪಂದನೆ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚಿಸಿದರು.

ಇದನ್ನೂ ಓದಿ: ಅಂಕಣ ಬರಹ | ಎಸ್‌ಐಆರ್: `ರಾಜ್ಯ’ಕೀಯ ಚೆಸ್ ಆಡಿದ ಡಿಕೆ!

ನಗರ ಮತ್ತು ಪಟ್ಟಣಗಳ ಅಭಿವೃದ್ಧಿ ಯೋಜನಾಬದ್ಧವಾಗಿರಬೇಕು. ಅನುಮತಿ ಇಲ್ಲದೆ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದ ಸಿಎಂ, ರಾಜ್ಯಾದ್ಯಂತ ಇ-ಖಾತೆ ಯೋಜನೆಯನ್ನು ವಿಸ್ತರಿಸಲಾಗುತ್ತಿದ್ದು, ಯಾವುದೇ ವೆಚ್ಚವಿಲ್ಲದೆ ಜನರ ಮನೆ ಬಾಗಿಲಿಗೆ ಇ-ಖಾತೆ ತಲುಪಿಸುವ ಕೆಲಸ ನಡೆಯುತ್ತಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ “ಸಿಎಸ್‌ಆರ್ ಶಾಲೆ” ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಯುವತಿಗೆ ಅಶ್ಲೀಲ ಸಂದೇಶ: ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ FIR

ಇದೇ ವೇಳೆ “ಯುವ ಉದ್ಯೋಗ ಸೇತು” ಕಾರ್ಯಕ್ರಮದ ಮೂಲಕ ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಯುವಕರಿಗೆ ತಲುಪಿಸಲಾಗುವುದು ಎಂದ ಅವರು, ರಾಜ್ಯದಾದ್ಯಂತ 10 ಸಾವಿರ “ಭಾರತ್ ಜೋಡೋ ಯುವ ಸಂಘ”ಗಳನ್ನು ಆರಂಭಿಸಿ, ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಘೋಷಿಸಿದರು.

ಕಂದಾಯ ಇಲಾಖೆಯ ಭೂಮಿಯ ಆಡಿಟ್ ನಡೆಸಿ, ನಿವೇಶನ ರಹಿತ ಬಡವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸ್ಪಷ್ಟ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.