ಬಾಗಲಕೋಟೆ: ಸುಳ್ಳು ಕೇಸ್ ದಾಖಲಿಸುತ್ತೇವೆ ಎಂದು ಬೆದರಿಸಿ ವ್ಯಕ್ತಿಯೋರ್ವನಿಂದ 1.70 ಲಕ್ಷ ರೂ.ಗಳ ಸುಲಿಗೆಗೆ ಮುಂದಾಗಿದ್ದ ಕೆರೂರು ಠಾಣೆ ಪಿಎಸ್‌ಐ ಭೀಮಪ್ಪ ರಬಕವಿ, ಪೇದೆ ಸಂತೋಷ ಬಿರಾದಾರ ಅವರುಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಾದಾಮಿ ತಾಲೂಕು ಕೆರೂರು ಬಳಿಯ ಬೆಳಗಂಟಿ ಗ್ರಾಮದ ಮುತ್ತಪ್ಪ ಹುಲ್ಲಪ್ಪ ನಾಯ್ಕರ್ ಎಂಬಾತನನ್ನು ಏ.17 ರಂದು ಪೊಲೀಸ್ ಠಾಣೆಗೆ ಆತನ ಬೈಕ್ ಸಹಿತ ಕರೆದೊಯ್ದಿದ್ದ ಪಿಎಸ್‌ಐ ರಬಕವಿ ಹಾಗೂ ಪೇದೆ ಸಂತೋಷ ಬಿರಾದಾರ ಅವರುಗಳು 1.70 ಲಕ್ಷ ರೂಪಾಯಿ ಲಂಚ ನೀಡದಿದ್ದರೆ ಇಸ್ಟೆಟ್ ಹಾಗೂ ಬಡ್ಡಿ ಸಾಲ ದಂಧೆಯಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದರು ಎಂದು ಮುತ್ತಪ್ಪ ನಾಯ್ಕರ್ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದ.
ದೂರು ಆಧರಿಸಿ ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್‌ಪಿ ಎಂ.ಬಿ.ನಂದಗಾಂವಿ, ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುರೇಶ ರೆಡ್ಡಿ, ಇನ್ಸ್ಪೆಕ್ಟರ್‌ಗಳಾದ ಬಿ.ಎ.ಬಿರಾದಾರ, ಎಂ.ಬಿ.ಬಿರಾದಾರ, ಎನ್.ಆರ್.ಖಿಲಾರೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪಿಎಸ್‌ಐ ಭೀಮಪ್ಪ ರಬಕವಿ ಈ ಹಿಂದೆ ಹಲವರನ್ನು ಅನಗತ್ಯ ಥಳಿಸಿ ವಿವಾದಕ್ಕೆ ಕಾರಣವಾಗಿದ್ದರು. ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಈಗ ಲೋಕಾಯುಕ್ತರ ಅತಿಥಿಯಾಗಿದ್ದಾರೆ.























