ಶುಕ್ರವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಕರುನಾಡಿಗೆ ಈಗ ಹೊಸ ಮುಖ್ಯಮಂತ್ರಿ… ಮುಂಗಾರು ಆಗಮನದೊಂದಿಗೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪದಗ್ರಹಣ ಮಾಡಿದ್ದಾರೆ! ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜಕಾರಣದ ಆಳ ಅಗಲ, ತಂತ್ರ-ಪ್ರತಿತಂತ್ರ, ವಾದ-ವಿವಾದ-ವಾಗ್ವಾದಗಳಲ್ಲಿ ಸದಾ ಸುದ್ದಿಯಲ್ಲಿದ್ದ ಡಿ.ಕೆ.ಶಿವಕುಮಾರ್ ತಾನು ಕೂಲಿ ಮಾಡಿ, ಕೂಲಿ ಕೇಳಿದ್ದೇನೆ, ಅದನ್ನೀಗ ಪಡೆದಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಅವರಿಗೆ ಇರುವುದು ಎರಡು ವರ್ಷಗಳು ಮಾತ್ರ. ಎರಡು ವರ್ಷಗಳಲ್ಲಿ ಏನಾದೀತು? ಏನೆಲ್ಲ ಮಾಡುತ್ತೇವೆ ಎಂದು ಐದು- ಹತ್ತು- ಹದಿನೈದು ವರ್ಷಗಳ ಕಾಲ ದೇಶ ರಾಜ್ಯಗಳನ್ನು ಆಳಿದವರೇ ಈಗ ಬಸವಳಿಯುತ್ತಿರುವಾಗ, ಶಿವಕುಮಾರ್ ಎರಡು ವರ್ಷದಲ್ಲಿ ಏನು ಮಾಡಿಯಾರು ಎಂದು ಕೇಳುವುದು ಸಹಜ. ಆದರೆ ಅವರೋ, `ನನ್ನದು ಈಗ ಎರಡು ವರ್ಷ ಮಾತ್ರವಲ್ಲ, ಮುಂದಿನ ಐದು ವರ್ಷ ಕೂಡ ನಮ್ಮದೇ’ ಎಂಬ ವಿಶ್ವಾಸದ ಮಾತು.
ಕರ್ನಾಟಕದ ರಾಜಕಾರಣಿಗಳು ಮತ್ತು ಪ್ರಸಕ್ತ ರಾಜಕೀಯ ಅವಲೋಕಿಸಿದರೆ ಡಿ.ಕೆ.ಶಿವಕುಮಾರ್ ಅವರನ್ನು ಯಾರೂ ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಅವರೇ ಪದಗ್ರಹಣದ ನಂತರ ಹೇಳಿಕೊಂಡಂತೆ, `ನಾನು ಹಳ್ಳಿಯವನೂ ಹೌದು, ರೈತನೂ ಆಗಿದ್ದೆ, ನಿಷ್ಠೆಯನ್ನು ತೋರಿದ್ದೆ, ಸಂಘಟನೆಯನ್ನು ಹಳ್ಳಿಯಿಂದ ಮಾಡಿ, ಸಾಕಷ್ಟು ಸವಾಲು ಎದುರಿಸಿದವ. ಸಂಕಷ್ಟ ಎದುರಿಸಿದವ, ತಿಹಾರ್ ಜೈಲನ್ನು ಕಂಡು ಬಂದವ ನಾನು, ಹೀಗಾಗಿ ಜನತೆಯ ನಾಡಿ ಮಿಡಿತ ಗೊತ್ತು. ಈ ರಾಜ್ಯದ ಜನರ ಬೇಕು ಬೇಡಿಕೆಗಳ ಅರಿವಿದೆ.
ನಾನು ನಿಮಿತ್ತ ಮಾತ್ರ, ರಾಜ್ಯದ ಜನರೇ ನಿಜವಾಗಿ ಮುಖ್ಯಮಂತ್ರಿ’ ಎಂದು ಭಾವನಾತ್ಮಕವಾಗಿ, ಹಾಗೇ ಯಾರಿಗೆ ಈ ಮಾತು ತಟ್ಟಬೇಕಿತ್ತೋ ಅವರಿಗೆ ತಟ್ಟುವಂತೆ ಮಾಡಿ ಕಾರ್ಯಾರಂಭ ಮಾಡಿದ್ದಾರೆ. ಮುಂದಿನ ಚುನಾವಣೆಗೆ ಪಕ್ಷ ಮತ್ತು ರಾಜ್ಯವನ್ನು ಸಜ್ಜಗೊಳಿಸಬೇಕಾದ ಚಾಲೆಂಜ್ ಡಿ.ಕೆ. ಅವರದ್ದು. ಹಾಗಾಗಿಯೇ ಮೊದಲ ಸಂಪುಟ ಸಭೆಯಲ್ಲಿಯೇ ಯುವಕರಿಗೆ, ಜಾತಿಗಳಿಗೆ, ಹಾಗೇ ಗ್ರಾಮಾಂತರ ಭಾಗದ ಜನರ ಬದುಕಿನ ಭದ್ರತೆಯ ಕುರಿತು ಆರು ಯೋಜನೆಗಳನ್ನು ಘೋಷಿಸಿದ್ದಾರೆ.
ಐದು ಗ್ಯಾರಂಟಿಗಳ ಅನುಷ್ಠಾನವನ್ನು ಹಠ ತೊಟ್ಟು ಮಾಡಿರುವ ಸಿದ್ದರಾಮಯ್ಯ ಹಾಗೂ ಅವರ ಉತ್ತರಾಧಿಕಾರಿಯಾದ ಶಿವಕುಮಾರ್ ಈಗ ಹೊಸ ಘೋಷಣೆಗಳ ಅನುಷ್ಠಾನಕ್ಕೆ ಜವಾಬ್ದಾರರಾಗುತ್ತಾರೆ. ಪ್ರಥಮ ಸಂಪುಟ ರಚನೆಯಲ್ಲೇ ಶಿವಕುಮಾರ್ ತಂಡದಲ್ಲಿ ಕಣ್ಣಿಗೆ ಕಾಣುವಷ್ಟು ಪ್ರಾದೇಶಿಕ ಬೇಧ ಭಾವ ಕಾಣುವಂತಾಗಿದೆ.
ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಪ್ಪಳ, ರಾಯಚೂರು, ಬಾಗಲಕೋಟೆ ಇತ್ಯಾದಿ ಉತ್ತರ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಈಗಲೇ ಪ್ರಾತಿನಿಧ್ಯ ದೊರೆಯಬೇಕಿತ್ತು. ಆದರೆ ಪ್ರಥಮ ಸಂಪುಟದಲ್ಲಿ ಈ ಭಾಗವನ್ನು ಕಡೆಗಣಿಸಿದ್ದು ಏಕೆ ಎನ್ನುವ ಪ್ರಶ್ನೆ ಈಗಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ, ವಿಶೇಷವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಎದ್ದಿದೆ.
ಈ ರಾಜ್ಯ ಕಂಡ 24 ಮುಖ್ಯಮಂತ್ರಿಗಳಲ್ಲಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದವರಾರು? ಈ ಕುರಿತು ವಿಶ್ಲೇಷಣೆಯಾಗಬೇಕಾಗುತ್ತದೇನೋ!? ಡಿ.ಕೆ.ಶಿವಕುಮಾರ್ಸಮಗ್ರ ಕರ್ನಾಟಕದ ಮುಖ್ಯಮಂತ್ರಿ’ಯಾಗುತ್ತಾರಾ? ಆಡಳಿತಾತ್ಮಕವಾಗಿ ಕರ್ನಾಟಕದ ಮುಖ್ಯಮಂತ್ರಿ ಹೌದು. ಆದರೆ ದಕ್ಷಿಣ, ಉತ್ತರ, ಕಲ್ಯಾಣ, ಕರಾವಳಿ ಎಲ್ಲ ಭಾಗದ ಜನರ ಒಲವು ಪ್ರೀತಿ ಗಳಿಸುವ, ಎಲ್ಲ ಸಮಸ್ಯೆಗಳೂ ತಮ್ಮವೇ ಎಂದು ತಿಳಿದು ಸ್ಪಂದಿಸುವುದು ಈಗಿನ ಅಗತ್ಯ. ಇಂಥ ಸಿಎಂ ಈಗ ಬೇಕಾಗಿದ್ದಾರೆ!!
ಈ ಹಿಂದಿನ ಎಲ್ಲ ಮುಖ್ಯಮಂತ್ರಿಗಳ ಕಾರ್ಯವೈಖರಿ, ಅಭಿವೃದ್ಧಿ, ನೀತಿ ಧೋರಣೆ, ಸಮಗ್ರ ನೋಟ ಪರಿಗಣಿಸಿದರೂ, ರಾಜ್ಯವನ್ನು ಸಮಗ್ರ ದೃಷ್ಟಿಕೋನದಿಂದ ಕಂಡವರು ಯಾರೆಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ. ಮೈಸೂರು ಕರ್ನಾಟಕ ನಾಮಕರಣಕ್ಕಿಂತ ಮೊದಲು ಮುಖ್ಯಮಂತ್ರಿಗಳಿಗೆ ರಾಜಧಾನಿ ಬೆಂಗಳೂರು ಮತ್ತು ಮೈಸೂರು ಮಾತ್ರ ಕರ್ನಾಟಕವೆಂಬಂತೆ ಕಂಡಿದ್ದವು. ಆ ನಂತರ ಉತ್ತರ ಕರ್ನಾಟಕ ಭಾಗದ ಮೂವರು ಮುಖ್ಯಮಂತ್ರಿಗಳಾದಾಗಲೂ ಬೆಂಗಳೂರು ಮತ್ತು ಆ ಭಾಗಗಳೇ ಹೆಚ್ಚು ಸೆಳೆದಂತಿದ್ದವು.
ಹಾಗಾಗಿಯೇ ಎಂಟು- ಒಂಬತ್ತು-ಹತ್ತು ಸಾರೆ ಈ ಭಾಗದ ಜನರ ಪ್ರತಿನಿಧಿಗಳಾಗಿ, ಮಂತ್ರಿಗಳಾಗಿದ್ದರೂ ಕೂಡ ಉತ್ತರ- ಕಲ್ಯಾಣ, ಕರಾವಳಿ ಮತ್ತು ಮಲೆನಾಡಿನ ಸಮಸ್ಯೆಗಳೂ ಹಾಗೇ ಉಳಿದಿವೆ. ಹಿಂದುಳಿದಿರುವಿಕೆಯೂ ಹಾಗೇ ಇದೆ. ಇಲ್ಲಿನ ಸಮಸ್ಯೆಗಳು ಪರಿಹಾರವಾಗಿಲ್ಲ. ಯೋಜನೆಗಳು ಸರಿಯಾಗಿ ಅನುಷ್ಠಾನವಾಗಿಲ್ಲ!!
1950-60ರ ವರ್ಷಗಳಲ್ಲಿಯ ಶರಾವತಿ ಸಂತ್ರಸ್ತರ ಸಮಸ್ಯೆ, ಹಿಡಕಲ್ ಡ್ಯಾಂ ನಿರಾಶ್ರಿತರ ಸಮಸ್ಯೆ, ಹತ್ತಾರು ರಾಷ್ಟç ರಾಜ್ಯ ಯೋಜನೆಗಳಿಂದ ಸಂತ್ರಸ್ತರಾದವರ ಬದುಕು- ಬವಣೆ, ಕರಾವಳಿ ಮೀನುಗಾರರ ಅಭದ್ರತೆ, ಬಯಲು ನಾಡಿನ ನಿರಂತರ ಬರ, ಇನ್ನೂ ಡಾಂಬರು ಕಾಣದ ನಗರಗಳ ರಸ್ತೆಗಳು, ಚಕ್ಕಡಿ ಓಡದ ಹಳ್ಳಿ ಮಾರ್ಗಗಳು, ಸೇತುವೆಯೇ ಇಲ್ಲದ ಹಳ್ಳ-ಕೊಳ್ಳಗಳು, ವಿದ್ಯುತ್ ಬಲ್ಬ್ ಉರಿಯದ ಹಳ್ಳಿಗಳು, ಮಾರುಕಟ್ಟೆ ದೊರೆಯದೇ ಬೆಳೆ ರಸ್ತೆಗೆ ಎಸೆಯುವ ದುರಂತಗಳು, ಚಿಕಿತ್ಸೆಯೇ ಕಾಣದೇ ಸಾವನ್ನಪ್ಪುವ ಬಸುರಿ-ಬಾಣಂತಿಯರು, ಆಸ್ಪತ್ರೆಗಾಗಿ-ಶಾಲೆಗಾಗಿ ಇನ್ನೂ ಹೋರಾಟ ನಡೆಸುತ್ತಿರುವ ಜನರು… ಬರೀ ಭಾಷಣ, ಅಭಿಮಾನ, ಭಾವನೆಗಳಿಗೆ ಮಾರು ಹೋಗುವ ಮುಗ್ಧ ಜನತೆ, ಗೋವಾ- ಮಹಾರಾಷ್ಟç, ಹೈದರಾಬಾದ್‌ಗಳಿಗೆ ವಲಸೆ ಹೋಗುವುದಂತೂ ನಿರಂತರವಾಗಿ ಮುಂದುವರಿದಿರುವಾಗ ಅಭಿವೃದ್ಧಿ ಮಾನದಂಡ ಯಾವುದು? ಎಂಬತ್ತು ವರ್ಷದ, ಇಪ್ಪತ್ನಾಲ್ಕು ಮುಖ್ಯಮಂತ್ರಿಗಳ ಅವಧಿಯಲ್ಲಿ ನಿರಂತರವಾಗಿ ಮುಂದುವರಿಯುತ್ತಿವೆ.
ಇಡೀ ರಾಜ್ಯದಲ್ಲೇ ಅತೀ ಹೆಚ್ಚು ವಸತಿರಹಿತರು ಇರುವುದು ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ. ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿಗಳಿರುವುದು ಮಲೆನಾಡಿನಲ್ಲಿ. ಆಸ್ಪತ್ರೆಗಾಗಿ ಕಿಲೋ ಮೀಟರ್‌ಗಟ್ಟಲೇ ರೋಗಿಯನ್ನು ಹೊತ್ತು ತರುವ ಪರಿಸ್ಥಿತಿ ಇರುವುದು ಮಲೆನಾಡು ಮತ್ತು ಕರಾವಳಿಯಲ್ಲಿ. ಆಲಮಟ್ಟಿಯಂತಹ ಜಲಾಶಯಗಳಿದ್ದರೂ ಇಲ್ಲಿ ಹೊಲಗಳಿಗೆ ನೀರು ದೊರೆಯುತ್ತಿಲ್ಲ. ತುಂಗಭದ್ರಾ ನದಿ ಹೂಳು ತುಂಬಿ ಸಂಗ್ರಹ ಸಾಮರ್ಥ್ಯವೇ ಕುಗ್ಗಿ ಹೋಗಿದೆ. ಹೂಳೆತ್ತಿ ಅಥವಾ ಪರ್ಯಾಯ ಆಣೆಕಟ್ಟೆ ನಿರ್ಮಿಸಿ ಎಂಬ ಕೂಗು ಮೂರು ದಶಕಗಳಿಂದ ಎಲ್ಲಿತ್ತೋ ಅಲ್ಲಿಯೇ ಉಳಿದಿದೆ.
ಅತೀ ಸುದೀರ್ಘವಾಗಿ ರಾಜ್ಯದ ದಾಖಲೆ ಆಡಳಿತ ನಡೆಸಿದ ಸಿದ್ಧರಾಮಯ್ಯ ಕೂಡ `ಸಮಗ್ರ ಕರ್ನಾಟಕ’ದ ಮುಖ್ಯಮಂತ್ರಿಯಾಗಲಿಲ್ಲ ಎನ್ನುವ ಖೇದ ಕಾಡುತ್ತಿದೆ. ಎಂಟು ವರ್ಷ ಮೀರಿದ ಆಳ್ವಿಕೆಯಲ್ಲಿ ಉತ್ತರ ಕರ್ನಾಟಕದ ಯಾವ ಸಮಸ್ಯೆಗಳು ಬಗೆಹರಿದಿವೆ? ಎಂದು ಪ್ರಶ್ನಿಸುವವರಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಎಂಬಂತೆ ಕಾರ್ಯನಿರ್ವಹಿಸಲು ಪ್ರಯತ್ನಿಸಿದರೂ ಕೂಡ ಅವರ ಪಕ್ಷ ಹಾಗೂ ಅಲ್ಲಿಯ ಆಂತರಿಕ ರಾಜಕಾರಣ ಆಗಗೊಡಲಿಲ್ಲ.
ರಾಮಕೃಷ್ಣ ಹೆಗಡೆ ಅವರಿಗೆ ಹಾಸನ, ಮಂಡ್ಯ, ಕೋಲಾರ ಮಂದಿ ಸನಿಹರಾಗಲೇ ಇಲ್ಲ. ದೇವೇಗೌಡರನ್ನು ಮತ್ತು ಕುಮಾರಸ್ವಾಮಿಯವರನ್ನು ಉತ್ತರ ಕರ್ನಾಟಕದ ಮಂದಿ ತಮ್ಮ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಲೇ ಇಲ್ಲ. ಹಾಗೆ ಜನರ ಮನ ಗೆಲ್ಲಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಗ್ರಾಮ ವಾಸ್ತವ್ಯವನ್ನು ಈ ಭಾಗದಲ್ಲಿಯೇ ಹೆಚ್ಚಾಗ ನಡೆಸಿದ್ದರು.. ಸೋಮಪ್ಪ ಬೊಮ್ಮಾಯಿ, ಬಂಗಾರಪ್ಪ, ವೀರಪ್ಪ ಮೊಯ್ಲಿ, ಜೆ.ಎಚ್.ಪಟೇಲ್, ಧರ್ಮಸಿಂಗ್, ಸದಾನಂದ ಗೌಡ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಎಲ್ಲರೂ ಮುಖ್ಯಮಂತ್ರಿಗಳಾದರು ಎನ್ನುವುದು ಸಮಾಧಾನವಷ್ಟೇ… ಹೊರತು ಅವರ ಕಾಲಘಟ್ಟದಲ್ಲಿ ಈ ಭಾಗಕ್ಕೆ ನೆನಪಿಸುವಂಥದ್ದು ಯಾವುದೂ ಆಗಿಲ್ಲ.
ತೊಂಬತ್ತೈದರ ಪೂರ್ವದಲ್ಲಿ ಕರ್ನಾಟಕದ ಸಮಸ್ಯೆ ಎಂದರೆ, ಬೆಂಗಳೂರು ಹಾಗೂ ಮೈಸೂರು ಪ್ರಾಂತ್ಯಗಳದ್ದು ಎನ್ನುವಷ್ಟಕ್ಕೇ ಸೀಮಿತವಾಗಿತ್ತು. ಎಸ್.ಎಂ.ಕೃಷ್ಣ ಸರ್ಕಾರವಂತೂ ರಾಜ್ಯಕ್ಕೆ ಹೊಸ ದಿಕ್ಕು ದೆಸೆ ಕೊಡಲು ಯತ್ನಿಸಿತೆಂದರೂ ಕೂಡ ಬರೀ ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳು ಅಭಿವೃದ್ಧಿಗಳೇ ಕಂಡವು. ಆಗೊಂದು ಪ್ರಶ್ನೆ ಎದ್ದಿತ್ತು. ಏಕೆ ಉತ್ತರ ಕರ್ನಾಟಕ ನಿರ್ಲಕ್ಷಿಸುತ್ತೀರಿ ಎಂದು ಕೇಳಿದರೆ, `ನಿಮ್ಮ ಪ್ರತಿನಿಧಿಗಳು ಧ್ವನಿ ಎತ್ತುವುದಿಲ್ಲ; ಮಗು ಅಳದಿದ್ದರೆ ತಾಯಿಗೆ ಹಸಿವು ಹೇಗೆ ಗೊತ್ತಾಗುತ್ತದೆ?’ ಎಂಬುದೇ ಆ ಮರು ಪ್ರಶ್ನೆ!
ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಯ ಸಮಸ್ಯೆಗಳಿಗೆ ಸ್ಪಂದನೆ ಇಲ್ಲದ ಕಾರಣಕ್ಕೆ ಅಲ್ಲವೇ ನರಗುಂದ ಬಂಡಾಯ ಎದ್ದಿದ್ದು.
ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ಗುರುತಿಸುವಿಕೆಗೆ ಡಾ.ನಂಜುಂಡಪ್ಪ ಅವರನ್ನು ನೇಮಿಸಿದಾಗ ಇಡೀ ರಾಜ್ಯಾದ್ಯಂತ ಸಂಚರಿಸಿದ ಅವರು ನೀಡಿದ ಪ್ರತಿಕ್ರಿಯೆ, `ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಆ ಭಾಗಗಳ ಜನರಿಗೇ ಸಿಗುವುದಿಲ್ಲ; ಬೆಂಗಳೂರಿನಲ್ಲೇ ಇರುತ್ತಾರೆ; ಕ್ಷೇತ್ರಕ್ಕೆ ಆಗಾಗ ಬಂದು ಸುತ್ತಾಡಿ ಹೋಗುವ ಪ್ರವಾಸಿ ತಾಣವನ್ನಾಗಿಸಿಕೊಂಡಿದ್ದಾರೆ. ಬೆಂಗಳೂರು ಅವರಿಗೆ ಮನೆಯಾಗಿದೆ ಎನ್ನುವುದು ಸಾರ್ವಜನಿಕರ ಆರೋಪ’ ಎಂಬುದು. ಎಷ್ಟು ಸತ್ಯವಲ್ಲವೇ?
ಮತ್ತೊಂದು ನಿಜ ಸಂಗತಿ ಎಂದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದರಿಂದ ತುಂಬ ಅಂಜಿ, ಕಂಗಾಲಾಗಿರುವುದು ಬಿಜೆಪಿ. ಶಿವಕುಮಾರ್ ಅವರ ವೇಗ, ತಂತ್ರಗಾರಿಕೆ ಹಾಗೂ ಚಾಣಕ್ಯತನಗಳ ಮುಂದೆ ಬಿಜೆಪಿಗೆ ಮಂಕು ಕವಿದಿದೆ. ಸಿಎಂ ಆಗುವುದಕ್ಕೂ ಮೊದಲು ದೇವೇಗೌಡ, ಯಡಿಯೂರಪ್ಪ ಎಲ್ಲರ ಮನೆಗಳಿಗೆ ಹೋಗಿ ಅವರು ಆಶೀರ್ವಾದ ಪಡೆದುದಿದೆಯಲ್ಲ, ಇದೇ ಹಲವರ ಬಾಯಿ ಮುಚ್ಚಿಸಿದೆ.
ಇಷ್ಟಕ್ಕೂ ಈ ಎಲ್ಲ ಜಿಜ್ಞಾಸೆ-ಪ್ರಶ್ನೆಗಳು ಏಕೆಂದರೆ ಡಿ.ಕೆ.ಶಿವಕುಮಾರ್ ಸಮಗ್ರ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎನ್ನುವುದಕ್ಕಷ್ಟೇ. ಅವರಲ್ಲಿ ತಾಕತ್ತು, ತಂತ್ರಗಾರಿಕೆ ಹಾಗೂ ರಚನಾತ್ಮಕ ಧಾಷ್ಟö್ರ್ಯಗಳಿವೆ. ಇವುಗಳನ್ನು ಒಳಗೊಂಡು ರಾಮನಗರ, ಸಾತನೂರು, ಕನಕಪುರದ ಸಿಎಂ ತಾವಲ್ಲ ಎಂಬುದನ್ನು ಕೆಲಸದ ಮೂಲಕ ಸಾಧಿಸಿ ತೋರಿಸಲು ಇತಿಹಾಸದ ಪುಟಗಳು ಅವರ ಮುಂದಿವೆ.
ಆದ್ದರಿಂದಲೇ ಕೇವಲ ಬೆಂಗಳೂರು ಮುಖ್ಯಮಂತ್ರಿಯಾಗಬೇಡಿ. ಸಮಗ್ರ ಕರ್ನಾಟಕ ನಿಮ್ಮದೆನ್ನುವುದನ್ನು ಮರೆಯಬೇಡಿ; ಬೆಂಗಳೂರು ಆಚೆಯ ಪ್ರಾಂತ್ಯಗಳ ಜನ, ವಿಶೇಷವಾಗಿ ಮಧ್ಯ, ಕಿತ್ತೂರು ಮತ್ತು ಕಲ್ಯಾಣ ಪ್ರಾಂತ್ಯಗಳ ಜನ ಹಲವು ಸಂಕಷ್ಟಗಳಿAದ ಪರಿತಪಿಸುತ್ತಿದ್ದಾರೆ… ಇವರ ಕೂಗು ಆಲಿಸುವುದು ತಮ್ಮ ಮೊದಲ ಆದ್ಯತೆಯಾಗಲಿ… ಎಂದು !!















