SK Home Ad
Home ಅಂಕಣ ಅಂಕಣ ಬರಹ | ʻಜೋಡೋ ಸಂಘʼ ಆಗದಿರಲಿ ಮತ್ತೊಂದು ʻಬ್ರಿಗೇಡ್ʼ!

ಅಂಕಣ ಬರಹ | ʻಜೋಡೋ ಸಂಘʼ ಆಗದಿರಲಿ ಮತ್ತೊಂದು ʻಬ್ರಿಗೇಡ್ʼ!

0
2

1970-80ರ ಕಾಲಘಟ್ಟ ದೇಶದ ರಾಜಕೀಯದಲ್ಲಿ ಸದಾ ಸಂಘರ್ಷ, ಏಳು ಬೀಳು, ಹೋರಾಟದ ಸಮಯ. ಭಾರತ- ಪಾಕ್ ಯುದ್ಧ, ಆ ನಂತರ ತುರ್ತು ಪರಿಸ್ಥಿತಿ, ಹೊಸ ಪಕ್ಷಗಳ ಉದಯ, ಹಾಗೇ ಕಾಂಗ್ರೆಸ್ಸೇತರ ಮೊಟ್ಟ ಮೊದಲ ಸರ್ಕಾರ ದೇಶದಲ್ಲಿ ಬಂದಿದ್ದ ಹೊತ್ತದು. ʻಇಂದಿರಾ ಎಂದರೆ ಇಂಡಿಯಾʼ, ʻಇಂಡಿಯಾ ಎಂದರೆ ಇಂದಿರಾʼ ಎಂದು ವಿಶ್ವದಲ್ಲೇ ಪ್ರಚಲಿತವಾಗಿದ್ದ ಸಮಯದಲ್ಲಿ ಕರ್ನಾಟಕದಲ್ಲಿ ಇದ್ದದ್ದು ಡಿ. ದೇವರಾಜ ಅರಸು ಅವರ ಸರ್ಕಾರ.

ಆಗಲೇ ಕಾಂಗ್ರೆಸ್ಸಿಗೆ ಅನ್ನಿಸಿದ್ದು, ಇಂದಿರಾ ಗಾಂಧಿ ಹಾಗೂ ಅರಸು ಅವರ ಕೈ ಬಲಪಡಿಸಬೇಕು. ಅವರ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಬೇಕು. ಹಾಗೇ ಅವರಿಬ್ಬರ ಘನತೆ, ಅಧಿಕಾರ ಮತ್ತು ರಾಜಕೀಯ ಬಲ ಸಂರಕ್ಷಿಸಿ ಹೆಚ್ಚಿಸಬೇಕು ಎಂದು. ಈ ಉದ್ದೇಶಕ್ಕೆ ಹುಟ್ಟಿಕೊಂಡಿದ್ದೇ ʻಇಂದಿರಾ ಬ್ರಿಗೇಡ್ʼ !

ದೇವರಾಜ ಅರಸು ಅವರ ಅಳಿಯ, ಕುರುಬ ಸಮುದಾಯದ ಡಾ.ಎಂ.ಡಿ.ನಟರಾಜ್ ಈ ʻಇಂದಿರಾ ಬ್ರಿಗೇಡ್ʼ ಸಂಸ್ಥಾಪಕ. ಇಂದಿರಾ ಬ್ರಿಗೇಡ್ ಅಂದಿನ ಸೋವಿಯತ್ ಒಕ್ಕೂಟದ ʻಕೆಜಿಬಿʼ ರೀತಿ ಕಾರ್ಯನಿರ್ವಹಿಸುತ್ತದೆ; ಹಾಗೇ ಶೋಷಿತ ಸಮುದಾಯಕ್ಕೆ ಧ್ವನಿ ನೀಡುತ್ತದೆ ಎಂದು ಘೋಷಿಸಿ ಮುಂದುವರಿದರು.

ಪ್ರಬಲ ಸಮುದಾಯದ ಎದಿರು, ಕಾಂಗ್ರೆಸ್ ಪಕ್ಷದ ವಿರೋಧಿಗಳನ್ನು ಮಟ್ಟಹಾಕಿ, ಹಿಂದುಳಿದವರ ಪರವಾಗಿ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸುವುದು ಬ್ರಿಗೇಡ್ ಮುಖ್ಯ ಉದ್ದೇಶ ಎಂದು ಆಗ ಘೋಷಿಸಿಕೊಳ್ಳಲಾಗಿತ್ತು. ಬ್ರಿಗೇಡ್ ಆರಂಭವಾದಾಗ ಯೂತ್ ಕಾಂಗ್ರೆಸ್ (ಕಾಂಗ್ರೆಸ್ ಯುವ ಘಟಕ) ಕೂಡ ಅಸ್ತಿತ್ವದಲ್ಲಿತ್ತು. ವಿದ್ಯಾರ್ಥಿ ಸಂಘಟನೆ (ಎನ್‌ಎಸ್‌ಯುಐ) ಕೂಡ ಇತ್ತು.

ಆದರೆ ಕೆಲವೇ ನಿರ್ದಿಷ್ಟ ಹಿತಾಸಕ್ತಿಯೊಂದಿಗೆ 1974ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಇಂದಿರಾ ಬ್ರಿಗೇಡ್‌ಅನ್ನು ಸ್ವತಃ ಇಂದಿರಾ ಗಾಂಧಿ ಕೂಡ ಮೆಚ್ಚಿಕೊಂಡಿದ್ದರು. ಆ ನಂತರ ತುರ್ತು ಪರಿಸ್ಥಿತಿ. ಆಗಲೇ ಕರ್ನಾಟಕದ ರಾಜಕಾರಣದಲ್ಲಿ ಇಂದಿರಾ ಪಡೆ, ಅರಸು ಪಡೆ ಮತ್ತು ಸಂಜಯ್ ಗಾಂಧಿ ನಿಕಟವರ್ತಿಗಳಾದ ಎಫ್.ಎಂ.ಖಾನ್, ಗುಂಡೂರಾವ್ ಪಡೆ ಆರಂಭವಾದದ್ದು.

ಇಂದಿರಾ ಬ್ರಿಗೇಡ್‌ಗೆ ಘಟಾನುಘಟಿ ನಾಯಕರ ಮಕ್ಕಳು ಇದಕ್ಕೆ ಸೇರ್ಪಡೆಗೊಂಡರು. ಕರ್ನಾಟಕ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಇತ್ಯಾದಿಗಳ ಆಚರಣೆಗಳಿಗೆ ಮಹತ್ವ ಕೊಡತೊಡಗಿದರು ಇವರೆಲ್ಲ. ನಾಡು ನುಡಿಯ ರಕ್ಷಕರು, ಶೋಷಿತರ ಧ್ವನಿ ಎಂದು ಸಾರಿಕೊಂಡರು.

ಆದರೆ ಇದು ನಿರೀಕ್ಷಿತ ಪರಿಣಾಮ ಕಾಣದಾಗ, ಭೂಗತ ಲೋಕದಲ್ಲಿ ಕುಪ್ರಸಿದ್ಧರಾಗಿದ್ದ ಎಂ.ಪಿ. ಜಯರಾಜ್‌ಗೆ ಇಂದಿರಾ ಬ್ರಿಗೇಡ್‌ನ ಹಿಡಿತ ಒಪ್ಪಿಸಿದರು. ಆಗಲೇ ಬೆಂಗಳೂರಿನ ಬೀದಿಗಳಲ್ಲಿ ಮೋಟರ್ ಬೈಕ್‌ಗಳ ಕರ್ಕಶ ಶಬ್ದ, ಬೀದಿ- ಬಡಾವಣೆಗಳಲ್ಲಿ ರೌಡಿಸಂ, ಇಂದಿರಾ-ಅರಸು ಕಾಂಗ್ರೆಸ್ ವಿರೋಧಿ ಧ್ವನಿ ಎತ್ತಿದವರ ಬಗ್ಗು ಬಡಿಯುವಿಕೆ, ರಾಜಕೀಯ ಪ್ರತಿಸ್ಪರ್ಧಿಗಳ ಧ್ವನಿ ಅಡಗಿಸುವಿಕೆ ಎಲ್ಲವೂ ಆರಂಭವಾಯಿತು. ಇಂದಿರಾ ಬ್ರಿಗೇಡ್ ಎಂದರೆ ಭೂಗತ ಪಾತಕ ಲೋಕದ ಕಾರ್ಯಸೂಚಿ ಎನ್ನುವ ಬ್ರ್ಯಾಂಡ್ ಇದಕ್ಕೆ ಮೆತ್ತಿಕೊಂಡು ಬಿಟ್ಟಿತು.

ಅರಸು – ಇಂದಿರಾ ಅವರ ಹಿತಾಸಕ್ತಿ ರಕ್ಷಣೆಯಾಗಷ್ಟೇ ಈ ಬ್ರಿಗೇಡ್ ಉಳಿಯಲಿಲ್ಲ. ಬದಲು ಲ್ಯಾಂಡ್ ಗ್ರ್ಯಾಬಿಂಗ್, ಸರ್ಕಾರದ ಮಟ್ಟದಲ್ಲಿ ಡೀಲ್‌ಗಳು, ಮಾಫಿಯಾ ಇತ್ಯಾದಿಗಳಿಗೆ ಬ್ರಿಗೇಡ್‌ನ ಚಟುವಟಿಕೆ ವಿಸ್ತರಿಸಿಕೊಂಡಿತು.

ಎಮರ್ಜೆನ್ಸಿ ನಂತರದ ಲೋಕಸಭಾ ಚುನಾವಣೆಯಲ್ಲಿ ದೇಶದ ಇತರೆಡೆ ಹೊಸ ಗಾಳಿ ಬೀಸಿ, ಜನತಾ ಪಕ್ಷ ಅಸ್ತಿತ್ವಕ್ಕೆ ಬಂದರೆ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್, 28ರಲ್ಲಿ 26 ಲೋಕಸಭಾ ಸ್ಥಾನಗಳಲ್ಲಿ ಗೆದ್ದಿತು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅರಸು ನೇತೃತ್ವದ ಕಾಂಗ್ರೆಸ್ ಪುನರಾಯ್ಕೆಯಾಯಿತು. ಅಷ್ಟರಲ್ಲಾಗಲೇ ಇಂದಿರಾ ಬ್ರಿಗೇಡ್ ಅವಾಂತರ ಮೇರೆ ಮೀರಿ ಮೀರಿತ್ತು. ರೌಡಿಗಳು, ಗ್ಯಾಂಗ್‌ಸ್ಟಾರ್‌ಗಳ ಅಟ್ಟಹಾಸ, ಭೂಗತ ಪಾತಕಿಗಳ ಜೊತೆಗಿನ ನಂಟು ಗೊತ್ತಾಗಿ, ಇದನ್ನು ಬರಖಾಸ್ತು ಮಾಡಿ ಎಂದು ಖುದ್ದು ಇಂದಿರಾ ಗಾಂಧಿಯವರೇ ಹೇಳಬೇಕಾಯಿತು!

ಯಾರ ಹಿತಾಸಕ್ತಿಗಾಗಿ ಇಂದಿರಾ ಬ್ರಿಗೇಡ್ ಅಸ್ತಿತ್ವಕ್ಕೆ ಬಂತೋ, ಅದನ್ನು ಸ್ಥಾಪಿಸಿದವರ ಬಗ್ಗೆ ಅಸಹ್ಯ ಮತ್ತು ಭಯ ಹುಟ್ಟಿಸುವ ಮಟ್ಟಕ್ಕೆ ಬೆಂಗಳೂರಿನ ಮತ್ತು ಇತರೆಡೆಯ ನಗರಗಳಲ್ಲಿ ಪರಿಸ್ಥಿತಿ ನಿರ್ಮಾಣವಾಯಿತು. ಇದರ ದಾನವ ಅವತಾರದಿಂದ ಸಂಸ್ಥಾಪಕರ ವ್ಯಕ್ತಿತ್ವ ಬಲಿ ಪಡೆಯುವ ಮಟ್ಟಕ್ಕೆ ಹೋದದ್ದು ವಿಪರ್ಯಾಸ.

ಈ ಇತಿಹಾಸದ ಕಣ್ಣಲ್ಲಿ ನೋಡುತ್ತ ಮುಂದುವರಿಯೋಣ. ರಾಜಕೀಯವಾಗಿ ಎಲ್ಲ ಪಕ್ಷಗಳೂ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಯುವಪಡೆ, ವಿದ್ಯಾರ್ಥಿ ಪಡೆ, ಮಹಿಳಾ ವಿಂಗ್ ಇತ್ಯಾದಿಗಳನ್ನು ಸೃಷ್ಟಿಸಿಕೊಂಡಿವೆ. ಬಿಜೆಪಿಯ ಎಬಿವಿಪಿ, ಬಿಎಂಎಸ್, ಮಹಿಳಾ ಮೋರ್ಚಾ; ಜನತಾ ಪಕ್ಷದ ಯುವಪಡೆ, ಮಹಿಳಾ ಪಡೆ ಹೇಗೋ ಹಾಗೇ. ನಂತರ ಹುಟ್ಟಿಕೊಂಡಿದ್ದು ಕಿಸಾನ್ ಗುಂಪು. ರಾಜಕೀಯ ನಾಯಕರ ಫಾಲೋವರ್ಸ್‌ಗಳ ಅಭಿಮಾನಿಗಳ ದಂಡು ಶುರುವಾಗಿದೆ. ಸೂಕ್ತ ಸ್ಥಾನಮಾನ ನೀಡಿ, ಭವಿಷ್ಯತ್ತಿನ ನಾಯಕರನ್ನು ಸೃಷ್ಟಿಸುವುದು ಇವುಗಳ ಉದ್ದೇಶ ಎನ್ನುವುದು ನಿಜ. ಆದರೆ ಸರಿಯಾದ ಮಾರ್ಗದರ್ಶನ, ನಿಯಂತ್ರಣ, ಜನಪರ ಧೋರಣೆ, ಜನಮನದ ಕಷ್ಟ ನಷ್ಟ ಅರಿಯದವರಿಂದ ಏನಾದೀತು ಎನ್ನುವುದಕ್ಕೆ ಇಂದಿರಾ ಬ್ರಿಗೇಡ್ ಉದಾಹರಣೆ.

ಈ ಮಾತನ್ನು ಈಗೇಕೆ ಪ್ರಸ್ತಾಪಿಸುತ್ತಿರುವೆನೆಂದರೆ, ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹತ್ತು ಸಾವಿರ ʻಭಾರತ್ ಜೋಡೋ ಯುವ ಸಂಘʼಗಳ ಸ್ಥಾಪನೆ ಮಾಡುವುದಾಗಿ ಅಧಿಕಾರ ಪಡೆದ ದಿನವೇ ಘೋಷಣೆ ಮಾಡಿದ್ದರು. ಈಗ ಅದನ್ನು ಸಾಕಾರಗೊಳಿಸಿ, ಒಂದು ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.

ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಭಾರತ್ ಜೋಡೋ ಯುವ ಸಂಘ, ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ; ಇದುವೇ ಸಂಘ ಸ್ಥಾಪನೆಯ ಮೂಲ ಉದ್ದೇಶ ಎಂದು ಸರ್ಕಾರ ತಿಳಿಸಿದೆ. ಪ್ರತಿ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ನೀಡುವ ಭರವಸೆ ದೊರಕಿದೆ. ಕ್ರೀಡೆ, ಫಿಟ್‌ನೆಸ್, ಪರಿಸರ ಸಂರಕಣೆ, ಯುವ ಸಬಲೀಕರಣ ಚಟುವಟಿಕೆಗಳಲ್ಲಿ ಗ್ರಾಮೀಣ ಯುವಕರನ್ನು ತೊಡಗಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ಬಹಳ ಸೂಕ್ಷ್ಮ ಮತ್ತು ಮುನ್ನೋಟದ ಕಾರ್ಯಕ್ಕೆ ಡಿ.ಕೆ. ಶಿವಕುಮಾರ್ ʻಭಾರತ್ ಜೋಡೋ ಯುವ ಸಂಘʼಗಳ ಸ್ಥಾಪನೆಯ ಕೈ ಹಾಕಿದ್ದಾರೆ. 1997ರ ನಂತರ ಹುಟ್ಟಿದ ಜೆನ್-ಜಿ ಈಗ ಗ್ರಾಮಗಳನ್ನು ಬಿಟ್ಟು ನಗರ ಸೇರಿದ್ದಾರೆ. ರಾಜಕೀಯ- ಸಾಮಾಜಿಕ ಆಸಕ್ತಿಯನ್ನು ಈ ಪಡೆ ಕಳೆದುಕೊಂಡು ಉದ್ಯೋಗ, ದುಡಿಮೆಯನ್ನು ಅರಸುತ್ತ ಕೈಗೆ ಕೆಲಸ ಕೊಡಿ, ನಾವು ಅರ್ಹರಿದ್ದೇವೆ ಎಂದು ಧ್ವನಿ ಏರಿಸಿ ಹೇಳುತ್ತಿದೆ. ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳೆಂಬಂತಾಗಿರುವಾಗ, ಯುವ ಪಡೆಯನ್ನು ಹಳ್ಳಿಗಳಲ್ಲಿ ಹಿಡಿದಿಡುವುದು ದೊಡ್ಡ ಸವಾಲು.

ಮೂಲಭೂತ ಸೌಕರ್ಯ, ಅದರೊಟ್ಟಿಗೆ ಭೂಮಿ, ತೋಟ, ಹೈನುಗಾರಿಕೆ, ಗುಡಿ ಕೈಗಾರಿಕೆಗಳು ಅವನತಿಯತ್ತ ಸಾಗುತ್ತಿರುವಾಗ, ಯುವಕರು ಈಗ ಹಳ್ಳಿಗಳ ಬದುಕಿಗೆ ಸಹಜವಾಗಿ ವಿಮುಖರಾಗಿದ್ದಾರೆ. ಉತ್ಪಾದನೆ ಕಡಿಮೆಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಯುವ ಜನಾಂಗಕ್ಕೆ, ಜೆನ್-ಜಿಗಳಿಗೆ ಗ್ರಾಮೀಣ ಬದುಕು ಸಹನೀಯವಾಗಿಸುವ ರೀತಿಯಲ್ಲಿ ಭಾರತ್ ಜೋಡೋ ಯುವ ಸಂಘಟನೆ ರೂಪುಗೊಳ್ಳಬೇಕಾಗಿದೆ.

ಎಲ್ಲರೂ ಒಪ್ಪಿಕೊಳ್ಳಬೇಕಾದದ್ದೇನೆಂದರೆ, ಜೆನ್-ಜಿ ರಾಜಕೀಯದಿಂದ ಮತ್ತು ಇತಿಹಾಸದ ಅಧ್ಯಯನ, ಸಾಮಾಜಿಕ ಸಂಬಂಧಗಳಿಂದ ಅನಕ್ಷರಸ್ಥರಾಗುತ್ತಿದ್ದಾರೆ. ಈ ಅಂಶವನ್ನು ಸರಿಪಡಿಸುವುದು ಡಿಕೆಶಿ ಭಾರತ್ ಜೋಡೋ ಸ್ಥಾಪನೆಯ ಒಂದು ಉದ್ದೇಶ ಒಂದಾದರೆ, ಯುವಕರನ್ನು ಆಕರ್ಷಿಸಿ, ಕಾಂಗ್ರೆಸ್ ಪಕ್ಷ ಸಂಘಟಿಸುವುದು ಇನ್ನೊಂದು. ಎನ್‌ಎಸ್‌ಯುಐ, ಕಾಂಗ್ರೆಸ್ ಯುವ ಘಟಕ, ಇಂಟಕ್ ಎಲ್ಲವೂ ಯುವಕರ ಆಕರ್ಷಣೆಯಲ್ಲಿ ಈಗ ಸೋತು ಹೋಗಿವೆ.

ಕಳೆದ ಹತ್ತು ವರ್ಷಗಳ ಕಾಲ ಮೋದಿ ಹವಾ, ಆ ನಂತರದ ದಿನಗಳಲ್ಲಿ ಭ್ರಮನಿಸರನಗೊಂಡರೂ ಪರ್ಯಾಯವಿಲ್ಲದ ಸ್ಥಿತಿ. ರಾಜಕೀಯವೇ ಬೇಡ. ರಾಜಕಾರಣಿಗಳೇ ಇಷ್ಟು ಎನ್ನುವ ಧೋರಣೆಗೆ ಜೆನ್-ಜಿ ಬಂದು ಬಿಟ್ಟಿದ್ದಾರೆ. ಜಾಲತಾಣ ಮತ್ತು ವಾಟ್ಸಪ್- ಸೋಷಿಯಲ್ ಮೀಡಿಯಾ ಲೋಕದಲ್ಲೇ ಕಾಲಹರಣವಾಗುತ್ತಿರುವಾಗ ಭಾರತ್ ಜೋಡೋ ಸಂಘಟನೆ ಡಿಕೆಶಿ ಪಡೆಗೆ ಅಲ್ಪವಾದರೂ ಟಾನಿಕ್ ನೀಡಬಹುದೇನೋ ಎನ್ನುವ ಆಶಯ ಸರ್ಕಾರದ್ದು.

ಇರುವ ಕಳಕಳಿ, ಭಯ ಮತ್ತು ಕಾಳಜಿ ಏನೆಂದರೆ ಇಂದಿರಾ ಬ್ರಿಗೇಡ್ ರೀತಿ ಎಲ್ಲ ಗ್ರಾಮಗಳಲ್ಲೂ ಬಲಾಢ್ಯರ ಮೇಲಾಟ, ತೋಳ್ಬಲಗಳ ಸಂಘಟನೆಯಾಗದಿರಲಿ ಎಂದಷ್ಟೇ. ಸರ್ಕಾರಿ ಅನುದಾನದಲ್ಲೇ ಭಾರತ್ ಜೋಡೋ ಸ್ಥಾಪನೆಯಾದರೂ ಕೂಡ ಈಗಾಗಲೇ ಇರುವ ಯುವ ಸಂಘಟನೆಗಳು, ಯುವ ಸಾಂಸ್ಕೃತಿಕ ಕೇಂದ್ರಗಳು ಮತ್ತು ಇವನ್ನು ಹಿಡಿತದಲ್ಲಿಟ್ಟುಕೊಂಡವರಿಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ಹುಟ್ಟಿದಾಗ ಸಂಘರ್ಷ ಶುರುವಾಗುವ ಅಪಾಯಗಳೂ ಇವೆ.

ಈ ಎಲ್ಲ ಹಿನ್ನೆಲೆಯಲ್ಲಿ ʻಭಾರತ್ ಜೋಡೋʼ ಒಡೆದ ಯುವಕರ ಮನಸ್ಸುಗಳು ಪರಸ್ಪರ ಸಮೀಪ ಬರುವಂತೆ, ಒಂದಾಗಿಸುವಂತೆ ಕಾರ್ಯ ಮಾಡಿದರೆ ಎಲ್ಲರಿಗೂ ಚೆನ್ನ. ಎಲ್ಲಕ್ಕೂ ಚೆನ್ನ! ಭಾರತ್ ಜೋಡೋ ಸಂಘದಲ್ಲಿ ಅಪರಾ ತಪರಾ, ಸಂಘರ್ಷ, ರಾಜಕೀಯ ಕೆಸರೆರೆಚಾಟ, ಅಪರಾಧಿಗಳ ಕೂಟ ಇವೆಲ್ಲ ಸುದ್ದಿಗಳು ಹುಟ್ಟುವ ಕಾಲ ಬರಬಾರದು ಎಂದರೆ ಸಿಎಂ ಡಿಕೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಾರಂಭದಲ್ಲೇ ರೂಪಿಸಬೇಕು. ಬ್ರಿಗೇಡ್ ಇತಿಹಾಸವನ್ನು ಹಾಗೂ ಇದರೊಂದಿಗೆ ಸಾಗಿ ದಶಕಗಳ ಕಾಲ ಪಾತಕ ಲೋಕ ಮೆರೆದುದನ್ನು ಮುಖ್ಯಮಂತ್ರಿಗಳು ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದ ಈ ನಿರೀಕ್ಷೆ!!