ವಿಚಿತ್ರ ಎಂದರೆ, ಹಿರಿಯರನೇಕರಿಗೆ ಮಂತ್ರಿಯಾಗುವುದು ತಮ್ಮ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸುತ್ತಿದ್ದಾರೆ. ಈಗ ಸಂಪುಟದಿಂದ ಹೊರಗುಳಿದವರ ವಾದ ಕೂಡಾ ಅದೇ. `ನಮ್ಮನ್ನು ಮಂತ್ರಿ ಮಾಡದೆ ಕಡೆಗಣಿಸಿದರೆ ಹೇಗೆ? ಇದು ಎಚ್ಚರಿಕೆ ಗಂಟೆ.. ಎಂಬುದು ಅವರ ವಾದ. ಕೆಲವರ ಹಿಂದೆ ಒಂದಿಷ್ಟು ಶಾಸಕರಿರಬಹುದು.
1983… ಆಗ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯ. ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿರಂಗ ಸಂಯುಕ್ತವಾಗಿ ಭಾಜಪ ಬಾಹ್ಯ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ರಚನೆಗೊಂಡಿತ್ತಾಗ!
ವೈಚಾರಿಕ ಮತ್ತು ಜನಪರ ಕಾಳಜಿಯ ಅಬ್ದುಲ್ ನಜೀರ್‌ಸಾಬ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸಿ ಅವರ ಅಭಿಪ್ರಾಯವನ್ನು ಕೇಳಿದಾಗ, `ನೀವು ನನ್ನನ್ನು ಮಂತ್ರಿ ಮಾಡುತ್ತೀರಿ ಎಂದಾದರೆ ನನಗೆ ಬೇಕಾದ ಖಾತೆಯನ್ನೇ ನೀಡಿದರೆ ಒಪ್ಪುತ್ತೇನೆ; ನನಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಕೊಡಿ’ ಎಂದು ಮನವಿ ಮಾಡಿಕೊಂಡಿದ್ದರು.
ಗ್ರಾಮೀಣಾಭಿವೃದ್ಧಿ ಆಗ ಯಾರಿಗೂ ಬೇಡದ ಖಾತೆ. ಇದಕ್ಕೆ ಹಣವೂ ಇಲ್ಲ. ಕೆಲಸ ಮಾಡುವುದು, ಮಾಡಿಸುವುದು ಕಷ್ಟ. ಅದನ್ನು ನಜೀರ್‌ಸಾಬ್ ಅಪೇಕ್ಷಿಸಿದ್ದೇಕೆ? ಎಂದು ನಾಯಕರು ಆಶ್ಚರ್ಯಪಟ್ಟರು. ಅದೇ ಖಾತೆಯಲ್ಲಿ ನಜೀರ್‌ಸಾಬ್ ಹೇಗೆ ಅದ್ಭುತ ಕೆಲಸ ಮಾಡಿದರೆಂದರೆ, ನೀರಸಾಬ್ ಎಂದು ಖ್ಯಾತಿ ಗಳಿಸಿದರು. ಗ್ರಾಮೀಣ ಜನರ ಬದುಕಿಗೆ ಹೊಸ ಭಾಷ್ಯ ಬರೆದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದೇಶಕ್ಕೆ ಮಾದರಿಯಾಗಿ ರೂಪಿಸಿದರು.
ಅಧಿಕಾರ ವಿಕೇಂದ್ರೀಕರಣವನ್ನು ಅಕ್ಷರಶಃ ಜಾರಿಗೊಳಿಸುವಲ್ಲಿ ಅವರ ಪಾತ್ರ ಪ್ರಧಾನವಾಗಿತ್ತು. ಉತ್ತಮರಿಗೆ ಆಯುಷ್ಯ ಕಡಿಮೆ ಎನ್ನುತ್ತಾರಲ್ಲ ಹಾಗೆ ನಜೀರ್‌ಸಾಬ್ ತುಂಬ ಅಸ್ವಸ್ಥರಾಗಿ ಕೊನೇ ಹಂತದಲ್ಲಿದ್ದಾಗ ಅವರನ್ನು ಮಾತನಾಡಿಸಲು ಅಂದಿನ ಸಿಎಂ ಎಸ್.ಆರ್.ಬೊಮ್ಮಾಯಿ ಹೋದರೆ, ತಮ್ಮ ವೈಯಕ್ತಿಕ ಕೌಟುಂಬಿಕ ಮತ್ತು ಆರ್ಥಿಕ ತೊಂದರೆಗಳನ್ನು ಬದಿಗಿರಿಸಿ, ಪ್ರತಿ ತಾಲ್ಲೂಕಿಗೆ ಒಂದು ಸಾವಿರ ಮನೆ ನಿರ್ಮಿಸಿಕೊಡುವ ಕಡತ ಸಿದ್ಧಪಡಿಸಿರುವೆ.
ಇದಕ್ಕೆ ಒಂದಿಷ್ಟು ಹಣ ಬಿಡುಗಡೆ ಮಾಡಿ ಕೆಲಸ ಆರಂಭಿಸಿ ಎಂದರೇ ವಿನಾ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಲೇ ಇಲ್ಲ!! ಹಾಗಿದ್ದರು ನಜೀರ್‌ಸಾಬ್… ರಾಜ್ಯ ಮರೆಯದ ಮಂತ್ರಿ. ಇದೇ ಅಂದಿನ ಹೆಗಡೆ ಜನತಾ ಸರ್ಕಾರದಲ್ಲಿ ರಮೇಶ ಜಿಗಜಿಣಗಿ ಅವರಿಗೆ ಗೃಹ ಖಾತೆ ಸಚಿವರನ್ನಾಗಿಸಲಾಗಿತ್ತು. ಅಂತಹ ಪ್ರಬಲ ಖಾತೆ, ಈಗ ತಾನೇ ಆರಿಸಿ ಬಂದ (ಪಿ.ಎಸ್‌ಐ ಪರೀಕ್ಷೆಯಲ್ಲಿ ಫೇಲ್ ಆಗಿದ್ದವರು) ಜಿಗಜಿಣಗಿ ಅವರಿಗೆ ಏಕೆ ಎಂಬ ಅಸಮಾಧಾನ ಹಲವು ಹಿರಿಯರಲ್ಲಿತ್ತು. ತಪ್ಪೇನು?’ ಎಂದು ಸಮರ್ಥಿಸಿಕೊಂಡಿದ್ದರು ಹೆಗಡೆ.
ಒಬ್ಬ ದಲಿತ ಜನಪ್ರತಿನಿಧಿಗೂ ಕೂಡ ಅಂಜಿಕೆ, ಕೀಳರಿಮೆ ಇರುತ್ತವೆ. ಹಿರಿಯ ಪೊಲೀಸ್ ಅಧಿಕಾರಿಗಳು ಜಿಗಜಿಣಗಿಯವರಿಗೆ ಸೆಲ್ಯೂಟ್ ಮಾಡಿದಾಗ, ಅವರ ಸಹಿಗೆ ಮಹತ್ವ ಬಂದಾಗ ಧೈರ್ಯ, ಸ್ಥೈರ್ಯ ಜೊತೆಗೆ ಇಡೀ ಸಮುದಾಯಕ್ಕೆ ಆತ್ಮ ವಿಶ್ವಾಸ ಬರುತ್ತದೆ’ ಎಂದು ಟೀಕಾಕಾರರನ್ನು ಪ್ರತಿಯಾಗಿ ಪ್ರಶ್ನಿಸಿದ್ದರು.
ಆ ನಂತರ ಜಿಗಜಿಣಗಿ ಮೂರು ಸಾರೆ ಶಾಸಕರಾಗಿ ರಾಜ್ಯದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದರು. ನಿರಂತರ ಏಳು ಬಾರಿ. ಸಂಸದರಾದರು, ಒಮ್ಮೆ ಕೇಂದ್ರ ಸಚಿವರೂ ಆದರು. ದಲಿತ ನಾಯಕರಾಗಿ, ಮುಕ್ತ ಹೃದಯದಿಂದ ಎಲ್ಲವನ್ನೂ ಹೇಳಿಕೊಳ್ಳುವ ಒಳ್ಳೆಯ ಮನಸ್ಸುಳ್ಳ ಸಂಸದ ಅವರು.
ಕರ್ನಾಟಕದ ಗಾಂಧಿ ಎಂದೇ ಜನರಿಂದ ಕರೆಸಿಕೊಂಡ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರು ನನಗೆ ರಾಜಕಾರಣ ಸಾಕು ಎಂದು ನಿವೃತ್ತಿ ಘೋಷಿಸಿದಾಗ ರಾಜ್ಯದ ಸಭ್ಯ ಜನ ಮರುಗಿದರು! ಈ ಘಟನೆಗಳನ್ನು ಏಕೆ ನೆನಪು ಮಾಡಿಕೊಳ್ಳಬೇಕಾಯಿತೆಂದರೆ, ಈಗ ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಎರಡನೇ ಅವಧಿ ಆರಂಭವಾದ ಮರುದಿನವೇ ಖಾತೆಗಳ ಕ್ಯಾತೆ ಆರಂಭವಾಗಿದ್ದು! ಅದೂ ಹಿರಿಯರಿಂದಲೇ!!
ಡಿಕೆ ಸಂಪುಟಕ್ಕೆ ಆಯ್ಕೆಯಾಗಿರುವ ಎಲ್ಲರೂ, (ಸಿದ್ಧರಾಮಯ್ಯನವರ ಪುತ್ರ ಡಾ.ಯತೀಂದ್ರ ಹೊರತುಪಡಿಸಿ) ಹಿರಿಯರೇ. ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಮಂತ್ರಿಯಾದವರೇ. ಈ ಮೊದಲು ಮಂತ್ರಿಯಾಗಲು ಇದ್ದ ಪೈಪೋಟಿ ಈಗ ಇಂತಹುದ್ದೇ ಖಾತೆ ಬೇಕು ಎಂಬ ಮಟ್ಟಿಗೆ ಬಂದು ನಿಂತಿದೆ!
ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ಕೆಲ ಖಾತೆಗಳನ್ನು `ಹಸಿರು ಹುಲ್ಲುಗಾವಲು’ ಎಂದು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ಗೃಹ, ಲೋಕೋಪಯೋಗಿ, ಕಂದಾಯ, ಸಮಾಜ ಕಲ್ಯಾಣ, ವಸತಿ, ಇಂಧನ (ಪವರ್) ಇಂತಹ ಖಾತೆಗಳಿಗೆ ಈಗ ಹಿರಿಯರಿಂದ ಡಿಮ್ಯಾಂಡ್. ಕೇಂದ್ರದಲ್ಲೂ ಅಷ್ಟೇ. ರಕ್ಷಣೆ, ಗೃಹ, ಹಣಕಾಸು, ವಿಮಾನಯಾನ, ಜಲಸಂಪನ್ಮೂಲ, ಮಾನವ ಸಂಪನ್ಮೂಲ ಇತ್ಯಾದಿಗಳು ಲಾಬಿ ಖಾತೆಗಳು.
ಈಗ ಅವುಗಳ ಬೇಡಿಕೆ ಎಷ್ಟರ ಮಟ್ಟಿಗೆ ಎಂದರೆ, ಸರ್ಕಾರ ಮತ್ತು ಆ ಪಕ್ಷಗಳ ನಾಯಕರನ್ನು ಮಂಡಿಯೂರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ!. ಹಿಂದಿನ ಸಿದ್ಧರಾಮಯ್ಯ ಸರ್ಕಾರದಲ್ಲಿ ಖಾತೆಗಳ ಕ್ಯಾತೆಗೆ ಅವಕಾಶ ದೊರೆಯಲಿಲ್ಲ ಬಹುತೇಕ ಸಚಿವರುಗಳಿಗೆ ತಮ್ಮ ಅವಧಿ ಸಿದ್ಧರಾಮಯ್ಯನವರೊಟ್ಟಿಗೆ ಎರಡೂವರೆ ವರ್ಷ ಎಂದು ಆರಂಭದಲ್ಲೇ ಗೊತ್ತಾಗಿತ್ತು. ಅದಕ್ಕಾಗಿಯೇ, ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಹತ್ತು ಹಲವು ಪ್ರಕ್ರಿಯೆಗಳನ್ನು ಮಾಡಬೇಕಾಗಿತ್ತು.
ಈಗ ಹೈಕಮಾಂಡ್ ಪ್ರಬಲವಾಗಿದೆ. ಹಾಗೇ, ಮೂರು ವರ್ಷದಲ್ಲಿ ಸರ್ಕಾರದ ಹಿರಿಯ ಮಂತ್ರಿಗಳು ಮುಖ್ಯಮಂತ್ರಿಗಳನ್ನೇ, ಹೈಕಮಾಂಡ್‌ನ್ನೇ ಅಲುಗಾಡಿಸುವಷ್ಟು ಬೆಳೆದಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಪ್ರಥಮವಾಗಿ ತನಗೆ ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿಲ್ಲವೆಂದು ರಾಜೀನಾಮೆಯನ್ನು ಬಿಸಾಕಿದರು. ಮುನಿಸಿಕೊಂಡವರನ್ನು ಸಮಾಧಾನ ಪಡಿಸುವಲ್ಲಿ ಹೈರಾಣಾಗುತ್ತಿದ್ದಂತೇ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಹಳೆಯ ಆಹಾರ ಖಾತೆಯನ್ನೇ ಮುಂದುವರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸೀನಿಯಾರಿಟಿ ಕಡೆಗಣಿಸಬೇಡಿ. ಕೇಂದ್ರ- ರಾಜ್ಯದಲ್ಲಿ ಮಂತ್ರಿಯಾದವರು. ಸಮುದಾಯ ತಮ್ಮೊಟ್ಟಿಗೆ ಇದೆ ಎಂದರು. ಆ ನಂತರ ಶುರುವಾದದ್ದು ಕೃಷ್ಣ ಭೈರೇಗೌಡರ ತಕರಾರು. ಮೂರು ವರ್ಷಗಳ ಕಾಲ ಕಂದಾಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಹೆಸರು ಪಡೆದಿರುವ ಕೃಷ್ಣ ಭೈರೇಗೌಡರಿಗೆ ಅದೇ ಖಾತೆ ಮುಂದುವರಿಯಲಿ ಎನ್ನುವ ಬಯಕೆ ಇತ್ತು.
ಆದರೆ ಬೆಂಗಳೂರು ಅಭಿವೃದ್ಧಿ ಖಾತೆಗೆ ಅವರನ್ನು ಸ್ಥಳಾಂತರಿಸಲಾಯಿತು. ಆ ನಂತರ ಬೆಂಗಳೂರು ಅಭಿವೃದ್ಧಿ ಖಾತೆಯಲ್ಲಿ ಬಿಡಿಎ ಇಲ್ಲ, ಬಿಎಂಆರ್‌ಡಿಎ ಇಲ್ಲ… ಹಲವು ಇಲಾಖೆಗಳೂ ಇಲ್ಲ… ಎಂದು ತಿಳಿದಾಗ ಮುನಿಸಿಕೊಂಡ ಅವರು ಈಗ ಹೈಕಮಾಂಡ್ ಮೊರೆ ಹೋಗಿದ್ದಾರೆ.
ಹಲ್ಲು-ಕಾಲು ಕಿತ್ತ ಈ ಖಾತೆಯಲ್ಲಿ ಕೆಲಸ ಮಾಡಲಾಗದು ಎಂಬ ಕೃಷ್ಣ ಭೈರೇಗೌಡರ ಆಶಯ- ಅಪೇಕ್ಷೆಯಲ್ಲಿ ನ್ಯಾಯ ಇದೆ. ಶಿರವಿಲ್ಲದ ಸೀಮಿತ ವ್ಯಾಪ್ತಿಯ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡಿರುವುದೇಕೆ? ಕೊಟ್ಟರೆ ಪೂರ್ಣ ಕೊಡಿ ಎನ್ನುವ ಅವರ ಮಾತು ವ್ಯಾವಹಾರಿಕ ಮತ್ತು ಆಡಳಿತಾತ್ಮಕವಾಗಿ ಸರಿ ಇದೆ. ಆದರೆ ರಾಮಲಿಂಗಾರೆಡ್ಡಿ, ಮುನಿಯಪ್ಪ ಅವರ ಅಸಮಾಧಾನ, ಬೇಡಿಕೆಗಳಿಗೆ ಸಮರ್ಥನೆ ಕಾಣುತ್ತಿಲ್ಲ.
ಇದರಿಂದ ಜನರ ಮುಂದೆ ಅವರೇ ಅಪಹಾಸ್ಯಕ್ಕೆ ಈಡಾಗಿದ್ದಾರೆಂದರೆ ತಪ್ಪಿಲ್ಲ. ಯಾವ ಖಾತೆ ದೊಡ್ಡದು? ಯಾವ ಖಾತೆ ಚಿಕ್ಕದು ಎನ್ನುವುದು ಈಗ ಸರ್ಕಾರದಿಂದ ಬಿಡುಗಡೆಯಾಗುವ ಹಣಕಾಸು ಮತ್ತು ಪವರ್‌ಅನ್ನು ಅವಲಂಬಿಸಿದೆ. ಮೊದಲು ಲೋಕೋಪಯೋಗಿ, ಗೃಹ, ಕಂದಾಯ ಮತ್ತು ಜಲಸಂಪನ್ಮೂಲಗಳನ್ನು ಮುಗಿಬಿದ್ದು, ಹಠ ಹಿಡಿದು ಪಡೆಯುತ್ತಿದ್ದರು. ಕೆಲವು ಹಸಿರು ಹುಲ್ಲುಗಾವಲಾದರೆ, ಇನ್ನು ಕೆಲವು ಸಂಪದ್ಭರಿತ ಹಣ್ಣಿನ ತೋಟಗಳು… ತಿಂದು ಅನುಭೋಗಿಸಲು ವಿಪುಲ ಅವಕಾಶಗಳಿವೆ. ಜನರಿಗೂ ಇದು ಅರ್ಥವಾಗಿಬಿಟ್ಟಿದೆ.!
ವಿಚಿತ್ರ ಎಂದರೆ, ಹಿರಿಯರನೇಕರಿಗೆ ಮಂತ್ರಿಯಾಗುವುದು ತಮ್ಮ ಜನ್ಮಸಿದ್ದ ಹಕ್ಕು ಎಂದು ಪ್ರತಿಪಾದಿಸುತ್ತಿದ್ದಾರೆ. ಈಗ ಸಂಪುಟದಿಂದ ಹೊರಗುಳಿದವರ ವಾದ ಕೂಡಾ ಅದೇ. ನಮ್ಮನ್ನು ಮಂತ್ರಿ ಮಾಡದೆ ಕಡೆಗಣಿಸಿದರೆ ಹೇಗೆ? ಇದು ಎಚ್ಚರಿಕೆ ಗಂಟೆ.. ಎಂಬುದು ಅವರ ವಾದ. ಕೆಲವರ ಹಿಂದೆ ಒಂದಿಷ್ಟು ಶಾಸಕರಿರಬಹುದು. ಸರ್ಕಾರ ಅಲುಗಾಡಿಸುವ ತಾಕತ್ತೂ ಇರಬಹುದು. ಆದರೆ ತಮ್ಮನ್ನೇ ಮಂತ್ರಿ ಮಾಡಿ ನಾನೊಬ್ಬನೇ ಸಮರ್ಥ ಎಂದು ಪಟ್ಟು ಹಿಡಿಯುವುದು ಇದೆಯಲ್ಲ, ಇದು ಜನರಿಗೆ ಒಂದು ರೀತಿಯ ತಮಾಷೆಯಾಗಿಯೂ ಕಾಣುತ್ತಿದೆ.
ಏಕೆ ನೀವೊಬ್ಬರೇ ಎಷ್ಟು ವರ್ಷ ಅಧಿಕಾರ ಅನುಭವಿಸುತ್ತೀರಿ? ನಿಮ್ಮನ್ನು ನಂಬಿದವರಿಗೆ ಅಥವಾ ಹೊಸ ಪೀಳಿಗೆಯವರಿಗೆ ಏಕೆ ಅವಕಾಶ ಕೊಡುವುದಿಲ್ಲವೇಎಂದರೆ ಇವರಿಗೆ ಮುನಿಸು! ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳಗಳಲ್ಲಿ ಹೊಸ ಸರ್ಕಾರ ಬಂದಿದೆ. ಅಲ್ಲಿ ಹಿರಿ ತಲೆಗಳಿಲ್ಲ. ಎಲ್ಲ ಹೊಸಬರು. ಪ್ರಥಮವಾಗಿ ಮಂತ್ರಿಯಾದವರೇ.
ಸರ್ಕಾರದ ಬಗ್ಗೆ ಜನಾಭಿಪ್ರಾಯವನ್ನು ಈಗ ಹೇಳಲಾಗದಿದ್ದರೂ, ಯುವಕರಲ್ಲಿ- ಜನರಲ್ಲಿ ಹೊಸಮುಖಗಳ ಬಗ್ಗೆ ನಿರೀಕ್ಷೆ ಇರುವುದು ಸತ್ಯ. ಕಳೆದ ನಲವತ್ತು ವರ್ಷಗಳ ಕರ್ನಾಟಕದ ರಾಜಕಾರಣದಲ್ಲಿ ಜನ ಹೊಸ ಮುಖಗಳನ್ನು ಆಡಳಿತದ ಪ್ರಮುಖ ವಾಹಿನಿಯಲ್ಲಿ ಕಂಡಿಲ್ಲ.
ಯಾವ ಪಕ್ಷದ ಸರ್ಕಾರಗಳೇ ಬರಲಿ. ಅವೇ ಮುಖ. ಅವೇ ಖಾತೆ… ಇವುಗಳನ್ನೇ ಜನ ನೋಡುತ್ತ ಬಂದಿದ್ದಾರೆ. ತಮ್ಮ ಸರ್ಕಾರ ಬಂದ ಮೇಲೆ ಇಂತಹ ಒಂದು ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದೇವೆ ಎಂದು ಹೇಳುವ ಛಾತಿ ಯಾರಿಗೂ ಇಲ್ಲ.
ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲೂ ಪರಿವರ್ತನೆಯಾಗುತ್ತದೆ ಎನ್ನುವುದು ಸುಳ್ಳು. ನಿಮ್ಮನ್ನೇ ಏಕೆ ಮಂತ್ರಿಯನ್ನಾಗಿಸಬೇಕು? ನೀವೇ ಏಕೆ ಮಂತ್ರಿಯಾಗಲು ಹವಣಿಸುತ್ತಿದ್ದೀರಿ? ಹೊಸಬರಿಗೇಕೆ ಅವಕಾಶ ಕೊಡುತ್ತಿಲ್ಲ?’ ಅತ್ಯುತ್ತಮ ಆಡಳಿತ ಕೌಶಲ್ಯ, ಅನುಭವ ಹೊಸ ಯೋಚನೆ-ಯೋಜನೆ ಇಟ್ಟುಕೊಂಡಿರುವ ಶಾಸಕರು ಯಾವ ಸ್ಥಾನಮಾನ, ಮಂತ್ರಿಗಿರಿ ಇಲ್ಲದೇ ತಮ್ಮ ಅವಧಿ ಪೂರ್ಣಗೊಳಿಸುತ್ತಿದ್ದಾರೆ.
ಈ ಹಿರಿತಲೆಮಾರಿಗಳು ದಾರಿ ಬಿಟ್ಟುಕೊಡದ ಕಾರಣ ಮರ‍್ನಾಲ್ಕು ಸಾರೆ ಶಾಸಕರಾದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಹೊಸ ಸರ್ಕಾರ ಬಂತೆಂಬ ಹೊಸ ಉತ್ಸಾಹ ಜನರಲ್ಲೇನು ಕಾಣುತ್ತಿಲ್ಲ. ಕಾರಣ, ಅವೇ ಮುಖ… ಅವೇ ಜನ! ಈಗ ಮತ್ತೆ ಮಂತ್ರಿಯಾಗಲು ಜನರನ್ನು ಎತ್ತಿಕಟ್ಟುವ ಕೆಲಸವಷ್ಟೇ ನಡೆದಿದೆ. ಎಲ್ಲೆಡೆ ಜನರಿಂದ ಪ್ರತಿಭಟನೆ ಮಾಡಿಸಿಕೊಂಡು ಒತ್ತಡ ಹೇರುತ್ತಿದ್ದಾರೆ.
ಜನರು ತಮ್ಮ ಜಾತಿ, ಸಮುದಾಯ, ಸಮಾಜ, ಪ್ರದೇಶ ಮತ್ತು ಅಭಿಮಾನ ಇವುಗಳಿಗೆ ಕಟ್ಟು ಬಿದ್ದು ಹೋರಾಟಕ್ಕಿಳಿಯುತ್ತಿದ್ದಾರೆ. ಹೊಸಬರಿಗೆ ಏಕೆ ಕೊಡುವುದಿಲ್ಲ ಎಂದು ಜನ ಈಗ ಕೇಳಬೇಕಾಗಿದೆ. ಖಾತೆಯ ಕ್ಯಾತೆ ತೆಗೆಯುತ್ತಿರುವವರಿಗೆ ಬದಿಗೆ ತಳ್ಳಿ, ಹೊಸಬರಿಗೆ ದಾರಿ ಮಾಡಿಕೊಡಿ ಎಂದು ಜನರೇ ಒತ್ತಡ ಹೇರಬೇಕಿದೆ.
ಅಲ್ಲದೇ ಇದುವರೆಗೆ ಮಂತ್ರಿಯಾಗಿದ್ದವರ ಕಾರ್ಯವೈಖರಿಯ ಒಂದು ವಿಮರ್ಶಾತ್ಮಕ ಅವಲೋಕನವೂ ನಡೆಯಬೇಕಿದೆ. ಅಸಮರ್ಥ ಮಂತ್ರಿಗಳು ಹಿರಿತನದಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ. ಇನ್ನಾದರೂ ಇವಕ್ಕೆಲ್ಲ ಒಂದು ಅಳತೆಗೋಲು ಬೇಕಲ್ಲವೇ!?















