SK Home Ad
Home ಕ್ರೀಡೆ RCB ಸತತ ಎರಡನೇ ಬಾರಿ ಚಾಂಪಿಯನ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳ ಸಂಭ್ರಮ

RCB ಸತತ ಎರಡನೇ ಬಾರಿ ಚಾಂಪಿಯನ್: ಬೆಣ್ಣೆನಗರಿಯಲ್ಲಿ ಅಭಿಮಾನಿಗಳ ಸಂಭ್ರಮ

0
67

ಪಟಾಕಿ, ಡಿಜೆ, ಬೈಕ್ ರ್ಯಾಲಿ: ಆರ್‌ಸಿಬಿ ಗೆಲುವಿಗೆ ದಾವಣಗೆರೆ ಫುಲ್ ಜೋಶ್

ದಾವಣಗೆರೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಕಪ್ ಗೆದ್ದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಪಂದ್ಯದ ಆರಂಭದಿಂದಲೇ ನಗರದ ವಿವಿಧ ಭಾಗಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಸೇರಿ ಪಂದ್ಯ ವೀಕ್ಷಿಸಿದರು. ನಗರದ ಎವಿಕೆ ರಸ್ತೆಯಿಂದ ಅಂಬೇಡ್ಕರ್ ವೃತ್ತಕ್ಕೆ ಸಾಗುವ ಮಾರ್ಗದಲ್ಲಿರುವ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಅಂಗಡಿಯ ಮುಂಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ನೂರಾರು ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಪ್ರಮುಖ ವಿಕೆಟ್‌ಗಳು ಪತನವಾಗುತ್ತಿದ್ದಂತೆ ಅಭಿಮಾನಿಗಳು ಶಿಳ್ಳೆ, ಕೇಕೆ ಹಾಗೂ ಘೋಷಣೆಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಆರ್‌ಸಿಬಿ ಬೌಲರ್‌ಗಳ ಪ್ರತಿ ಯಶಸ್ಸಿಗೂ “ಆರ್‌ಸಿಬಿ… ಆರ್‌ಸಿಬಿ…” ಎಂಬ ಘೋಷಣೆಗಳು ಮೊಳಗಿದವು.

ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಸಿಡಿಸಿದಾಗ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಿತು. ಚಿಣ್ಣರು, ಯುವಕರು ಹಾಗೂ ಯುವತಿಯರು ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ವಿಜಯೋತ್ಸವದಲ್ಲಿ ಭಾಗಿಯಾದರು. ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ನಗರಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಾಮ್ ಆ್ಯಂಡ್ ಕೋ ವೃತ್ತ, ಗುಂಡಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ಅಭಿಮಾನಿಗಳು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ಹಲವೆಡೆ ಬೈಕ್ ರ್ಯಾಲಿಗಳು ನಡೆದಿದ್ದು, ಆರ್‌ಸಿಬಿ ಧ್ವಜಗಳನ್ನು ಹಿಡಿದು ಯುವಕರು ಸಂಭ್ರಮಾಚರಣೆಯಲ್ಲಿ ತೊಡಗಿದರು.

ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿರುವುದು ಅಭಿಮಾನಿಗಳ ಸಂತಸವನ್ನು ದ್ವಿಗುಣಗೊಳಿಸಿದ್ದು, ದಾವಣಗೆರೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.