ಅಹಮದಾಬಾದ್: ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 156 ರನ್‌ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆಂಗಳೂರು 12 ಎಸೆತಗಳು ಬಾಕಿ ಇರುವಂತೆ ತಲುಪಿತು.
ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲಿ ವೆಂಕಟೇಶ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಜೋಡಿ ಉತ್ತಮ ಅಡಿಪಾಯ ಹಾಕಿತು. ಈ ಜೋಡಿ ಕೇವಲ 27 ಎಸೆತದಲ್ಲಿ 62 ರನ್‌ಗಳ ಜತೆಯಾಟ ನಡೆಸಿತು.
ವೆಂಕಟೇಶ ಅಯ್ಯರ್ 16 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನಿಂದ 32 ರನ್ ಗಳಿಸಿ ಮೊಹಮ್ಮದ ಸಿರಾಜ್ ಎಸೆತದಲ್ಲಿ ಕಗಿಸೊ ರಬಾಡಾಗೆ ಕ್ಯಾಚ್ ನೀಡಿ ಔಟಾದರು. ಇವರ ಹಿಂದೆಯೇ ದೇವದತ್ತ ಪಡಿಕ್ಕಲ್ (1) ಪೆವಿಲಿಯನ್ ಸೇರಿದರು.
ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ರಜತ್ ಪಾಟೀದಾರ್ (15) ರಶೀದ್ ಖಾನ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಕಗಿಸೊ ರಬಾಡಾಗೆ ಕ್ಯಾಚ್ ನೀಡಿ ಹೊರನಡೆದರು. ಇವರ ಹಿಂದೆಯೇ ಕೃನಾಲ್ ಪಾಂಡ್ಯ ಅದೇ ಓವರ್‌ನಲ್ಲಿ ಎಲ್‌ಬಿಡಬ್ಲುಗೆ ಬಲಿಯಾದರು.
8.5 ಓವರ್‌ಗಳಲ್ಲಿ 91 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಆರ್‌ಸಿಬಿಗೆ ಕೊಹ್ಲಿ ಮತ್ತು ಟಿಮ್ ಡೇವಿಡ್ 31 ಎಸೆತದಲ್ಲಿ 41 ರನ್ ಗಳಿಸಿ ಆಸರೆಯಾದರು. ಈ ವೇಳೆ ಡೇವಿಡ್ ಅರ್ಷದ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್ ಬಟ್ಲರ್‌ಗೆ ಕ್ಯಾಚ್ ಕೊಟ್ಟು ಔಟಾದರು.
ಇನ್ನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಕೇವಲ 42 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ನಿಂದ ಅಜೇಯ 75 ರನ್ ಗಳಿಸಿ ಆರ್‌ಸಿಬಿಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದರು.
ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್‌ಗಳಿಸಿ, ಆರ್‌ಸಿಬಿ ಗೆಲುವಿಗೆ 156 ರನ್ ಗುರಿ ನೀಡಿತು.
ಆರಂಭದಲ್ಲಿಯೇ ಮೊದಲ ಓವರ್‌ನಲ್ಲಿಯೇ 13 ರನ್‌ಗಳಿಸಿ ಬೃಹತ್ ಮೊತ್ತ ಗಳಿಸುವ ಯೋಜನೆ ಹಾಕಿದ್ದ ಗುಜರಾತ್ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಶುಭಮನ್ ಗಿಲ್ (10) ವಿಕೆಟ್ ಕಳೆದುಕೊಂಡಿತು.
ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಾಯಿ ಸುದರ್ಶನ (12) ಭುವನೇಶ್ವರ ಕುಮಾರ್‌ಗೆ ವಿಕೆಟ್ ಕೊಟ್ಟು ಹೊರನಡೆದರು. ಪವರ್ ಪ್ಲೇ ಅಂತ್ಯಕ್ಕೆ 45ಕ್ಕೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಗುಜರಾತ್ ಸಂಕಷ್ಟಕ್ಕೆ ಸಿಲುಕಿತು.
ನಿಶಾಂತ್ ಸಿಂಧು (20), ಜೋಸ್ ಬಟ್ಲರ್ (19), ಅರ್ಷದ್ ಖಾನ್ (15) ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರನಡೆದರು. ಆದರೆ, ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಏಕಾಂಗಿಯಾಗಿ ಹೋರಾಟ ಮಾಡಿದ ವಾಷಿಂಗ್ಟನ್ ಸುಂದರ 37 ಎಸೆತದಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 50 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್‌ಸಿಬಿ ಪರ ರಾಸಿಖ್ ಸಲಾಮ್ ದಾರ್ 37ಕ್ಕೆ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 29ಕ್ಕೆ 2, ಜೋಶ್ ಹ್ಯಾಜಲ್ವುಡ್ 37ಕ್ಕೆ 2 ಮತ್ತು ಕೃನಾಲ್ ಪಾಂಡ್ಯ 23ಕ್ಕೆ 1 ವಿಕೆಟ್ ಪಡೆದರು.






















