ಮುಂಬೈ: ರಿಲಯನ್ಸ್ ಒಡೆತನದ ಭಾರತದ ಪ್ರಮುಖ ಕ್ರೀಡೆ, ಜೀವನಶೈಲಿ ಮತ್ತು ಮನರಂಜನಾ ಕಂಪನಿಯಾದ ರೈಸ್ ವರ್ಲ್ಡ್‌ವೈಡ್ ಲಿಮಿಟೆಡ್ (ಆರ್‌ಐಎಸ್ಇ – RISE Worldwide Ltd), ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗುಣಲನ್ ಕಮಲಿನಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ದೇಶದ ಯುವ ಕ್ರೀಡಾ ಪ್ರತಿಭೆಗಳ ಭವಿಷ್ಯದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ.
17 ವರ್ಷದ ಆಟಗಾರ್ತಿ ಸಂಸ್ಥೆಯ ಪ್ರತಿಭಾನ್ವಿತರ ಪಟ್ಟಿಗೆ ಸೇರಿದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಜೊತೆಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಸಾಯಿ ಸುದರ್ಶನ್ ಅವರನ್ನೊಳಗೊಂಡ ರೈಸ್ ವರ್ಲ್ಡ್‌ವೈಡ್‌ನ ಕ್ರಿಕೆಟ್ ವಿಭಾಗದ ಪಟ್ಟಿಯು ಇನ್ನಷ್ಟು ವಿಸ್ತರಣೆಗೊಂಡಿದೆ.
ಈ ಒಪ್ಪಂದದ ಅಡಿಯಲ್ಲಿ ಕಮಲಿನಿ ಅವರ ವಿಶೇಷ ವಾಣಿಜ್ಯ ಮತ್ತು ಪ್ರತಿಭಾ ನಿರ್ವಹಣಾ ಪಾಲುದಾರ ಆಗಿರುವ ʻರೈಸ್ ವರ್ಲ್ಡ್ವೈಡ್ʼ, ಅವರ ಬ್ರ್ಯಾಂಡ್ ಪ್ರಚಾರಗಳು, ಕಾರ್ಯತಂತ್ರದ ಪಾಲುದಾರಿಕೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿನ ಭಾಗವಹಿಸುವಿಕೆ, ಪರವಾನಗಿ, ಡಿಜಿಟಲ್ ಕಂಟೆಂಟ್ ಮತ್ತು ದೀರ್ಘಕಾಲೀನ ಬ್ರ್ಯಾಂಡ್ ಅಭಿವೃದ್ಧಿಯಂಥ ವಿಷಯಗಳನ್ನು ನಿರ್ವಹಿಸಲಿದೆ. ಇದರಿಂದಾಗಿ ಈ ಯುವ ಕ್ರಿಕೆಟರ್ ತಮ್ಮ ಕ್ರಿಕೆಟ್ ವೃತ್ತಿಜೀವನದತ್ತ ಸಂಪೂರ್ಣ ಗಮನಹರಿಸಲು ಸಾಧ್ಯವಾಗುತ್ತದೆ.
“ಕಮಲಿನಿ ಅಸಾಧಾರಣ ಯುವ ಪ್ರತಿಭೆಯಾಗಿದ್ದು, ಅತ್ಯುನ್ನತ ಮಟ್ಟದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಮನೋಸ್ಥೈರ್ಯ, ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯನ್ನು ತಮ್ಮ ಪ್ರದರ್ಶನಗಳ ಮೂಲಕ ಈಗಾಗಲೇ ಸಾಬೀತುಪಡಿಸಿದ್ದಾರೆ. ನಮ್ಮ ಪ್ರತಿಭಾನ್ವಿತರ ಪಟ್ಟಿಗೆ ಮೊದಲ ಮಹಿಳಾ ಕ್ರಿಕೆಟಿಗರಾಗಿ ಅವರನ್ನು ಸ್ವಾಗತಿಸುತ್ತಿರುವುದಕ್ಕೆ ನಮಗೆ ವಿಶೇಷ ಹೆಮ್ಮೆ ಇದೆ. ಇದು ನಮ್ಮ ಸಂಸ್ಥೆಯ ಪಾಲಿಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಮೈದಾನದ ಹೊರಗೆ ಸೂಕ್ತ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಅವರ ಪ್ರಯಾಣವನ್ನು ಬೆಂಬಲಿಸಲು ಮತ್ತು ಆ ಮೂಲಕ ಅವರು ಮೈದಾನದಲ್ಲಿ ಇನ್ನಷ್ಟು ಹೆಚ್ಚಿನ ಯಶಸ್ಸನ್ನು ಸಾಧಿಸುವುದರತ್ತ ಗಮನಹರಿಸಲು ಅನುವು ಮಾಡಿಕೊಡಲು ನಾವು ಎದುರು ನೋಡುತ್ತಿದ್ದೇವೆ” ಎಂದು ʻರೈಸ್ ವರ್ಲ್ಡ್‌ವೈಡ್ʼ ಮುಖ್ಯಸ್ಥ ನಿಖಿಲ್ ಬಾರ್ಡಿಯಾ ಅವರು ಈ ಒಪ್ಪಂದದ ಘೋಷಣೆ ಮಾಡುತ್ತ ಹೇಳಿದರು.
“ರೈಸ್ ವರ್ಲ್ಡ್‌ವೈಡ್ ಜೊತೆ ಕೈಜೋಡಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಸಂಸ್ಥೆಯು ಈಗಾಗಲೇ ಭಾರತೀಯ ಕ್ರಿಕೆಟ್‌ನ ದಿಗ್ಗಜರೊಂದಿಗೆ ಕೆಲಸ ಮಾಡಿದ್ದು, ಈ ತಂಡದ ಭಾಗವಾಗಲು ನಾನು ಉತ್ಸುಕಳಾಗಿದ್ದೇನೆ. ಸದ್ಯಕ್ಕೆ, ಒಬ್ಬ ಕ್ರಿಕೆಟ್ ಆಟಗಾರ್ತಿಯಾಗಿ ನನ್ನ ಕೌಶಲವನ್ನು ಸುಧಾರಿಸಿಕೊಳ್ಳುವುದು ಮತ್ತು ನನಗೆ ಸಿಗುವ ಪ್ರತಿಯೊಂದು ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಳ್ಳುವುದರತ್ತ ನಾನು ಗಮನಹರಿಸುತ್ತಿದ್ದೇನೆ” ಎಂದು ಕಮಲಿನಿ ಹೇಳಿದರು.
ಗುಣಲನ್ ಕಮಲಿನಿ ಭಾರತದ ಅತ್ಯಂತ ಭರವಸೆಯ ಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದು, ಅವರ ನಿರ್ಭೀತಿಯ ಪ್ರದರ್ಶನ ಮತ್ತು ಸಾಧನೆಗಳ ಮೂಲಕ ತ್ವರಿತ ಪ್ರಗತಿಯೊಂದಿಗೆ ಮನ್ನಣೆ ಗಳಿಸಿದ್ದಾರೆ. ಕಮಲಿನಿ ಅವರ ಕ್ರೀಡಾ ಪಯಣವು ಅತ್ಯಂತ ವೇಗವಾಗಿ ಮತ್ತು ಸ್ಥಿರವಾಗಿ ಸಾಗಿದೆ. ಅವರು ತಮಿಳುನಾಡು ತಂಡದ ಪರವಾಗಿ 15 ವಯೋಮಿತಿ ಕ್ರಿಕೆಟ್ ಆಡಿದ ನಂತರ, 19 ವಯೊಮಿತಿ ತಂಡಕ್ಕೂ ಆಯ್ಕೆಯಾಗಿದ್ದರು ಮತ್ತು ಆ ತಂಡದೊಂದಿಗೆ ಟಿ20 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ನಂತರ, 2025ರ ಆರಂಭದಲ್ಲಿ ಐಸಿಸಿಯ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಅವರು, ಆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಅದೇ ವರ್ಷ ಕೇವಲ 16ನೇ ವಯಸ್ಸಿನಲ್ಲಿ, ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅವರು ಇತಿಹಾಸ ನಿರ್ಮಿಸಿದ್ದರು ಮತ್ತು ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿನ ಉತ್ತಮ ಪ್ರದರ್ಶನವು ಅವರಿಗೆ 2025ರಲ್ಲಿ ಶ್ರೀಲಂಕಾ ವಿರುದ್ಧದ ತವರಿನ ಟಿ20 ಸರಣಿಗೆ ಭಾರತ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆಯಲು ನೆರವಾಯಿತು. ಈ ಸರಣಿಯ ಮೂಲಕ ಅವರು 17ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಡಬ್ಲ್ಯುಪಿಎಲ್ 2026ರ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಂಡ ಐವರು ಆಟಗಾರ್ತಿಯರಲ್ಲಿ ಇವರೂ ಒಬ್ಬರಾಗಿದ್ದರು. ಇತ್ತೀಚೆಗೆ 2026ರ ಏಷ್ಯನ್ ಗೇಮ್ಸ್‌ಗಾಗಿ ಬಿಸಿಸಿಐ ಪ್ರಕಟಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿಯೂ ಇವರಿಗೆ ಸ್ಥಾನ ನೀಡಲಾಗಿದ್ದು, ಇದು ದೇಶದ ಅತ್ಯಂತ ಭರವಸೆಯ ಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿ ಅವರು ಬೆಳೆಯುತ್ತಿರುವುದನ್ನು ಎತ್ತಿ ತೋರಿಸುತ್ತಿದೆ.
ಭಾರತದ ಅತ್ಯುತ್ತಮ ಕ್ರೀಡಾ ಪ್ರತಿಭೆಗಳನ್ನು ಪ್ರತಿನಿಧಿಸುವ ʻರೈಸ್ ವರ್ಲ್ಡ್ವೈಡ್ʼ ಸಂಸ್ಥೆಯ ನಿರಂತರ ಬದ್ಧತೆಯಲ್ಲಿ ಕಮಲಿನಿ ಅವರೊಂದಿಗಿನ ಈ ಒಪ್ಪಂದವು ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಕಾರ್ಯತಂತ್ರದ ಪ್ರತಿಭಾ ನಿರ್ವಹಣೆ ಮತ್ತು ದೀರ್ಘಕಾಲೀನ ಬ್ರ್ಯಾಂಡ್ ನಿರ್ಮಾಣವನ್ನು ಸಂಯೋಜಿಸುವ ಮೂಲಕ, ಕ್ರೀಡಾಪಟುಗಳು ಮೈದಾನದ ಒಳಗೆ ಮತ್ತು ಹೊರಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಹಾಯ ಮಾಡುವತ್ತ ಈ ಸಂಸ್ಥೆಯು ಗಮನಹರಿಸಿದೆ.






















