SK Home Ad
Home ಸುದ್ದಿ ದೇಶ ಸುಪ್ರೀಂ ಕೋರ್ಟ್‌ಗೆ 5 ಹೊಸ ನ್ಯಾಯಾಧೀಶರ ನೇಮಕ

ಸುಪ್ರೀಂ ಕೋರ್ಟ್‌ಗೆ 5 ಹೊಸ ನ್ಯಾಯಾಧೀಶರ ನೇಮಕ

0
96

ಸುಪ್ರೀಂ ಕೋರ್ಟ್ ಖಾಲಿ ಹುದ್ದೆಗಳ ಭರ್ತಿ: ಐವರು ನ್ಯಾಯಾಧೀಶರ ನೇಮಕಾತಿ ಅಧಿಸೂಚನೆ

ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾದ ಸುಪ್ರೀಂ ಕೋರ್ಟ್‌ನಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ವೇಗ ನೀಡಿರುವ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ಐವರು ನ್ಯಾಯಾಧೀಶರ ನೇಮಕಾತಿಗೆ ಅನುಮೋದನೆ ನೀಡಿದೆ. ಈ ಸಂಬಂಧ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸಿನ ಮೇರೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್, ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರುಣ್ ಪಲ್ಲಿ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ವೆಂಕಿತಾ ಸುಬ್ರಮಣಿ ಮೋಹನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.

ಮೇ 22 ಹಾಗೂ ಮೇ 27ರಂದು ನಡೆದ ಸಭೆಗಳಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಐದು ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಬಳಿಕ ಕೇಂದ್ರ ಸರ್ಕಾರವು ಸಂಬಂಧಿತ ದಾಖಲೆಗಳು ಮತ್ತು ಶಿಫಾರಸುಗಳನ್ನು ಪರಿಶೀಲಿಸಿ ನೇಮಕಾತಿಗೆ ಅಂತಿಮ ಅನುಮೋದನೆ ನೀಡಿದೆ.

ಕೇಂದ್ರ ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಭಾರತದ ಸಂವಿಧಾನದ 124ನೇ ವಿಧಿಯ ಉಪವಿಧಿ (2)ರ ಅಡಿಯಲ್ಲಿ ರಾಷ್ಟ್ರಪತಿಗಳು ತಮ್ಮ ಅಧಿಕಾರವನ್ನು ಚಲಾಯಿಸಿ ಈ ನೇಮಕಾತಿಗಳನ್ನು ಮಾಡಿದ್ದಾರೆ. ನೇಮಕಗೊಂಡಿರುವ ಐವರು ನ್ಯಾಯಮೂರ್ತಿಗಳು ತಮ್ಮ ಹುದ್ದೆಯ ಅಧಿಕಾರ ವಹಿಸಿಕೊಂಡ ದಿನಾಂಕದಿಂದಲೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ನೇಮಕಾತಿಗಳೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿನ ಖಾಲಿ ಹುದ್ದೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದ್ದು, ಬಾಕಿ ಇರುವ ಪ್ರಕರಣಗಳ ವಿಲೇವಾರಿ ಮತ್ತು ನ್ಯಾಯಾಂಗ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗಲಿದೆ ಎಂದು ಕಾನೂನು ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ : ಇದೇ ವೇಳೆ ಇಂದು ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ರಾಜೇಶ್ವರಿ ನಾರಾಯಣ ಹೆಗಡೆ, ನ್ಯಾಯಮೂರ್ತಿ ಶಾಂತಿ ಗಣೇಶ್ ಹಾಗೂ ನ್ಯಾಯಮೂರ್ತಿ ಬೃಂಗೇಶ್ ಮಹದೇವಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ನೇಮಕಾತಿಗಳು ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಸಮನ್ವಯದ ಕ್ರಮಗಳು ಮುಂದುವರಿದಿರುವ ಸಂದರ್ಭದಲ್ಲಿ ಈ ನೇಮಕಾತಿಗಳು ವಿಶೇಷ ಮಹತ್ವ ಪಡೆದಿವೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.