ಚಿತ್ರದುರ್ಗ(ಚಳ್ಳಕೆರೆ): ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ನಡೆದಿರುವ ಬರೋಬ್ಬರಿ 4.24 ಕೋಟಿ ರೂ.ಗಳ ‘ಅಂತಿಮ ಗಳಿಕೆ ರಜೆ ನಗದೀಕರಣ’ ಹಗರಣಕ್ಕೆ ಸಂಬಂಧಿಸಿದಂತೆ, ಪ್ರಸ್ತುತ ಚಳ್ಳಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಇಒ) ಕರ್ತವ್ಯ ನಿರ್ವಹಿಸುತ್ತಿರುವ ಶಶಿಧರ್. ಹೆಚ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಶಶಿಧರ್. ಹೆಚ್ ಅವರು ಈ ಹಿಂದೆ ಮಧುಗಿರಿ ತಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿವೃತ್ತಿ ಹೊಂದಿದ, ಸ್ವಯಂ ನಿವೃತ್ತಿ ಪಡೆದ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರಿನಲ್ಲಿ ಅಂತಿಮ ಗಳಿಕೆ ರಜೆ ನಗದೀಕರಣ ಮಂಜೂರಾತಿ ಮಾಡುವಲ್ಲಿ ಈ ಭಾರಿ ಅಕ್ರಮ ನಡೆದಿದೆ. ವಿಶೇಷ ಲೆಕ್ಕ ಪರಿಶೋಧನಾ ತಂಡ ಹಾಗೂ ರಾಜ್ಯ ಮಟ್ಟದ ತನಿಖಾ ತಂಡವು ತನಿಖೆ ನಡೆಸಿದಾಗ ಈ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ. ಖಜಾನೆ-2ರ ತಂತ್ರಾಂಶದಲ್ಲಿ ನೌಕರರ ‘ರೆಸಿಪಿಯಂಟ್ ಐಡಿ’ ಯಲ್ಲಿದ್ದ ನೌಕರರ ಹೆಸರಿಗೂ ಮತ್ತು ವಾಸ್ತವವಾಗಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿಗೂ ಭಾರಿ ವ್ಯತ್ಯಾಸವಿರುವುದು ಪತ್ತೆಯಾಗಿದೆ. ಈ ಐಡಿಗಳನ್ನು ದುರ್ಬಳಕೆ ಮಾಡಿಕೊಂಡು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಲವು ಬಾರಿ ಅಕ್ರಮವಾಗಿ ಒಟ್ಟು 4,24,06,997 ರೂ. (ರೂ. 4.24 ಕೋಟಿ) ಹಣವನ್ನು ವರ್ಗಾಯಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಲಾಗಿದೆ.
ಸರ್ಕಾರದ ತಾಜಾ ಆದೇಶದ ಪ್ರಕಾರ, ಶಶಿಧರ್. ಹೆಚ್ ಅವರ ಅಧಿಕಾರಾವಧಿಯಲ್ಲಿ 147 ಪ್ರಕರಣಗಳಲ್ಲಿ ಒಟ್ಟು 82,77,533 ರೂ. ಗಳ ಹಣವನ್ನು ಪಾವತಿಸಲಾಗಿದ್ದು, ಬ್ಯಾಂಕ್ ಖಾತೆಗಳಲ್ಲಿನ ಫಲಾನುಭವಿಗಳ ಹೆಸರು ತಾಳೆಯಾಗದೇ ಇರುವುದು ತನಿಖೆ ವೇಳೆ ಕಂಡುಬಂದಿದೆ. ಈ ಬಗ್ಗೆ ಪರಿಶೀಲನೆಗೆ ಯಾವುದೇ ದಾಖಲೆಗಳನ್ನು ಒದಗಿಸದೇ ಕರ್ತವ್ಯ ಲೋಪವೆಸಗಿರುವುದು ಹಾಗೂ ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡು ಆರ್ಥಿಕ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಗಂಭೀರ ಕರ್ತವ್ಯಲೋಪ ಹಾಗೂ ಆರ್ಥಿಕ ಅವ್ಯವಹಾರದ ಹಿನ್ನೆಲೆಯಲ್ಲಿ, ಮೇ 27, 2026 ರಂದು ಹೊರಡಿಸಲಾದ ಸರ್ಕಾರದ ಆದೇಶದನ್ವಯ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಶಶಿಧರ್. ಹೆಚ್ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕರ್ನಾಟಕ ನಾಗರಿಕ ಸೇವಾ ಅಡಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಕೆ. ಅವರು ಈ ಆದೇಶ ಹೊರಡಿಸಿದ್ದಾರೆ. ಅಮಾನತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಪಡೆಯಲು ಸದರಿ ಅಧಿಕಾರಿ ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸದ್ಯ ಚಳ್ಳಕೆರೆ ತಾ.ಪಂ. ಇಒ ಆಗಿದ್ದ ಇವರ ಅಮಾನತು ಸುದ್ದಿ ಸ್ಥಳೀಯ ಆಡಳಿತ ಮತ್ತು ನೌಕರರ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.





















