ಚಂಡೀಗಢ: ನಾಯಕ ಶುಭಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದಾಗಿ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೆಣಸಾಡಲಿದೆ.
ರಾಜಸ್ಥಾನ ನೀಡಿದ್ದ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡಕ್ಕೆ ನಾಯಕ ಗಿಲ್ ಮತ್ತು ಸಾಯಿ ಸುದರ್ಶನ ಜೋಡಿ ಕೇವಲ 12.5 ಓವರ್‌ಗಳಲ್ಲಿ 167 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು
ಆರಂಭದಿಂದಲೇ ರಾಜಸ್ಥಾನ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಗಿಲ್-ಸಾಯಿ ಸುದರ್ಶನ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಬ್ರಿಜೇಶ್ ಶರ್ಮಾ ಎಸೆತವನ್ನು ಹೊಡೆಯಲು ಹೋದ ಸಾಯಿ ಸುದರ್ಶನ ಬ್ಯಾಟ್ ಕೈ ಜಾರಿ ಹಿಟ್ ವಿಕೆಟ್ ಆಗಿ ನಿರ್ಗಮಿಸಿದರು.
ಇನ್ನೊಂದು ತುದಿಯಲ್ಲಿ ಆರ್ಭಟಿಸುತ್ತಿದ್ದ ಗಿಲ್ 53 ಎಸೆತದಲ್ಲಿ 15 ಬೌಂಡರಿ, 3 ಸಿಕ್ಸರ್ ನಿಂದ 104 ಗಳಿಸಿ ಜೋಫ್ರಾ ಆರ್ಚರ್ ಎಸೆತದಲ್ಲಿ ಎಲ್‌ಬಿಗೆ ಬಲಿಯಾದರು.
ಆಗ ತಂಡದ ಗೆಲುವಿಗೆ 30 ಎಸೆತದಲ್ಲಿ 33 ರನ್ ಅವಶ್ಯವಿದ್ದವು. ಆಗ ಜೋಸ್ ಬಟ್ಲರ್ ಜತೆಯಾದ ವಾಷಿಂಗ್ಟನ್ ಸುಂದರ (16) ಅಲ್ಪ ರನ್ ಕಾಣಿಕೆ ನೀಡಿ ನಾಂದ್ರೆ ಬರ್ಗರ್ ಎಸೆತದಲ್ಲಿ ಫೆರೆರಾಗೆ ಕ್ಯಾಚ್ ನೀಡಿ ಔಟಾದರು.
ಕೊನೆಯಲ್ಲಿ ಜೋಸ್ ಬಟ್ಲರ್ (ಅಜೇಯ 9) ಮತ್ತು ರಾಹುಲ್ ತಿವಾಟಿಯಾ (ಅಜೇಯ 17) 8 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ರಾಜಸ್ಥಾನ ರಾಯಲ್ಸ್ ಪರ ಬ್ರಿಜೇಶ್ ಶರ್ಮಾ 30ಕ್ಕೆ 1, ಜೋಫ್ರಾ ಆರ್ಚರ್ 45ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು.
ಆರ್‌ಆರ್ ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್ (1), ಮತ್ತು ಎರಡನೇ ಓವರ್‌ನಲ್ಲಿ ಧ್ರುವ್ ಜುರೆಲ್ (7) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ವೈಭವ್ ಸೂರ್ಯವಂಶಿ ಮತ್ತು ರವೀಂದ್ರ ಜಡೇಜಾ ಜೋಡಿ ತಂಡಕ್ಕೆ ಆಧಾರವಾಯಿತು. ಆದರೆ, ಜಡೇಜಾ 19 ಎಸೆತದಲ್ಲಿ 34 ರನ್‌ಗಳಿಸಿ ಆಡುತ್ತಿದ್ದಾಗ ಗಾಯದ ನೋವಿನಿಂದ ಮೈದಾನದಿಂದ ಹೊರನಡೆದರು.
ನಂತರದಲ್ಲಿ ಕ್ರಿಸ್‌ಗೆ ಬಂದ ರಿಯಾನ್ ಪರಾಗ್ (11), ದಾಸುನ್ ಶನಕ (3) ಮತ್ತು ಜೋಫ್ರಾ ಆರ್ಚರ್ (7) ಮೂವರು ಮೈದಾನಕ್ಕೆ ಬರುತ್ತಿದ್ದಂತೆ ಮರಳಿ ಪೆವಿಲಿಯನ್ ಸೇರಿದರು.
ಚೇತರಿಸಿಕೊಂಡ ರವೀಂದ್ರ ಜಡೇಜಾ ಮತ್ತೇ ಆರನೇ ವಿಕೆಟ್‌ಗೆ ಮರಳಿ ಬ್ಯಾಟಿಂಗ್ ಮುಂದುವರಿಸಿದರು. ಈ ವೇಳೆ ವೈಭವ್ 47 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್‌ನಿಂದ 96 ರನ್‌ಗಳಿಸಿ ಔಟಾದರು.
ಏಳನೇ ವಿಕೆಟ್‌ಗೆ ಕ್ರಿಸ್‌ಗೆ ಬರುತ್ತಿದ್ದಂತೆ ಡೊನೊವನ್ ಫೆರೀರಾ ಗುಜರಾತ್ ಬೌಲರ್‌ಗಳನ್ನು ದಂಡಿಸಿಲು ಶುರುಮಾಡಿದರು. ಕೇವಲ 11 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್‌ನಿಂದ 38 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಗಾಯದ ಸಮಸ್ಯೆಯ ನಡುವೆಯೇ ರವೀಂದ್ರ ಜಡೇಜಾ 35 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್‌ನಿಂದ ಅಜೇಯ 45 ರನ್ ಗಳಿಸಿದರು.
ಗುಜರಾತ್ ಟೈಟನ್ಸ್ ಪರ ಜೇಸನ್ ಹೋಲ್ಡರ್ 27ಕ್ಕೆ 2, ಕಗಿಸೊ ರಬಾಡ 35ಕ್ಕೆ 2, ಪ್ರಸಿದ್ಧ್ ಕೃಷ್ಣ 42ಕ್ಕೆ 1 ಮತ್ತು ಮೊಹಮ್ಮದ್ ಸಿರಾಜ್ 42ಕ್ಕೆ 1 ವಿಕೆಟ್ ಪಡೆದರು.






















