ಹುಬ್ಬಳ್ಳಿ: ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಇದ್ದೇನೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುತ್ತೇನೆ. ಸಚಿವ ಸಂಪುಟ ವಿಸ್ತರಣೆ ಬೇರೆ ಬೇರೆ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಸಿಎಂ, ಡಿಸಿಎಂ ದೆಹಲಿ ಪ್ರವಾಸದ ಕುರಿತು ಮಾಧ್ಯಮ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಸಚಿವ ಸಂಪುಟದ ಬಗ್ಗೆ ಇಂದು ಸಿಹಿ ಸುದ್ದಿ ಸಿಗುತ್ತದೆ ಎಂಬ ಯಾವುದೇ ಪ್ರಕ್ರಿಯೇ ಕಾಣುತ್ತಿಲ್ಲ ಎಂದರು.
ಹೈಕಮಾಂಡ್ ಅವರು ಸಿಎಂ, ಡಿಸಿಎಂಗೆ ಕರೆದಿರುವುದು ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ. ಆದರೆ ರಾಜ್ಯಸಭಾ ಸ್ಥಾನ, ಎಂಎಲ್‌ಸಿ ನಾಮನಿರ್ದೇಶನ ಚರ್ಚೆಗೆ ಕರೆದಿರಬಹುದು. ಪಕ್ಷದ ಬೇರೆ ಬೇರೆ ಹಿತದೃಷ್ಟಿಯಿಂದ ಕರೆದಿರಬಹುದು. ಸಚಿವ ಸಂಪುಟ ವಿಸ್ತರಣೆಗೆ ಕುರಿತು ಕರೆದಿದ್ದಾರೆ ಎಂಬುದು ಸ್ಪಷ್ಟತೆಯಿಲ್ಲ. ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದರು.
ಸಹಜವಾಗಿ ಸಿಎಂ, ಡಿಸಿಎಂ ಹೋದಾಗ ಸಚಿವರು ಒಂದಿಷ್ಟು ಜನ ಹೋಗುತ್ತಾರೆ. ಹೀಗಾಗಿ ಸಚಿವರು ದೆಹಲಿಗೆ ತೆರಳಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಅಧಿಕಾರ ಹಸ್ತಾಂತರದ ಪ್ರಶ್ನೆಯೇ ಇಲ್ಲ. ಆ ಕುರಿತು ಮಾತು ಇಲ್ಲ ಎಂದರು.






















