ಸಂ.ಕ. ಸಮಾಚಾರ ಮೈಸೂರು: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ರಾಜ್ಯಸಭೆ ಸದಸ್ಯತ್ವದ ಬಗ್ಗೆ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ. “ರಾಜ್ಯಸಭೆಗೆ ನಾನು ಕೂಡ ಆಕಾಂಕ್ಷಿ” ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಪಕ್ಷದ ವರಿಷ್ಠರಿಗೆ ತಮ್ಮ ಮನವಿಯನ್ನು ಈಗಾಗಲೇ ತಿಳಿಸಿದ್ದೇನೆ ಎಂದು ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ತಾವು ಸಕ್ರಿಯ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿದ್ದರೂ, ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು. “ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ” ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಿಸುವ ಅಧಿಕಾರ ಹೈಕಮಾಂಡ್‌ಗೆ ಸೇರಿದೆ ಎಂದರು. “ಈಗಾಗಲೇ ಬಿ. ವೈ ವಿಜಯೇಂದ್ರ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ಅವರ ಅವಧಿ ಪೂರ್ಣಗೊಳ್ಳಲಿ. ನಂತರ ಅಗತ್ಯವಿದ್ದರೆ ಪಕ್ಷದ ವರಿಷ್ಠರು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವೇನೂ ಇಲ್ಲ” ಎಂದು ಸ್ಪಷ್ಟಪಡಿಸಿದರು.
ರಾಜ್ಯ ರಾಜಕೀಯದ ಬಗ್ಗೆ ತೀವ್ರ ಟೀಕೆ ನಡೆಸಿದ ಸದಾನಂದಗೌಡ, ಕರ್ನಾಟಕದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದಾರೆ ಎಂದು ಹೇಳಿದ ಅವರು, “ಈಗ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ 50 ಸ್ಥಾನಗಳನ್ನೂ ಪಡೆಯುವುದು ಕಷ್ಟ” ಎಂದು ಹೇಳಿದರು.
ಎಸ್‌ಐಆರ್ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷದ ವಿರೋಧ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ ಅವರು, “ಜನರೇ ಕಾಂಗ್ರೆಸ್‌ಗೆ ಉತ್ತರ ಕೊಡುವ ಕೆಲಸ ಮಾಡುತ್ತಾರೆ” ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವ್ಯಂಗ್ಯವಾಡಿದ ಸದಾನಂದಗೌಡ, “ಕಾಕ್ರೋಚ್ ಜನತಾ ಪಾರ್ಟಿಗೆ ಶೀಘ್ರದಲ್ಲೇ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಜಿರಳೆ ಕಂಡರೆ ಔಷಧಿ ಹಾಕುತ್ತಾರೆ. ನಾವು ಕೂಡ ಜಿರಳೆಗಳಿಗೆ ಔಷಧಿ ಹಾಕುತ್ತಿದ್ದೇವೆ” ಎಂದು ಕಿಡಿಕಾರಿದರು. ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ರಾಜ್ಯಸಭೆ ಸ್ಥಾನಗಳಿಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಒಳಚರ್ಚೆಗಳ ನಡುವೆ ಸದಾನಂದಗೌಡರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.





















