SK Home Ad
Home ನಮ್ಮ ಜಿಲ್ಲೆ ಮೈಸೂರು ಉತ್ತರಾದಿ ಮಠಾಧೀಶರಿಂದ ಒಂದು ಕೋಟಿ ತುಳಸಿ ಸಮರ್ಪಣೆ

ಉತ್ತರಾದಿ ಮಠಾಧೀಶರಿಂದ ಒಂದು ಕೋಟಿ ತುಳಸಿ ಸಮರ್ಪಣೆ

0
43

ಮೈಸೂರು: ಎಲ್ಲ ವ್ರತಗಳಿಗಿಂತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠವಾಗಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.

ಅಧಿಕ ಜೇಷ್ಠ ಮಾಸದ ಅಂಗವಾಗಿ ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವ ವಿಶೇಷ ಜ್ಞಾನ ಸತ್ರ, ಏಕಾದಶಿ ಆಚರಣೆ ಸಂದರ್ಭ ಗುರುವಾರ ಅವರು ಅನುಗ್ರಹ ಸಂದೇಶ ನೀಡಿದರು.

ಭಗವಂತನು ವಿವಿಧ ವ್ರತ ಮತ್ತು ಆಚರಣೆಗಳಿಂದ ಸಂತುಷ್ಟನಾಗಿ ನಾವು ಅಪೇಕ್ಷಿಸಿದ ವರಗಳನ್ನು ನೀಡುತ್ತಾನೆ. ಎಲ್ಲಾ ವ್ರತಗಳಲ್ಲಿ ಏಕಾದಶಿಯು ಅತ್ಯಂತ ಪರಮ ಪಾವನವಾಗಿದೆ. ಉಪವಾಸವಿದ್ದು, ಇಡೀ ದಿನ ದೇವರ ಚಿಂತನೆಯಲ್ಲೇ ಕಳೆಯುವುದು ಧನ್ಯತೆಯ ಸಂಕೇತವಾಗಿದೆ.

ಮಹಾಭಾರತ, ಭಾಗವತ ಸೇರಿದಂತೆ ಹಲವು ಪುರಾಣ, ಗ್ರಂಥಗಳು ಏಕಾದಶಿಯ ಮಹತ್ವವನ್ನು ಸಾರಿ ಹೇಳಿವೆ. 15 ದಿನಗಳಿಗೆ ಒಮ್ಮೆ ಸಮರ್ಪಣಾ ಭಾವದಲ್ಲಿ ಏಕಾದಶಿ ಉಪವಾಸ ಮಾಡುವುದು ಕೇವಲ ಧರ್ಮ ಮಾತ್ರವಲ್ಲ, ಅದರಲ್ಲಿ ಆರೋಗ್ಯ ವಿಜ್ಞಾನವು ಅಡಗಿದೆ ಎಂದು ಅವರು ಹೇಳಿದರು.

ಉಪವಾಸ ವ್ರತವನ್ನು ಮಾಡಿದ ಅನೇಕ ಋಷಿಮುನಿಗಳು ಮತ್ತು ಸಾಧ್ವಿ ಮಣಿಗಳು ಲೋಕಕ್ಕೆ ಉಪಕಾರ ಮಾಡುವಂತಹ ಮಹಾನ್ ವ್ಯಕ್ತಿಗಳನ್ನು ಮಕ್ಕಳನ್ನಾಗಿ ಪಡೆದಿದ್ದಾರೆ. ದೇಹ ಮತ್ತು ಮನಸ್ಸುಗಳನ್ನು ಸತ್ಕಾರ್ಯಗಳಿಗೆ ಮತ್ತೆ ಮತ್ತೆ ಆಣಿ ಮಾಡುವ ಚೇತನ ಶಕ್ತಿಯೊಂದು ಉಪವಾಸದಲ್ಲಿ ಅಡಗಿದೆ. ಆಧುನಿಕ ವಿಜ್ಞಾನವು ಇದು ಸತ್ಯ ಎಂದು ಸಾಬೀತುಪಡಿಸಿದೆ. ಹಾಗಿರುವಾಗ ಕಂಡ ಕಂಡಲ್ಲಿ, ನೋಡಿದ ಎಲ್ಲವನ್ನು ತಿನ್ನುವುದು, ನಾಲಿಗೆ ಬಯಸಿದ ಎಲ್ಲ ಖಾದ್ಯಗಳನ್ನು ಮಿತಿ ಇಲ್ಲದೆ ಸೇವಿಸುವುದು ಅನಾರೋಗ್ಯಕ್ಕೆ ಮಾತ್ರವಲ್ಲ, ಮುಂದಿನ ಸಂತಾನಕ್ಕೂ ಮಾರಕವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ಮನೆಯಲ್ಲೇ ಶುದ್ಧವಾಗಿ ತಯಾರಿಸಿ ಭಗವಂತನಿಗೆ ಸಮರ್ಪಣೆ ಮಾಡಿದ ಮಹಾಪ್ರಸಾದವನ್ನೇ ಸೇವನೆ ಮಾಡಬೇಕು. ಭಾಗವತ ಪ್ರತಿಪಾದಿಸಿದಂತೆ ಏಕಾದಶಿ ಉಪವಾಸ ವ್ರತವನ್ನು ಆಚರಣೆ ಮಾಡಬೇಕು. ಇದಕ್ಕೆ ಯಾವುದೇ ಜಾತಿ, ಮತ ಧರ್ಮಗಳ ಚೌಕಟ್ಟು ಇಲ್ಲ. ಯಾರಿಗೆ ಆರೋಗ್ಯ ಮತ್ತು ಬದುಕಿನಲ್ಲಿ ಸುಖ ಬೇಕು ಎಂಬ ಸಂಕಲ್ಪವಿದ್ದರೆ ಅವರೆಲ್ಲರಿಗೂ ಏಕಾದಶಿಯ ಉಪವಾಸ ಮಹಾ ವರವಾಗಿದೆ ಎಂದು ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು.

ಶ್ರೀ ಮೂಲ ರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದ ಅವರು ಅಧಿಕ ಜೇಷ್ಠ ಏಕಾದಶಿ ಅಂಗವಾಗಿ ಪ್ರತಿಮೆಗಳಿಗೆ ಒಂದು ಲಕ್ಷ ತುಳಸಿ ಅರ್ಚನೆಯನ್ನು ನೆರವೇರಿಸಿ ಧನ್ಯತೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಸಾವಿರಾರು ಭಕ್ತರು ಸಾಕ್ಷಿಯಾದ ಈ ಸಂದರ್ಭದಲ್ಲಿ ಗುರುಗಳು ದೇವರ ಪ್ರತಿಮೆಗಳನ್ನು ತಲೆಯ ಮೇಲೆ ಹೊತ್ತು ನರ್ತನ ಸೇವೆಯನ್ನು ಮಾಡಿದ್ದು ವಿಶೇಷವಾಗಿತ್ತು

ವಿಶೇಷ ಉಪನ್ಯಾಸ ನೀಡಿದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಡಿ.ಪಿ. ಮಧುಸೂಧನಾಚಾರ್ಯ ಅವರು, ಶ್ರದ್ಧೆಯಿಂದ ಮಾಡುವ ಪ್ರತಿಯೊಂದು ಕಾರ್ಯಗಳಿಗೂ ಶಾಸ್ತ್ರಗಳ ಶ್ರಾವಣದ ಬಲಬೇಕು ಎಂದರು. ನಾವು ಮಾಡುವ ಅನ್ನದಾನ ಮತ್ತು ಜ್ಞಾನ ದಾನಗಳು ಸದಾ ನಮ್ಮನ್ನು ರಕ್ಷಣೆ ಮಾಡುತ್ತವೆ. ಗುರು ಹಿರಿಯರ ಆಶೀರ್ವಾದ ಮತ್ತು ಅನುಗ್ರಹಗಳು ಎಂದೆಂದಿಗೂ ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡೊಯ್ದು, ಆರೋಗ್ಯ ಮತ್ತು ಆಯುಷ್ಯವನ್ನು ನೀಡುತ್ತವೆ ಎಂದರು.

ಏಕಾದಶಿ ಅಂಗವಾಗಿ ಬೆಳಗ್ಗೆ 9 ರಿಂದ ರಾತ್ರಿ 11 ರವರೆಗೆ ವಿವಿಧ ಕಲಾವಿದರಿಂದ ಅಖಂಡ ಹರಿದಾಸ ಭಜನೆ ನೆರವೇರಿತು.