SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ನಟಿ ಜಾಹ್ನವಿ ಈಗ ಜೆಡಿಎಸ್ ಮುಖಿ: ರಾಜಕೀಯದಲ್ಲಿ ಹೊಸ...

ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ನಟಿ ಜಾಹ್ನವಿ ಈಗ ಜೆಡಿಎಸ್ ಮುಖಿ: ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್!

0
61

ಬೆಂಗಳೂರು: ಕಿರುತೆರೆ ವಾಹಿನಿಗಳ ವಿವಿಧ ರಿಯಾಲಿಟಿ ಶೋಗಳು ಹಾಗೂ ಇತ್ತೀಚಿನ ಬಿಗ್ ಬಾಸ್ ಸ್ಪರ್ಧೆಯ ಮೂಲಕ ಕನ್ನಡಿಗರ ಮನೆಮನ ಗೆದ್ದಿದ್ದ ಖ್ಯಾತ ನಟಿ ಜಾಹ್ನವಿ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಸ್ತುತ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜಾಹ್ನವಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಖಾತೆಯಲ್ಲಿ ಫೋಸ್ಟ್‌: ಈ ಹೊಸ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಜಾಹ್ನವಿ, ಇದನ್ನು ತಮ್ಮ ಜೀವನದ ‘ಥರ್ಡ್ ಇನ್ನಿಂಗ್ಸ್’ ಎಂದು ಕರೆದಿದ್ದಾರೆ. ಕಳೆದ 12 ವರ್ಷಗಳ ಕಾಲ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ನ್ಯೂಸ್ ಆಂಕರ್ ಆಗಿ ಕೆಲಸ ಮಾಡಿದ್ದು ತಮ್ಮ ಮೊದಲ ಇನ್ನಿಂಗ್ಸ್ ಆಗಿತ್ತು. ಆ ಬಳಿಕ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳು ಮತ್ತು ಬಿಗ್ ಬಾಸ್ ಸ್ಪರ್ಧೆಯ ಮೂಲಕ ಎರಡನೇ ಇನ್ನಿಂಗ್ಸ್ ಆರಂಭವಾಗಿತ್ತು. ಬಿಗ್ ಬಾಸ್‌ನಿಂದ ಹೊರಬಂದ ನಂತರ ಮಾಡಿದ ಸಮಾಜಮುಖಿ ಕೆಲಸಗಳನ್ನು ಗುರುತಿಸಿದ ಜೆಡಿಎಸ್ ಯುವ ಮುಖಂಡ ಪುನೀತ್ ಗೌಡ ಪಕ್ಷಕ್ಕೆ ಆಹ್ವಾನ ನೀಡಿದ್ದರು ಎಂದು ಫೋಸ್ಟ್‌ನಲ್ಲಿ ಬರೆದುಕೊಳ್ಳುವ ಮೂಲಕ ಜಾಹ್ನವಿ ತಿಳಿಸಿದ್ದಾರೆ.

ರಾಜಕೀಯದತ್ತ ಹೆಜ್ಜೆ: ಕಷ್ಟದಲ್ಲಿದ್ದ ಜನರಿಗೆ ಜಾಹ್ನವಿ ಮಾಡಿದ ಸಣ್ಣ ಸಹಾಯದ ವಿಡಿಯೋಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿ ನೆಟ್ಟಿಗರ ಮನ ಗೆದ್ದಿದ್ದವು. ರಾಜ್ಯದ ಜನತೆ ನೀಡಿದ ಈ ಪ್ರೀತಿಯೇ ತಮ್ಮನ್ನು ಜೆಡಿಎಸ್ ಪಕ್ಷದ ಆಹ್ವಾನದವರೆಗೂ ತಂದು ನಿಲ್ಲಿಸಿದೆ ಎಂದಿರುವ ಅವರು, ಹಳೆಯ ರಾಜಕೀಯ ಪದ್ಧತಿಯನ್ನು ಬದಲಾಯಿಸುವ ದೊಡ್ಡ ಸಂಕಲ್ಪ ಮಾಡಿದ್ದಾರೆ.

ಹಾಗೇ ಹಣ ಪಡೆದು ವೋಟ್ ಮಾರಿಕೊಳ್ಳುವುದು, ರಾಜಕಾರಣಿಗಳಿಗೆ ಗುಲಾಮರಾಗುವುದನ್ನು ಕಿತ್ತೊಗೆದು, ಜನರ ನಿಜವಾದ ಸೇವಕರಾಗಿ ನಿಂತು ರಾಜ್ಯದ ಅಭಿವೃದ್ಧಿಗಾಗಿ ದುಡಿಯುವುದು ಮತ್ತು ಹೊಸ ರಾಜಕೀಯ ಭಾಷ್ಯ ಬರೆಯುವುದು ತಮ್ಮ ಹೆಗ್ಗುರಿ ಎಂದಿದ್ದಾರೆ. ಹೊಸ ಹಾದಿಗೆ ಹೆಜ್ಜೆ ಇಟ್ಟಿರುವ ಜಾಹ್ನವಿ, ಕರ್ನಾಟಕದ ಜನತೆಯ ಆಶೀರ್ವಾದವನ್ನು ಕೋರಿದ್ದಾರೆ.