Home Advertisement
Home ನಮ್ಮ ಜಿಲ್ಲೆ ಧಾರವಾಡ ಯುವ ಪೀಳಿಗೆಗೆ ವರದಾನವಾಗಿರುವ ‘ರೋಜ್‌ಗಾರ್ ಮೇಳ’

ಯುವ ಪೀಳಿಗೆಗೆ ವರದಾನವಾಗಿರುವ ‘ರೋಜ್‌ಗಾರ್ ಮೇಳ’

0
60

ಯುವಕರಿಗೆ ಕೇಂದ್ರ ಸರ್ಕಾರದ ಭರ್ಜರಿ ಅವಕಾಶ: ಹುಬ್ಬಳ್ಳಿಯಲ್ಲಿ ನೇಮಕಾತಿ ಪತ್ರ ವಿತರಣೆ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ರೋಜ್‌ಗಾರ್ ಮೇಳ’ ಕಾರ್ಯಕ್ರಮದ 19ನೇ ಆವೃತ್ತಿಯ ಅಂಗವಾಗಿ ಹುಬ್ಬಳ್ಳಿಯ ರೈಲ್ವೆ ಆಫೀಸರ್ಸ್ ಕ್ಲಬ್‌ನಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ಜೋಶಿ, ಉತ್ತರ ಕರ್ನಾಟಕ ಭಾಗದ ಯುವಕ-ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ದೇಶಾದ್ಯಂತ 51 ಸಾವಿರಕ್ಕೂ ಹೆಚ್ಚು ನೇಮಕಾತಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ರೋಜ್‌ಗಾರ್ ಮೇಳ ಉಪಕ್ರಮದಡಿ ದೇಶದಾದ್ಯಂತ 47ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ 51,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಭಾಷಣ : ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೋಜ್‌ಗಾರ್ ಮೇಳವನ್ನು ಉದ್ಘಾಟಿಸಿ ದೇಶದ ಯುವಜನರನ್ನು ಉದ್ದೇಶಿಸಿ ಮಾತನಾಡಿದರು. ಯುವಕರು ದೇಶದ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದ್ದು, 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು.

ಹುಬ್ಬಳ್ಳಿಯಲ್ಲಿ 150 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ : ಈ ಬಾರಿಯ ರೋಜ್‌ಗಾರ್ ಮೇಳವನ್ನು ರೈಲ್ವೆ ಇಲಾಖೆ ಆಯೋಜಿಸಿತ್ತು. ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಒಟ್ಟು 150 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ವಿವಿಧ ಇಲಾಖೆಗಳ ನೇಮಕಾತಿ ವಿವರ : ಹುಬ್ಬಳ್ಳಿಯಲ್ಲಿ ನೇಮಕಾತಿ ಪತ್ರ ಪಡೆದ ಅಭ್ಯರ್ಥಿಗಳ ವಿಭಾಗವಾರು ಭಾರತೀಯ ರೈಲ್ವೆ – 26, – ಇಂಡಿಯಾ ಪೋಸ್ಟ್ – 17, – ನೌಕರರ ರಾಜ್ಯ ವಿಮಾ ನಿಗಮ (ESIC) – 06, – ಬ್ಯಾಂಕ್ ಆಫ್ ಬರೋಡಾ – 37, – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – 10, – ಕೆನರಾ ಬ್ಯಾಂಕ್ – 08, – ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ- 46

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಯುವಕರ ಭವಿಷ್ಯಕ್ಕೆ ಬಲ : ಈ ಸಂದರ್ಭದಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, “ರೋಜ್‌ಗಾರ್ ಮೇಳ ಯುವ ಪೀಳಿಗೆಗೆ ವರದಾನವಾಗಿದ್ದು, ಸುಸ್ಥಿರ ಹಾಗೂ ಸದೃಢ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತಿದೆ” ಎಂದು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಸರ್ಕಾರಿ ಉದ್ಯೋಗಗಳ ಮೂಲಕ ದೇಶಸೇವೆಗೆ ಅವಕಾಶ ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರೈಲ್ವೆ ಜನರಲ್ ಮ್ಯಾನೇಜರ್ ಪಿ ಅನಂತ, ಡಿವಿಜನಲ್ ರೈಲ್ವೆ ಮ್ಯಾನೇಜರ್ ಬೇಲಾ ಮೀನಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.