Home Advertisement
Home ಸುದ್ದಿ ದೇಶ Online ಬುಕಿಂಗ್: ಹೆಚ್ಚುವರಿ ರದ್ದತಿ ಶುಲ್ಕ? CCPAಗೆ ತನಿಖೆ ಆದೇಶ

Online ಬುಕಿಂಗ್: ಹೆಚ್ಚುವರಿ ರದ್ದತಿ ಶುಲ್ಕ? CCPAಗೆ ತನಿಖೆ ಆದೇಶ

0
53

Online ಟ್ರಾವೆಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೇಂದ್ರದ ಕಣ್ಣು : ಗ್ರಾಹಕರ ಹಿತಾಸಕ್ತಿ ರಕ್ಷಣೆಗಾಗಿ ಸರ್ಕಾರದ ಮಹತ್ವದ ಹೆಜ್ಜೆ- ಶುಲ್ಕದಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಕ್ರಮದ ಎಚ್ಚರಿಕೆ

ನವದೆಹಲಿ: ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಂದ ಅತಿಯಾದ ರದ್ದತಿ ಶುಲ್ಕ ವಸೂಲಿ ಮಾಡುತ್ತಿರುವ ಆರೋಪಗಳ ಹಿನ್ನೆಲೆ ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ್‌ಜೋಶಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿಮಾನಯಾನ ಸಂಸ್ಥೆಗಳು ವಿಧಿಸುವ ಅಥವಾ ಬುಕ್ಕಿಂಗ್ ಸಮಯದಲ್ಲಿ ಬಹಿರಂಗಪಡಿಸುವ ಶುಲ್ಕಕ್ಕಿಂತ ಹೆಚ್ಚುವರಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ Central Consumer Protection Authority (CCPA) ಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಆನ್‌ಲೈನ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಶೀಲನೆ : ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳ ಕಾರ್ಯವಿಧಾನ ಮತ್ತು ಶುಲ್ಕ ಸಂಗ್ರಹಿಸುವ ವಿಧಾನವನ್ನು ಕೂಡ ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡದೇ ಹೆಚ್ಚುವರಿ ರದ್ದತಿ ಶುಲ್ಕ ವಿಧಿಸುವುದು ಪಾರದರ್ಶಕತೆ ಮತ್ತು ಗ್ರಾಹಕರ ನಂಬಿಕೆಗೆ ಧಕ್ಕೆ ತರುವ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಹಕರ ಹಕ್ಕು ಉಲ್ಲಂಘನೆ ಸಾಧ್ಯತೆ : ಈ ರೀತಿಯ ಪದ್ಧತಿಗಳು ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಅಡಿಯಲ್ಲಿ ಅನ್ಯಾಯದ ವ್ಯಾಪಾರ ಪದ್ಧತಿ ಅಥವಾ ಗ್ರಾಹಕರ ಹಕ್ಕು ಉಲ್ಲಂಘನೆ ಎಂದು ಪರಿಗಣಿಸಬಹುದಾಗಿದೆ ಎಂದು ಸಚಿವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮಾದಾವರ-ತುಮಕೂರು ಮೆಟ್ರೋ ಯೋಜನೆಗೆ ಡಿಪಿಆರ್ ಸಲ್ಲಿಕೆ

ಅಗತ್ಯವಿದ್ದರೆ ಕಾನೂನು ಕ್ರಮ : CCPA ಅಗತ್ಯವೆನಿಸಿದಲ್ಲಿ ವರ್ಗ ಕ್ರಮ (Class Action) ಸೇರಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದು ಹಾಗೂ ನ್ಯಾಯಯುತ ಸೇವೆ ದೊರೆಯುವಂತೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಯಾಣಿಕರಿಂದ ಹೆಚ್ಚುತ್ತಿರುವ ದೂರುಗಳು : ಇತ್ತೀಚಿನ ದಿನಗಳಲ್ಲಿ ವಿಮಾನ ಟಿಕೆಟ್ ರದ್ದತಿ ವೇಳೆ ವಿವಿಧ ಆನ್‌ಲೈನ್ ಟ್ರಾವೆಲ್ ಪೋರ್ಟಲ್‌ಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಮಾನಯಾನ ಸಂಸ್ಥೆಗಳು ಪ್ರಕಟಿಸುವ ಶುಲ್ಕಕ್ಕಿಂತ ಹೆಚ್ಚುವರಿ ಸೇವಾ ಶುಲ್ಕ, ಪ್ರೊಸೆಸಿಂಗ್ ಶುಲ್ಕ ಮತ್ತು ಇತರೆ ಕಟ್‌ಗಳನ್ನು ಸೇರಿಸಿ ಗ್ರಾಹಕರಿಗೆ ಕಡಿಮೆ ಮೊತ್ತವನ್ನು ಮರುಪಾವತಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಗ್ರಾಹಕರಿಗೆ ನೆರವಾಗುವ ನಿರೀಕ್ಷೆ: ಕೇಂದ್ರ ಸರ್ಕಾರದ ಈ ಕ್ರಮದಿಂದ ವಿಮಾನ ಪ್ರಯಾಣಿಕರಿಗೆ ಹೆಚ್ಚಿನ ಪಾರದರ್ಶಕತೆ ಹಾಗೂ ನ್ಯಾಯಯುತ ಶುಲ್ಕ ವ್ಯವಸ್ಥೆ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕಟ್ಟುನಿಟ್ಟಿನ ಮಾರ್ಗಸೂಚಿಗಳು ಜಾರಿಯಾಗುವ ಸಾಧ್ಯತೆಯೂ ಇದೆ.