ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಜೀರ್ಣೋದ್ಧಾರ ಮತ್ತು ಉತ್ಖನನ ಕಾರ್ಯ ಕೈಗೊಂಡಿದ್ದು, ವಿಜಯನಗರ ಸಾಮ್ರಾಜ್ಯದ ಹಜಾರರಾಮ ದೇವಸ್ಥಾನದ ದಕ್ಷಿಣದ ದ್ವಾರದ ಗೋಡೆಯ ಬಳಿ ಆನೆಯನ್ನು ಹೊಂದಿರುವ ಸುಂದರ ಕಲಾಕೃತಿ ದೊರೆತಿದೆ.
ದೇವಸ್ಥಾನದ ಸುತ್ತಮುತ್ತ ಉತ್ಖನನ ಮಾಡಿ ವ್ಯವಸ್ಥಿತವಾಗಿ ಹಾಸು ಬಂಡೆಗಳನ್ನು ಹಾಕಲಾಗುತ್ತಿದೆ. ಕಲಾಕೃತಿ ದೊರೆತ ಕೂಡಲೇ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪುರಾತತ್ವ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ಅಧಿಕಾರಿಗಳ ತಂಡದೊದಿಗೆ ಆಗಮಿಸಿ ಪರಿಶೀಲಿಸಿ ಇದನ್ನು ಸಂರಕ್ಷಿಸಿ ಜೀರ್ಣೋದ್ಧಾರ ಕಾರ್ಯವನ್ನು ಮಾಡಿ ಮರು ಜೋಡಿಸಲಾಗುವುದೆಂದು ತಿಳಿಸಿದರು.






















