ಅಹಮದಾಬಾದ್: ಸಾಯಿ ಸುದರ್ಶನ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್‌ಗಳನ್ನು ಪೇರಿಸಿತು.
ಇನ್ನಿಂಗ್ಸ್ ಆರಂಭದಲ್ಲಿಯೇ ನಾಯಕ ಶುಭಮನ್ ಗಿಲ್ (5) ಜೋಶ್ ಬಟ್ಲರ್ (7) ಅವರುಗಳ ವಿಕೆಟ್ ಕಳೆದುಕೊಂಡು ಗುಜರಾತ್ ಸಂಕಷ್ಟಕ್ಕೆ ಸಿಲುಕಿತು.
ನಿಶಾಂತ್ ಸಿಂಧು (22) ಕೆಲ ಸಮಯ ಕ್ರಿಸ್‌ನಲ್ಲಿ ನಿಂತು ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರಾದರೂ ಅವರನ್ನು ಔಟ್ ಮಾಡುವಲ್ಲಿ ಪ್ಯಾಟ್ ಕಮ್ಮಿನ್ಸ್ ಯಶ ಕಂಡರು.
ನಾಲ್ಕನೇ ವಿಕೆಟ್‌ಗೆ ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ 60 ರನ್‌ಗಳ ಜತೆಯಾಟ ನಡೆಸಿತು. ಈ ಜತೆಯಾಟ ತಂಡದ ಮೊತ್ತವನ್ನು ಹೆಚ್ಚುಸುವಲ್ಲಿ ನೆರವಾಯಿತು.
ಸಾಯಿ ಸುದರ್ಶನ್ 44 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿ ಸಕಿಬ್ ಹುಸೇನ್ ಎಸೆತದಲ್ಲಿ ಪ್ರಫುಲ್ ಹಿಂಗೆ ಅವರಿಗೆ ಕ್ಯಾಚ್ ನೀಡಿ ಹೊರನಡೆದರು.
ವಾಷಿಂಗ್ಟನ್ ಸುಂದರ್ 33 ಎಸೆತದಲ್ಲಿ 7 ಬೌಂಡರಿ, 1 ಸಿಕ್ಸರ್‌ನಿಂದ 50 ರನ್‌ಗಳಿಸಿ ಇನ್ನಿಂಗ್ಸ್‌ನ ಕೊನೆಯ ಓವರ್‌ನ 5ನೇ ಎಸೆತದಲ್ಲಿ ಪೆವಿಲಿಯನ್ ಸೇರಿದರು.
ಹೈದರಾಬಾದ್ ಪರ ಪ್ರಫುಲ್ ಹಿಂಗೆ 17ಕ್ಕೆ 2, ಸಕಿಬ್ ಹುಸೇನ್ 37ಕ್ಕೆ 2, ಪ್ಯಾಟ್ ಕಮ್ಮಿನ್ಸ್ 20ಕ್ಕೆ 1 ವಿಕೆಟ್ ಪಡೆದರು.























