Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಮೃತ ಆದಿತ್ಯನ ಊರಿನಲ್ಲಿ ನೀರವ ಮೌನ

ಮೃತ ಆದಿತ್ಯನ ಊರಿನಲ್ಲಿ ನೀರವ ಮೌನ

0
70

ಬಾಗಲಕೋಟೆ: ಸುಳ್ಳು ಕೇಸಿನಲ್ಲಿ ಪೊಲೀಸರ ದಬ್ಬಾಳಿಕೆಗೆ ಬಲಿಯಾಗಿರುವ ಬಾದಾಮಿ ತಾಲೂಕಿನ ಬೇವೂರು ಗ್ರಾಮದ ಆದಿತ್ಯ ಮ್ಯಾಗೇರಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಪ್ರತಿಭಾವಂತ ಆದಿತ್ಯನ ನಿಧನಕ್ಕೆ ಇಡೀ ಗ್ರಾಮವೇ ಮಮ್ಮಲ ಮರುಗುತ್ತಿದೆ.

ಚಿಕ್ಕವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ತಾಯಿ ಕವಿತಾ ಅವರದು ಕಷ್ಟದ ಬದುಕು. ಮನೆಗೆಲಸ ಮಾಡಿ ಜೀವನ ನಡೆಸಿದ ಕವಿತಾ ಅವರಿಗೆ ಕುಟುಂಬದ ಆಧಾರಸ್ತಂಭವಾಗಿದ್ದ ಆದಿತ್ಯನಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ತಾವೂ ಒಂದು ಹಂತಕ್ಕೆ ಬೆಳೆಯಬೇಕೆಂಬ ಕನಸಿತ್ತು. ಆದಿತ್ಯನ ಸಹೋದರಿ ಈಗಷ್ಟೇ ಪಿಯುಸಿ ಪೂರ್ಣಗೊಳಿಸಿದ್ದು ಶೇ.76 ಅಂಕ ಪಡೆದಿದ್ದಳು. ಅತ್ಯಂತ ಬಡತನದ ಮಧ್ಯೆಯೂ ಇಬ್ಬರೂ ಮಕ್ಕಳು ವಿದ್ಯಾವಂತರಾಗಿದ್ದರು. ತಾನು ಕಷ್ಟಪಟ್ಟು ದುಡಿದರೆ ಮುಂದೆ ಮಕ್ಕಳು ಎತ್ತರಕ್ಕೆ ಬೆಳೆಯುತ್ತಾರೆ ಎಂಬ ತಾಯಿ ನಂಬಿಕೆಯನ್ನು ಇಬ್ಬರು ಮಕ್ಕಳು ಸುಳ್ಳಾಗಿಸಿರಲಿಲ್ಲ. ಆದರೆ ಬಾಳಿ ಬದುಕಬೇಕಿದ್ದ ಆದಿತ್ಯನನ್ನು ಭ್ರಷ್ಟ ವ್ಯವಸ್ಥೆ ಬಲಿಪಡೆದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ತಾಯಿ ಕವಿತಾ ಏನೂ ತೋಚದೆ ಆಘಾತದಲ್ಲಿ ಕಣ್ಣೀರಾಗುತ್ತಿದ್ದಾರೆ. ಇಡೀ ಕುಟುಂಬಕ್ಕೆ ಆದಿತ್ಯನ ಆತ್ಮಹತ್ಯೆಯ ಸುದ್ದಿ ಬರಸಿಡಿಲಿನಂತೆ ಬಡಿದಿದೆ.

ಆದಿತ್ಯ ಧಾರವಾಡಕ್ಕೆ ಶಿಕ್ಷಣಕ್ಕೆ ತೆರಳುವುದಾಗಿ ತಿಳಿಸಿದ ನಂತರ ಕವಿತಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಧಾರವಾಡದಲ್ಲಿ ನೆಲೆಸಿ ಮನೆಗೆಲಸ, ಹಾಸ್ಟೆಲ್‌ಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು. ಆದಿತ್ಯನ ಬಳಿ ಹಣಕ್ಕೆ ಒತ್ತಾಯಿಸಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಗೊಳಿಸಲಾಗಿದೆ. ಆದರೆ ಕುಟುಂಬಕ್ಕೆ ಆಧಾರವಾಗಿದ್ದ ಆದಿತ್ಯ ಮರಳಿ ಬರಲಾರ ಎನ್ನುವುದು ಕುಟುಂಬದಕ್ಕೆ ಅರಗಿಸಿಕೊಳ್ಳಲಾಗುತ್ತಿದೆ.

ಪೊಲೀಸರು ಅಮಾಯಕರನ್ನು ಬೆದರಿಸಿ ದಬ್ಬಾಳಿಕೆ ನಡೆಸುವ ಪ್ರಕರಣಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಆದ್ದರಿಂದ ಆದಿತ್ಯ ಪ್ರಕರಣದ ತನಿಖೆಯನ್ನು ಸೂಕ್ತವಾಗಿ ನಡೆಸಬೇಕು. ತಪ್ಪಿತಸ್ಥರ ಅಮಾನತಿಗೆ ಕ್ರಮ ಸೀಮಿತವಾಗಬಾರದು. ಅವರಿಗೆ ತಕ್ಕ ಶಿಕ್ಷೆ ಆಗುವ ನಿಟ್ಟಿನಲ್ಲಿ ಪಾರದರ್ಶಕ ತನಿಖೆ ನಡೆಯಬೇಕೆಂದು ಆದಿತ್ಯನ ಸಂಬಂಧಿಕರು ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಆದಿತ್ಯ ತೀರಿಕೊಂಡು ಮೂರು ದಿನವಾದ ಪ್ರಯುಕ್ತ ಬುಧವಾರ ಬೇಲೂರಿನ ಮನೆಯಲ್ಲಿ ಮೂರನೇ ದಿನದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಆದಿತ್ಯನಿಗೆ ಬೆದರಿಕೆ ಹಾಕಿರುವ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಈ ಸಂಬಂಧ ಹಿರಿಯರು ಸಲಹೆ ಪಡೆದುಕೊಂಡು ಹೆಜ್ಜೆ ಇಡುತ್ತೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.