ಸಂ.ಕ.ಸಮಾಚಾರ ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಾರ್ ಮುಂಭಾಗ ನಿಂತಿದ್ದ ಕಾರೊಂದು ಏಕಾಏಕಿ ಭಾರೀ ಸ್ಫೋಟಗೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರು ಸುಮಾರು 10 ಅಡಿ ಎತ್ತರಕ್ಕೆ ಹಾರಿ ಬಿದ್ದಿದೆ, ಅದರ ಅವಶೇಷಗಳು ಸುಮಾರು 200 ಮೀಟರ್ ದೂರದವರೆಗೆ ಚದುರಿಬಿದ್ದಿವೆ. ಘಟನೆಯಲ್ಲಿ ಕಾರಿನ ಅವಶೇಷಗಳು ಬಡಿದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.
ಘಟನೆ ಶನಿವಾರ ರಾತ್ರಿ ಸುಮಾರು 10.30ರ ವೇಳೆಗೆ ನಡೆದಿದೆ. ಸ್ಫೋಟದ ಸದ್ದು ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಕೆಲಕಾಲ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ಫೋಟದ ಪ್ರಭಾವದಿಂದ ಸಮೀಪದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಮಾನಿಟರ್ ಕೂಡ ಹಾನಿಗೊಳಗಾಗಿದೆ.
ಅದೃಷ್ಟವಶಾತ್ ಕಾರಿನ ಬಳಿ ಇರಲಿಲ್ಲ ಮಾಲೀಕ : ಕಾರು ಮಾಲೀಕ ಹನುಮಂತ ಸಾವಗೊಂಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಾವು ರಬಕವಿ ಮೂಲದವರಾಗಿದ್ದು, ಹಿಪ್ಪರಗಿಯಲ್ಲಿ ವೈನ್ ಶಾಪ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. “ರಾತ್ರಿ ಅಂಗಡಿಯ ವಹಿವಾಟು ಮುಗಿಸಿ ಹಣ ಎಣಿಸುತ್ತಿದ್ದೆ. ಇನ್ನೇನು ವಾಹನದ ಬಳಿ ಹೋಗಬೇಕೆಂದಿದ್ದಾಗಲೇ ಕಾರು ಏಕಾಏಕಿ ಸ್ಫೋಟಗೊಂಡಿತು. ನಾನು ವಾಹನದ ಬಳಿ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು,” ಎಂದು ಅವರು ಹೇಳಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ಇನ್ನೂ ನಿಗೂಢ : ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ ಗೋಯಲ್ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
“ಸಿಸಿಟಿವಿ ದೃಶ್ಯಾವಳಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಕಾರು ಮಾಲೀಕ ಬಾರ್‌ಗೆ ಬಂದ ಕ್ಷಣದಿಂದ ಘಟನೆಯವರೆಗಿನ ಎಲ್ಲ ದೃಶ್ಯಗಳು ದಾಖಲಾಗಿವೆ. ಆದರೆ ಕಾರಿನ ಬಳಿ ಯಾರಾದರೂ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿಲ್ಲ. ರಾತ್ರಿ ಸುಮಾರು 9.45ರ ವೇಳೆಗೆ ಮೂವರು ಮದ್ಯ ಖರೀದಿಸಿ ತೆರಳಿರುವುದು ಮಾತ್ರ ದೃಶ್ಯದಲ್ಲಿ ಕಂಡುಬಂದಿದೆ. ಅವರ ಬಗ್ಗೆ ಸಹ ಮಾಹಿತಿ ಕಲೆಹಾಕಲಾಗುತ್ತಿದೆ,” ಎಂದು ಎಸ್‌ಪಿ ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ, ಎಫ್‌ಎಸ್‌ಎಲ್ ತಂಡ ಪರಿಶೀಲನೆ : ಘಟನೆಯ ಗಂಭೀರತೆಯನ್ನು ಗಮನಿಸಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ (ಡಾಗ್ ಸ್ಕ್ವಾಡ್) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರು ಕೂಡ ಸ್ಫೋಟದ ಮಾದರಿಯನ್ನು ಪರಿಶೀಲಿಸುತ್ತಿದ್ದು, ವಿವಿಧ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರಿನ ಇಂಜಿನ್ ಭಾಗದಲ್ಲಿ ಸ್ಫೋಟ ಸಂಭವಿಸಿರುವುದು ಕಂಡುಬಂದಿದೆ. ಬ್ಯಾಟರಿ ಅಥವಾ ಇಂಜಿನ್‌ಗೆ ಸಂಬಂಧಿಸಿದ ತಾಂತ್ರಿಕ ದೋಷದಿಂದ ಸ್ಫೋಟ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ಯಾವುದೇ ಸಾಧ್ಯತೆಯನ್ನು ತಳ್ಳಿಹಾಕದೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಂತ್ರಿಕ ದೋಷವೇ? ಅಥವಾ ಇನ್ನೇನಾದರೂ ಕಾರಣವೇ? : ಕಾರು ಸ್ಫೋಟದ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ತಾಂತ್ರಿಕ ದೋಷ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದನ್ನು ಪೊಲೀಸರು ಹಾಗೂ ತಜ್ಞರ ತಂಡ ಪರಿಶೀಲಿಸುತ್ತಿದೆ. ತನಿಖಾ ವರದಿ ಬಂದ ಬಳಿಕವೇ ಸ್ಫೋಟದ ನಿಖರ ಕಾರಣ ಸ್ಪಷ್ಟವಾಗುವ ಸಾಧ್ಯತೆ ಇದೆ.






















