SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಸುತ್ತಿಗೆಯಿಂದ ಹೊಡೆದು ಪತ್ನಿ, ಏಳು ತಿಂಗಳ ಮಗಳನ್ನೇ ಕೊಂದ ಪಾಪಿ

ಸುತ್ತಿಗೆಯಿಂದ ಹೊಡೆದು ಪತ್ನಿ, ಏಳು ತಿಂಗಳ ಮಗಳನ್ನೇ ಕೊಂದ ಪಾಪಿ

0
293

ಬಳ್ಳಾರಿ: ಪತ್ನಿಯ ಶೀಲದ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ಏಳು ತಿಂಗಳ ಮಗಳು ತನ್ನದಲ್ಲ ಎಂಬ ಶಂಕೆಯಿಂದ ಪತ್ನಿ ಹಾಗೂ ಕಂದಮ್ಮನನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಳ್ಳಾರಿ ನಗರದ ಆಂದ್ರಾಳ್ ಗ್ರಾಮದಲ್ಲಿ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೊನ್ನೂರಪ್ಪ (28)ನನ್ನು ಎಪಿಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ರಾಜೇಶ್ವರಿ (24) ಹಾಗೂ ಅವರ ಏಳು ತಿಂಗಳ ಮಗಳು ಅಶ್ವಿನಿ ಎಂದು ಗುರುತಿಸಲಾಗಿದೆ.

ಹೊನ್ನೂರಪ್ಪ ಮತ್ತು ರಾಜೇಶ್ವರಿ ಸುಮಾರು ಆರು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದರು. ಕಳೆದ ಕೆಲವು ದಿನಗಳಿಂದ ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಆರೋಪಿ, ಕಿರಿಯ ಮಗಳು ಆಶ್ವಿನಿ ತನ್ನ ಸಂತಾನವಲ್ಲ ಎಂದು ಹೇಳಿಕೊಂಡು ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.

ಜುಲೈ 30ರಂದು ರಾತ್ರಿ ಇದೇ ವಿಚಾರವಾಗಿ ದಂಪತಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಹೊನ್ನೂರಪ್ಪ ಮನೆಯಲ್ಲಿದ್ದ ಸುತ್ತಿಗೆಯಿಂದ ಪತ್ನಿ ಹಾಗೂ ಏಳು ತಿಂಗಳ ಮಗುವಿನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.