ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಹೆಣದಿಂದಲೂ ಹಣ ಪೀಕಿಸುತ್ತಾರೆ. ಇದು ಪೊಲೀಸರ ಮೇಲಿನ ಮಾಮೂಲಿ ಆರೋಪ. ಆದರೆ ಈಗ ಹಣಕ್ಕಾಗಿಯೇ ಹೆಣ ಕೆಡವುತ್ತಾರೆ! ಪೊಲೀಸರ ಹಣ ಪೀಕುವ ದಂಧೆಗೆ ಧಾರವಾಡಕ್ಕೆ ಕಲಿಯಲು ಬಂದ ಹತ್ತೊಂಭತ್ತು ವರ್ಷದ ಬಡ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಸಾವಿನ ಪ್ರಕರಣ ಅತ್ಯಂತ ಕ್ರೂರವಾಗಿದೆ.
ಸರ್ಕಾರದ `ಗಾಂಜಾ ಮುಕ್ತಿ ಅಭಿಯಾನ’ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ಜೇಬು ತುಂಬಿಸುವ, ಅಮಾಯಕರನ್ನು ಹಿಂಸಿಸುವ ದಂಧೆಯಾಗಿದೆ. ನಾಲ್ಕು ದಿನದ ಹಿಂದೆ ಬಾಗಲಕೋಟೆ ಜಿಲ್ಲೆಯ ಆದಿತ್ಯ ಮ್ಯಾಗೇರಿ ತನ್ನ ಸ್ಟಡಿ ಸರ್ಕಲ್‌ನೊಂದಿಗೆ ನಿಂತಿದ್ದ. ಆಗ ಪೊಲೀಸರು ಯಾರದ್ದೋ ಮನೆಗೆ ನುಗ್ಗಿ, ಯರ‍್ಯಾರನ್ನೋ ಹಿಡಿದು, ನಲವತ್ತು ಜನರನ್ನು ಗಾಂಜಾ ಸೇವಕರಿರಬಹುದು ಎಂದು ಎಳೆದೊಯ್ದರು. ಸ್ನೇಹಿತರ ಜೊತೆ ಹೊರಗಡೆ ನಿಂತಿದ್ದ ಆದಿತ್ಯನನ್ನೂ ಎಳೆದುಕೊಂಡರು. ತಾನು ಅಂಥವನಲ್ಲ. ಕಲಿಯಲು ಬಂದ ವಿದ್ಯಾರ್ಥಿ ಎನ್ನುವ ಯಾವುದೇ ಮನವಿ ಪೊಲೀಸರ ಹೃದಯ ಕಲಕಲಿಲ್ಲ. ನಾಲ್ಕು ಬಾರಿಸಿದರು. ಗಾಂಜಾ ಟೆಸ್ಟ್ ಮಾಡಿಸಿದರು. ನೆಗೆಟಿವ್ ಬಂತು. ಬಿಟ್ಟು ಬಿಡಿ ಎಂದು ಗೋಗರೆದರೆ ಹತ್ತು ಸಾವಿರ ಕೊಟ್ಟರೆ ಬಿಡುವುದಾಗಿ ಹೇಳಿದರು. ತನ್ನ ಬಳಿ ದುಡ್ಡಿಲ್ಲ. ತಾಯಿ ಮನೆಗೆಲಸದಾಕೆ ಎಂದರೂ ಕೇಳಲಿಲ್ಲ. ಎರಡು ಸಾವಿರ ರೂಪಾಯಿಯನ್ನಾದರೂ ಕೊಡು ಎಂದು ಬೇಡಿಕೆ ಇಟ್ಟರು. ಈ ಹುಡುಗ ತಾಯಿಯಿಂದ ಕಷ್ಟ ಪಟ್ಟು ಎರಡು ಸಾವಿರ ತರಿಸಿ ಕೊಟ್ಟ ನಂತರ ಬಿಟ್ಟರು.
ಮರುದಿನದಿಂದ ಪೊಲೀಸರಿಂದ ಹಣಕ್ಕೆ ಕಿರಿಕಿರಿ. `ಹಣ ಇನ್ನಷ್ಟು ಕೊಡು.. ಇಲ್ಲ ಬೇರೆ ಕೇಸಲ್ಲಿ ಫಿಟ್ ಮಾಡುತ್ತೇವೆ..’ .ಇದಕ್ಕೆ ಬೇಸತ್ತು ಆದಿತ್ಯ ಮನೆಯಲ್ಲಿ ನೇಣು ಹಾಕಿಕೊಂಡ.
ಇದು ಹುಬ್ಬಳ್ಳಿ-ಧಾರವಾಡದ ಆದಿತ್ಯನೊಬ್ಬನ ಪ್ರಕರಣವಲ್ಲ. ಆದಿತ್ಯ ತಂದೆಯಿಲ್ಲದವ. ತಾಯಿ ಮನೆಗೆಲಸ ಮಾಡಿ ದೂರದ ಬಾಗಲಕೋಟೆಯಿಂದ ಧಾರವಾಡಕ್ಕೆ ಕಲಿಯಲು ಕಳಿಸಿದ್ದರು. ದುರಂತ ನೋಡಿ. ತಂದೆ ಇಲ್ಲ. ಇದ್ದ ಅಣ್ಣನೊಬ್ಬ ನಾಲ್ಕು ವರ್ಷದ ಹಿಂದೆ ಕಾಲದವಶವಾದ. ತಂಗಿಯೊಬ್ಬಳೇ ಮನೆಯಲ್ಲಿ. ಈ ಸಾವಿಗೆ ನ್ಯಾಯ ಕೊಡುವವರು ಯಾರು. ಪಾಲಕರು ದೂರು ಕೊಟ್ಟರೆ ಕೇಸು ದಾಖಲಿಸುವುದಾಗಿ ಈಗ ಪೊಲೀಸ್ ಆಯುಕ್ತರು ಹೇಳುತ್ತಾರೆ! ಎಂತಹ ದುರವಸ್ಥೆ ನೋಡಿ. ತಾಯಿಯೇ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿಕೊಂಡು ಯಾರಿಗೋ ಅಂಗಾಲಾಚಿಸಿ ಪುತ್ರನ ಶವವನ್ನು ಊರಿಗೆ ಸಾಗಿಸಿದಳು.. ಅಮಾಯಕರ ಸಾವಿಗೆ ಧಾರವಾಡ ಮಂದಿ ಧ್ವನಿ ನೀಡಲಿಲ್ಲ. ಇನ್ನೆಷ್ಟು ಅಮಾಯಕರ ಹೆಣ ಬೇಕು ಆಯುಕ್ತರೇ? ಎಂಬ ಪ್ರಶ್ನೆ ಪೊಲೀಸರಿಗೆ ಅಂಜಿ ತೆಪ್ಪಗುಳಿದರೇ? ಕಲ್ಯಾಣ ರಾಜ್ಯ ನಮ್ಮದು ಎನ್ನುವ ಆಡಳಿತಕ್ಕೇಕೆ ದಪ್ಪ ಚರ್ಮ?
ಕಳೆದ ಐದು ತಿಂಗಳಲ್ಲಿ ಪೊಲೀಸ್ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳೇ ಭ್ರಷ್ಟಾಚಾರ, ಲಂಚದ ಹಗರಣಗಳಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜನವರಿಯಿಂದ ಈವರೆಗೆ ಕೇವಲ ಮೂರುವರೆ ತಿಂಗಳಲ್ಲಿ 25ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಲುಕಿದ್ದಾರೆ. ಬಾಗಲಕೋಟೆ ಜಿಲ್ಲೆ ಕೆರೂರಿನಲ್ಲಿ ಪಿಎಸ್‌ಐ ಲಂಚ ಪೀಕಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದಾಗ, ಇಡೀ ಕೆರೂರು ಜನ ಪಟಾಕಿ ಸಿಡಿಸಿ, `ಮಹಾ ಭ್ರಷ್ಟ ತೊಲಗಿದ’ ಎಂದು ಸಂಭ್ರಮಿಸಿದರು!
ಲಕ್ಷ, ನಾಲ್ಕು ಲಕ್ಷ, ಐವತ್ತು ಸಾವಿರ ಲಂಚದ ಹಣದ ಥೈಲಿಯೇ ಪೊಲೀಸ್ ಠಾಣೆಗಳಲ್ಲಿ ನಡೆದಿದೆ. ಸಿವಿಲ್ ವ್ಯಾಜ್ಯಗಳ ಪರಿಹಾರ ಠಾಣೆಗಳಲ್ಲಿ ನಡೆಯುತ್ತಿದೆ. ರಿಯಲ್ ಎಸ್ಟೇಟ್ ದಂಧೆ ಮತ್ತು ಮಾದಕ ದ್ರವ್ಯಗಳ ಸಾಗಾಟದಾರರಿಗೆ ಪೊಲೀಸರೇ ರಕ್ಷಣೆಯಾದಂತಹ ದೃಶ್ಯ ಕಾಣುತ್ತಿದೆ.. ರಾಮಚಂದ್ರರಾವ್ ಕಚೇರಿಯಲ್ಲೇ ಅನೈತಿಕ, ಅಶ್ಲೀಲ ದಂಧೆ ನಡೆಸಿರುವುದು ಹಿಂದಿನದಾಯಿತು. ಬಹುತೇಕ ಅಧಿಕಾರಿಗಳ ಇಂತಹ ನೂರಾರು ಪ್ರಕರಣಗಳು ಪ್ರತಿ ಠಾಣೆಯ ಗೋಡೆಗಳು ಹೇಳುತ್ತಿವೆ! ಬಯಲಿಗೆ ಬಂದಿಲ್ಲ ಅಷ್ಟೇ.
ಮಾನ್ಯ ಗೃಹ ಸಚಿವರೋ ನೈತಿಕತೆಯ ಪಾಠ ಹೇಳುತ್ತಾರೆ. ಈ ಅನೈತಿಕ ದಂಧೆ ನಡೆಸುವವರ ಮುಂದೆ… ಹಣಕ್ಕಾಗಿ ಹೆಣ ಬೀಳಿಸುವವರ ಮುಂದೆ…!! ಪೊಲೀಸರ ಅಮಾನವೀಯತೆ ಅರಳಬೇಕಿದ್ದ ಜೀವ ಬಲಿಪಡೆದ ದಾರುಣ ಘಟನೆ ರಾಜ್ಯವನ್ನು ಕಂಗೆಡಿಸಿದಂತೆಯೇ, ಸಾಕಿ ಬೆಳೆಸಿದ ಹೆತ್ತವರ ಬದುಕಿಗೂ ಗೌರವ ಇಲ್ಲದಂತೆ ನಡೆದುಕೊಂಡು ಮನುಷ್ಯತ್ವರಹಿತ ಇನ್ನೊಂದು ಘಟನೆ ಪ್ರಜ್ಞಾವಂತರೆಲ್ಲರನ್ನೂ ದಂಗಾಗಿಸಿದೆ.
ಬೆಳಗಾವಿಯ ಘಟನೆ ನೋಡಿ… ಇಬ್ಬರು ಮಕ್ಕಳನ್ನು ಹೆತ್ತು, ಬೆಳೆಸಿ, ಕಲಿಸಿ ನಂತರ ಕೆಲಸಕ್ಕೆ ಹಚ್ಚಿದ ತಾಯಿ ಅಂಜನಾ, ಬೆಳಗಾವಿಯ ಶಾಹು ನಗರದಲ್ಲಿ ವೃದ್ಧಾಪ್ಯವನ್ನು ಕಳೆಯುತ್ತಿದ್ದರು, ಒಬ್ಬಂಟಿಯಾಗಿ. ಅಕ್ಕಪಕ್ಕದವರ ನೆರವಿನಿಂದ ಈ ವೃದ್ಧೆ ಹೇಗೋ ಜೀವನ ಸಾಗಿಸುತ್ತಿದ್ದರು. ನಿಮ್ಮ ತಾಯಿ ಮೃತಪಟ್ಟಳು, ಬನ್ನಿ ಎಂದು ಇಬ್ಬರು ಪುತ್ರರಿಗೂ ಅಕ್ಕಪಕ್ಕದವರು ಸುದ್ದಿ ಮುಟ್ಟಿಸಿದರು.
ಈ ಪುತ್ರರಿಂದ ಬಂದ ಉತ್ತರ ಮಾತ್ರ ಇಡೀ ಸಮಾಜ ತಲೆತಗ್ಗಿಸುವಂತಿತ್ತು. `ನಾವು ಬರಲು ಸಾಧ್ಯವಾಗದು. ಅದೇನು ಮಾಡಬೇಕೋ ಅದನ್ನೆಲ್ಲ ನೀವೇ ಮಾಡಿಬಿಡಿ. ನಾವು ಬ್ಯೂಸಿ ಇದ್ದೇವೆ. ಬರಲ್ಲ’. ಅಷ್ಟೇ ಅಲ್ಲ. ಆ ನಂತರ ಫೋನ್ ಸ್ವಿಚ್ ಆಫ್ ಮಾಡಿ, ತಾಯಿ ಶವ ಏನಾಯ್ತು ಎಂದೂ ವಿಚಾರಿಸದ ಮಕ್ಕಳು! ಪಾಪ. ಸ್ಥಳೀಯ ನಗರ ಸೇವಕರಾದ ಶಂಕರ ಪಾಟೀಲ, ಗಂಗಾಧರ ಪಾಟೀಲ ಮೊದಲಾದವರು ಈಕೆಯ ಅಂತ್ಯಸಂಸ್ಕಾರ ನಡೆಸಿದರು. ಬಹುಶಃ ಆ ಜೀವ ಬದುಕಿನುದ್ದಕ್ಕೂ ಎಂತಹ ಮಕ್ಕಳನ್ನು ಹೆತ್ತುಬಿಟ್ಟೆ ಎಂದು ಪಶ್ಚಾತ್ತಾಪಪಟ್ಟಿರಲಿಕ್ಕಿಲ್ಲ!? ಎಂತಹ ದುರುಳರಲ್ಲವೇ?
ಕೋವಿಡ್ ವೇಳೆ ಇಂತಹ ನೂರಾರು ಪ್ರಕರಣಗಳ ವರದಿಗಳಿದ್ದವು. ಆದರೆ ಆಗಿನ ಸನ್ನಿವೇಶ ಬೇರೆ ಇತ್ತು. ನಿರ್ಬಂಧಗಳಿದ್ದವು. ಆಸ್ಪತ್ರೆಯಿಂದ ದೇಹ ಕೊಡುತ್ತಿರಲಿಲ್ಲ ಇತ್ಯಾದಿಗಳಿದ್ದವು. ಅನಾಥರಾಗಿದ್ದರೆ ಈ ಮಾತು ಬರುತ್ತಿರಲಿಲ್ಲ. ಪುತ್ರರಿದ್ದೂ, ಅದೇ ಅಕ್ಕಪಕ್ಕ ಊರಲ್ಲಿದ್ದರೂ ಬಾರದ ದುರುಳರು ಈ ದೇಶದಲ್ಲಿ ಹೆಚ್ಚಾಗುತ್ತಿದ್ದಾರೆ. ದೇಶ-ರಾಜ್ಯದಲ್ಲಿ ಸಾವಿರಾರು ಇಂತಹ ಘಟನೆಗಳು ಜರುಗಿವೆ. ಮಕ್ಕಳಿದ್ದರೂ ತಂದೆ-ತಾಯಿ ಅನಾಥರಾಗುವುದು, ವೃದ್ಧಾಶ್ರಮಗಳು ಹೆಚ್ಚುತ್ತಿರುವುದು, ವೃದ್ಧಾಶ್ರಮಗಳಿಗೆ ಮಕ್ಕಳೂ ಬಾರದಿರುವುದು, ಅಲ್ಲಿ ಮೃತಪಟ್ಟರೂ ಅಂತ್ಯಸಂಸ್ಕಾರಕ್ಕೆ ಬಾರದವರು ಹೆಚ್ಚಾಗುತ್ತಿದ್ದಾರೆ… ಇಂಥ ಸಮಾಜ- ಮಂದಿಯ ಜೊತೆಗೆ ಮನುಷ್ಯತ್ವ, ಮಾನವೀಯತೆ, ರಕ್ತ ಸಂಬಂಧ ಹುಡುಕುವುದೆಲ್ಲಿ?
ಭಾರತದ ಗಟ್ಟಿ ಬೇರಿರುವುದೇ ರಕ್ತ ಸಂಬಂಧ, ಮಕ್ಕಳು, ಕುಟುಂಬ, ಸಮಾಜ, ಸಾಮಾಜಿಕ ಕರ್ತವ್ಯ, ಜವಾಬ್ದಾರಿ, ನಂಬಿಕೆಗಳ ತಳಹದಿಯ ಮೇಲೆ. ಈಗ ಈ ಬೇರು ಸಡಿಲಗೊಂಡಿವೆ. ಭಾರತೀಯ ಕೌಟುಂಬಿಕ ಕಟ್ಟಡ ಕುಸಿದು ಬೀಳಲು ಬಹಳ ಕಾಲ ಇಲ್ಲವೇನೋ?
ಈಗ ಸಂಸದರಾಗಿರುವ ಡಾ.ಸಿ.ಎನ್.ಮಂಜುನಾಥ, ಮೊನ್ನೆ ಹುಬ್ಬಳ್ಳಿಯಲ್ಲಿ `ನೆಮ್ಮದಿ ಬದುಕು, ಆರೋಗ್ಯ ಶೈಲಿ’ ಕುರಿತು ಮಾತನಾಡುತ್ತ, 142 ಕೋಟಿ ಮನುಷ್ಯರಿರುವ ಭಾರತದಲ್ಲಿ, ಮನುಷ್ಯತ್ವ ಉಳ್ಳವರು ಎಷ್ಟು? ಜನಗಣತಿಯಲ್ಲಿ ಗೊತ್ತಾಗುತ್ತಾ ಎಂದು ಅರ್ಥಪೂರ್ಣರಾಗಿ ಪ್ರಶ್ನಿಸಿದರು. ಕೇವಲ ನಲವತ್ತಾರು ಲಕ್ಷ ಮಂದಿಯಷ್ಟೇ ಈ ಮಾನದಂಡಕ್ಕೆ ಹೊಂದುವವರು. ಅಂಥವರಿಂದಲೇ ಇನ್ನೂ ಸಮಾಜದ ತಳಸ್ತರ ಉಳಿದಿರುವುದು!.
ನಿರ್ದಯಿ ಪೊಲೀಸ್ ಮತ್ತು ನಿಷ್ಕರುಣಿ ಪುತ್ರರ ಪ್ರಸಂಗಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ನಮ್ಮ ಸಮಾಜದ ದುರಂತಕ್ಕೆ ಕನ್ನಡಿ ಹಿಡಿದರೆ, ಉತ್ತರ ಕನ್ನಡ ಜಿಲ್ಲೆ ಜೋಯಿಡಾ ಹಾಗೂ ಚಾಮರಾಜನಗದ ಘಟನೆಗಳು ವ್ಯವಸ್ಥೆಯ ಅಮಾನವೀಯತೆ ಮತ್ತು ಜಡತ್ವಕ್ಕೆ ನಿದರ್ಶನದಂತಿವೆ.
ರಾಜ್ಯದ ಅತ್ಯಂತ ಹಿಂದುಳಿದ ಮತ್ತು ಗೊಂಡಾರಣ್ಯ ಪ್ರದೇಶವಾದ ಜೊಯಿಡಾದಲ್ಲಿ ಹಿರಿಯ ರಾಜಕಾರಣಿ ಆರ್.ವಿ. ದೇಶಪಾಂಡೆ ಅಹವಾಲು ಸ್ವೀಕಾರದ ಸಭೆ ಕರೆದಿದ್ದರು. ಆಗ ವೃದ್ಧನೊಬ್ಬ ಮುಂದೆ ಬಂದು ಸಾಹೇಬ್ರ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಹೌದೋ ಅಲ್ಲೋ' ಅಂದ.ನಾ ಜೀವಂತ ಇದ್ದೀನೋ ಇಲ್ಲೋ’ ಎನ್ನುವ ಆ ವೃದ್ಧನ ಪ್ರಶ್ನೆ ಎಲ್ಲರನ್ನೂ ಆವಾಕ್ಕಾಗಿಸಿತು. ನಾನು ಬದುಕಿದ್ದೇನೆ ಎನ್ನುವುದಕ್ಕೆ ಒಂದು ಆಧಾರ್ ಕಾರ್ಡ್ ಕೂಡ ಕೊಡ್ತಿಲ್ಲ. ಯಾವುದೇ ಸರ್ಕಾರಿ ಸೌಲಭ್ಯ ಇಲ್ಲ. ರೇಷನ್ ಕಾರ್ಡ್ ಅದೂ ಇದು ಬಿಟ್ಟಾಕ್ರೀ ಸಾಹೇಬ್ರ. ನಾನು ಬದುಕಿದ್ದೀನಿ ಎಂಬುದಕ್ಕೆ ಒಂದು ಆಧಾರ್ ಕಾರ್ಡ್ ಆದ್ರೂ ಕೊಡಿಸಿಯಲ್ಲ. ಐವತ್ತು ಸಾರಿ ಅರ್ಜಿ ಹಾಕಿದ್ದೀನಿ ಆಧಾರ್ ಕೊಡಿ ಎಂದು. ನಾ ಅನಾಥ ಇದ್ದೀನಿ. ಆದ್ರ ಜೀವಂತ ಇದ್ದೀನಲ್ಲ… ಎಂದ. ಆರವತ್ತೆಂಟು ವರ್ಷದ ಈ ಮುದುಕ ಯಾವುದೇ ಗುರುತು- ಪತ್ತೆ- ದಾಖಲೆ ಇಲ್ಲದೇ ಇಷ್ಟು ವರ್ಷ ಕಳೆದ. ಈಗೇಕೋ ಬಾಯಿ ಬಂತೋ ಅಥವಾ ಕೇಳೋಕ್ಕೆ ಅವಕಾಶ ದೊರೆಯಿತೋ?
ಸ್ವತಃ ಆ ಶಾಸಕರು, ಅಧಿಕಾರಿಗಳು ತಲೆತಗ್ಗಿಸುವಂತಾಯಿತು. ಎಂತಹ ಅವಸ್ಥೆ ನೋಡಿ ಇದು. ಜೀವಂತ ಇರುವುದನ್ನು, ಬದುಕಿರುವ ವ್ಯಕ್ತಿ ಸಾಬೀತು ಮಾಡಲು ಒಂದು ಪ್ರಮಾಣ ಪತ್ರ ಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ಒದಗಿಸಲಾಗಿದೆ ಎನ್ನುವ ಆಳುವವರ ಘೋಷಣೆ ಯಾರಿಗೆ? ಎಲ್ಲಿದೆ? ಏನಾಯ್ತು ಎನ್ನುವುದನ್ನೇ ಈ ವೃದ್ಧನ ಘಟನೆ ಎತ್ತಿ ತೋರಿಸುವಂತಾಯಿತು.
ಚಾಮರಾಜನಗರ ಘಟನೆ ನೋಡಿ. ಸ್ವತಃ ಮುಖ್ಯಮಂತ್ರಿಯೇ ಮಧ್ಯ ಪ್ರವೇಶಿಸಬೇಕಾಯಿತು. ಆರ್.ಕೆಂಪಮ್ಮ ಎನ್ನುವ ಮಹಿಳೆ ಚಾಮರಾಜನಗರದಲ್ಲಿ ಮೂರು ವರ್ಷದ ಹಿಂದೆ ಅಸುನೀಗಿದರು. ಆದರೆ ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಅದೇ ಊರಿನ ವiತ್ತೊಬ್ಬ ಕೆಂಪಮ್ಮಳ ಮರಣ ಪತ್ರ ಹೊರಡಿಸಿ, ಎಲ್ಲ ದಾಖಲೆಗಳಿಂದ ಕಿತ್ತೊಗೆದರು. ಪಾಪ. ಜೀವಂತ ಇರುವ ಕೆಂಪಮ್ಮನಿಗೆ ಬರುತ್ತಿದ್ದ ಮಾಸಾಶನ, ಕುಟುಂಬ ಕಲ್ಯಾಣ ನಿಧಿ, ರೇಷನ್ ಕಾರ್ಡ್ ಎಲ್ಲವೂ ಕಟ್ ಆದವು. ಭೂ ದಾಖಲೆಗಳಲ್ಲೂ ಹೆಸರು ವಜಾ ಆಯಿತು. ತನಗೆ ಪಿಂಚಣಿ ಏಕೆ ಬರುತ್ತಿಲ್ಲ ಎಂದು ವಿಚಾರಿಸಲು ಕಚೇರಿಗೆ ಹೋದರೆ, `ಏ ನೀನು ಸತ್ತು ವರ್ಷಗಳಾದವಲ್ಲ’ ಎಂದು ದಾಖಲೆ ತೋರಿಸಲಾಯಿತು. ನಾನೇ ಕೆಂಪಮ್ಮರೀ… ನಾನು ಜೀವಂತ ಇದ್ದೀನಿ ಎಂದರೂ ಅಲೆದಾಟ ಮುಂದುವರಿಯಿತು.
ಇತ್ತೀಚೆಗೆ ಮಾಧ್ಯಮ ಈ ಗೋಳಾಟ ಬಯಲಿಗೆ ಎಳೆದಾಗಲೇ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕಾಯಿತು. ಒಬ್ಬ ಸಿಬ್ಬಂದಿಯ ಅಚಾತುರ್ಯ ವೃದ್ಧ ಮಹಿಳೆಯ ಜೀವನವನ್ನು, ಬದುಕನ್ನು ತಲ್ಲಣಗೊಳಿಸಿತು. ಸಿಬ್ಬಂದಿ ನೀಡಿದ ಉತ್ತರ, ಅದು ಸಾಫ್ಟ್ವರ‍್ರಿ. ದಾಖಲೆ ಎಂಟ್ರಿ ಆಗಿದೆ. ಹೇಗೆ ತಿದ್ದೋದ್ರೀ. ನಮಗೆ ಆ ಅಧಿಕಾರ ಇಲ್ಲ… ಎನ್ನುವುದು. ಕೆಳ ಹಂತದಿಂದ ಆರ್‌ಐ ಹಾಗೂ ಮೇಲಿನ ಮಟ್ಟದವರೆಗೆ ಭೇಟಿಯಾದರೂ ಯಾರೂ ತಿದ್ದಲಿಲ್ಲ. ಬದಲಿಸಲಿಲ್ಲ. ಜೀವಂತ ಕೆಂಪಮ್ಮ ಅಲೆದಾಡಿದ್ದೇ ಬಂತು!
ತಂತ್ರಜ್ಞಾನ ಜನಸ್ನೇಹಿ ಆಗಿಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ರಾಜ್ಯದ ಕಂದಾಯ ಇಲಾಖೆಯ `ಕಾವೇರಿ 2.0′ ಸಾಫ್ಟ್‌ವೇರ್ ಸಾಕ್ಷಿ. ಇದೊಂದು ಭ್ರಷ್ಟ ವ್ಯವಸ್ಥೆಯನ್ನು ಇನ್ನಷ್ಟು ಉತ್ತೇಜಿಸುವ, ಹಣ ದೋಚುವ, ಜಗತ್ತಿನಲ್ಲೇ ಅತ್ಯಂತ ಕೆಟ್ಟ ಸಾಫ್ಟ್ವೇರ್ ಎಂದು ಮಾಹಿತಿ ತಂತ್ರಜ್ಞರೇ ಈಗ ಉಗುಳಿದ್ದಾರೆ. ಈ ನಾಡಿನಲ್ಲಿ ಜನಸ್ನೇಹಿ ಆಡಳಿತ, ಜನಪರ ನೆಲೆಯ ಸರಳ ಸುಸೂತ್ರ, ನೆಮ್ಮದಿಯ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಎಂತಹ ದುರವಸ್ಥೆ ಅಲ್ಲವೇ?

















