ಧಾರವಾಡ: ಪೊಲೀಸರು ಅನವಶ್ಯಕವಾಗಿ ಕಿರಿಕಿರಿ ನೀಡಿದ ಹಿನ್ನೆಲೆ ಮತ್ತು ಹಣದ ಬೇಡಿಕೆಯಿಂದ ಮನನೊಂದ ಪದವಿ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾಗಿರುವ ಘಟನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಿರುಕುಳ ವಿರುದ್ಧ ದಂಗೆದ್ದಿದ್ದಾರೆ. ಕಾರಣೀಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಒಂದೆಡೆ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇನ್ನೊಂದೆಡೆ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.
ಇತ್ತೀಚೆಗೆ ಗಾಂಜಾ ಮಾರಾಟ ಮತ್ತು ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕಾರ್ಯಾಚರಣೆಯಲ್ಲಿ ಕಿಟೆಲ್ ಕಾಲೇಜಿನ ಬಿಎಸ್‌ಸಿ ದ್ವಿತೀಯ ವರ್ಷದ ಅಮಾಯಕ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಎಂಬಾತನನ್ನೂ ಕರೆತಂದು ವಿಚಾರಣೆ ನಡೆಸಿದ್ದರು. ಆದರೆ, ಎಲ್ಲ ತಪಾಸಣೆಯಲ್ಲಿ ಆತನಿಂದ ನೆಗೆಟಿವ್ ರಿಪೋರ್ಟ್ ಬಂದರೂ ಆತನಿಗೆ ನಿರಂತರ ಹಣದ ಬೇಡಿಕೆ ಇಟ್ಟು ಮಾನಸಿಕ ಹಿಂಸೆ ನೀಡಿದ್ದರು. ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸ್ ಠಾಣೆ ಮೂವರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿದ್ದಾರೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಹೆಡ್ ಕಾನ್ಸಟೇಬಲ್ ಚಂದ್ರು ನಡುವಿನಮನಿ, ಕಿರಣ ಡೊಕ್ಕನ್ನವರ, ಪೇದೆ ಸೈಯದ್ ತಹಶೀಲ್ದಾರ್ ಎಂಬುವವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಲ್ಲದೇ ಇನ್ನೂ ತನಿಖೆ ನಡೆಸುತ್ತಿದ್ದು, ಯಾರೇ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.





















