ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು ಗ್ರಾಮದಲ್ಲಿರುವ ಶ್ರೀ ಕೋರಿ ಸಿದ್ದೇಶ್ವರ ಶಾಖಾ ಮಠದಲ್ಲಿ ತಡರಾತ್ರಿ ಸಿಡಿಲು ಬಡಿದ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಮಠದ ಒಳಭಾಗಕ್ಕೆ ಬೆಂಕಿ ತಗುಲಿ, ದೇವರ ಮೂರ್ತಿಗಳು ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಕಲಾಗಿವೆ.
ಘಟನೆ ಮುದನೂರು ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ್ದು, ಸಿಡಿಲಿನ ಅಘಾತದಿಂದ ಮಠದ ಕಟ್ಟಡಕ್ಕೆ ಬೆಂಕಿ ತಗುಲಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಮಠದ ಒಳಗಿನ ದೇವರ ಮೂರ್ತಿಗಳು ಮತ್ತು ಪೂಜಾ ಸಾಮಗ್ರಿಗಳು ಸಂಪೂರ್ಣ ಹಾನಿಗೀಡಾಗಿವೆ.
ಸಿಡಿಲಿನ ಅಘಾತ – ಆತಂಕದಲ್ಲಿ ಭಕ್ತರು : ಅಪಘಾತದ ವೇಳೆ ಸಿಡಿಲಿನ ಭಾರೀ ಸದ್ದು ಕೇಳಿಬಂದಿದ್ದು, ಸ್ಥಳೀಯರು ಭೀತಿಗೊಳಗಾದರು. ಮಠದ ಬಳಿ ಇದ್ದ ಭಕ್ತರು ತಕ್ಷಣ ಸ್ಥಳದಿಂದ ದೂರ ಸರಿದು ಜೀವ ರಕ್ಷಿಸಿಕೊಂಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಹೆಚ್ಚಿನ ಹಾನಿಯನ್ನು ತಪ್ಪಿಸಲಾಗಿದೆ. ಪ್ರಾಥಮಿಕ ಪರಿಶೀಲನೆ ಪ್ರಕಾರ, ಸಿಡಿಲು ಬಡಿದ ಪರಿಣಾಮವೇ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡಡೆದಿದೆ.
ಘಟನೆಯ ಕುರಿತು ಸ್ಥಳೀಯ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಅಂದಾಜು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮಠದ ಪುನರ್‌ನಿರ್ಮಾಣ ಮತ್ತು ಪರಿಹಾರ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.























