ಆರೋಗ್ಯ-ಶಿಕ್ಷಣ ಮೇಳ’ದ ಆಹ್ವಾನ ಪತ್ರಿಕೆ ಬಿಡುಗಡೆ
ಕಲಬುರಗಿ: ಲೋಕ ಶಿಕ್ಷಣ ಟ್ರಸ್ಟ್ ನ ಹೆಮ್ಮೆಯ ಪ್ರಕಟಣೆಯಾಗಿರುವ ಸಂಯುಕ್ತ ಕರ್ನಾಟಕ'ದ ವತಿಯಿಂದ ಎಪ್ರಿಲ್ 7 ಮತ್ತು 8ರಂದು ನಗರದ ಖಮಿತಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಆರೋಗ್ಯ-ಶಿಕ್ಷಣ ಮೇಳಸಿರಿ ಸಂಪದ’ದ ಆಹ್ವಾನ ಪತ್ರಿಕೆಯನ್ನು ಸೋಮವಾರ ಸಂಜೆ ಬಿಡುಗಡೆಗೊಳಿಸಲಾಯಿತು.
‘ಸಂಯುಕ್ತ ಕರ್ನಾಟಕ’ದ ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮೇಳದ ಪ್ರಧಾನ ಪ್ರಾಯೋಜಕರಾಗಿರುವ ನಗರದ ಕಾಮರೆಡ್ಡಿ ಆಸ್ಪತ್ರೆಯ ಮುಖ್ಯಸ್ಥರೂ, ಖ್ಯಾತ ಆರ್ಥೋಪಿಡಿಕ್ ಸರ್ಜನ್‌ರೂ ಆದ ಡಾ. ಶರಣಬಸಪ್ಪ ಬಿ. ಕಾಮರೆಡ್ಡಿ ಅವರು ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಮಾಧ್ಯಮ ಲೋಕದಲ್ಲೇ ವಿನೂತನ ಕಾರ್ಯಕ್ರಮವಾಗಿ ಈ ಮೇಳ ಆಯೋಜನೆಗೊಂಡಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು. ಸಂಯುಕ್ತ ಕರ್ನಾಟಕ’ ಮೊದಲಿನಿಂದಲೂ ಕನ್ನಡ ನಾಡು-ನುಡಿ, ನೆಲ-ಜಲ-ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನೇ ಹೆಗ್ಗುರಿಯಾಗಿಸಿಕೊಂಡು ನಾಡಿಗೆ ವಿಶಿಷ್ಟ ಸೇವೆ ಸಲ್ಲಿಸುತ್ತಲಿದೆ, ಇದೀಗ ಈ ಭಾಗದ ಜನರ ಆರೋಗ್ಯದ ಕಾಳಜಿ ಮತ್ತು ಶೈಕ್ಷಣಿಕ ಸ್ಥಿತಿಗತಿ ಸುಧಾರಣೆಯ ಉದಾತ್ತ ಉದ್ದೇಶದಿಂದ ಎರಡು ದಿನಗಳ ಮೇಳ ಆಯೋಜಿಸಿ ಮಾದರಿಯ ಕಾರ್ಯ ಮಾಡಿದೆ. ಎರಡು ದಿನಗಳಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ, ತಜ್ಞರಿಂದ ಸಲಹೆ-ಸೂಚನೆ, ಶಿಕ್ಷಣ ತಜ್ಞರಿಂದ ಮಾರ್ಗದರ್ಶನ, ಉಪನ್ಯಾಸ ಮತ್ತು ಸಂವಾದ ನಡೆಯಲಿದ್ದು, ಎಲ್ಲರಿಗೂ ಮುಕ್ತ ಪ್ರವೇಶವಿದೆ, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಡಾ. ಕಾಮರೆಡ್ಡಿ ಕೋರಿದರು.
ಈ ಬೃಹತ್ ಆರೋಗ್ಯ ಮತ್ತು ಶಿಕ್ಷಣ ಮೇಳವು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ದಿಕ್ಕನ್ನು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಯುಕ್ತ ಕರ್ನಾಟಕ'ದ ಸಿಇಓ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ ಹೆಗಡೆ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಮಾನವ ಜೀವನದ ಪ್ರಮುಖ ಸಂಗತಿಗಳಾಗಿದ್ದು, ಇವುಗಳಿಗೆ ವಿಶೇಷ ಒತ್ತು ನೀಡಿ ಈ ಮೇಳ ಆಯೋಜಿಸಲಾಗುತ್ತಿದೆ, ಎರಡು ದಿನಗಳಂದು ಆರೋಗ್ಯ, ಶೈಕ್ಷಣಿಕ ಕಾರ್ಯಕ್ರಮ, ಚಟುವಟಿಕೆಗಳ ಜೊತೆಗೆ ಜನರಿಗೆ ಸಂಗೀತ, ಹಾಸ್ಯದ ರಸದೌತಣವನ್ನೇ ಉಣಬಡಿಸಲಾಗುತ್ತಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್,ಸಂಯುಕ್ತ ಕರ್ನಾಟಕ’ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಭಾಕರ ಜೋಶಿ, ಉಪ ಸಹಾಯಕ ಸಂಪಾದಕ ಎಚ್. ಶೇಷಗಿರಿ, ವ್ಯವಸ್ಥಾಪಕ ಗಿರೀಶ ಕುಲಕರ್ಣಿ, ಪ್ರಸಾರಾಂಗ ವ್ಯವಸ್ಥಾಪಕ ಸಿದ್ಧಾರೂಢ ಬಿರಾದಾರ, ಜಾಹೀರಾತು ಪ್ರತಿನಿಧಿ ಹನುಮೇಶ ಕುಲಕರ್ಣಿ, ಮುದ್ರಣ ವಿಭಾಗದ ವ್ಯವಸ್ಥಾಪಕ ಚಂದ್ರಕಾಂತ ದೇವಶೆಟ್ಟಿ, ಭದ್ರತಾ ವಿಭಾಗದ ಎಸ್.ಎಚ್. ಮಕಾನದಾರ ಹಾಗೂ ಎಲ್ಲ ಉದ್ಯೋಗಿಗಳು ಉಪಸ್ಥಿತರಿದ್ದರು.
ವಿನೂತನ, ವಿಶಿಷ್ಟ ಕಾರ್ಯಕ್ರಮ:
ಕಲ್ಯಾಣ ಕರ್ನಾಟಕದ ನಗರ, ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಮೇಳವನ್ನು ರೂಪಿಸಲಾಗಿದೆ. ನಾಡಿನ ಖ್ಯಾತ ತಜ್ಞ ವೈದ್ಯರು, ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ.
‘ಸಿರಿ ಸಂಪದ’ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿರುವ ಈ ಮೇಳವು ಕನ್ನಡ ಮಾಧ್ಯಮಲೋಕದಲ್ಲೇ ವಿನೂತನ, ವಿಶಿಷ್ಟ ಕಾರ್ಯಕ್ರಮವಾಗಿದೆ. ಬೆಂಗಳೂರು, ಬೀದರ ಮತ್ತು ಕಲಬುರಗಿಯ ಸುಪ್ರಸಿದ್ಧ ಆಸ್ಪತ್ರೆಗಳ ತಜ್ಞರು ತಮ್ಮ ವಿಶೇಷ ವೈದ್ಯಕೀಯ ತಂಡದೊಂದಿಗೆ ಪಾಲ್ಗೊಳ್ಳುತ್ತಿದ್ದು, ಉಚಿತ ಆರೋಗ್ಯ ತಪಾಸಣೆ, ಸಲಹೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.























