Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆಗೆ ಇದು ಮೂರನೇ ಉಪಚುನಾವಣೆ.. ! ಕ್ಷೇತ್ರದ ಇತಿಹಾಸ ಇಲ್ಲಿದೆ ಓದಿ..!

ಬಾಗಲಕೋಟೆಗೆ ಇದು ಮೂರನೇ ಉಪಚುನಾವಣೆ.. ! ಕ್ಷೇತ್ರದ ಇತಿಹಾಸ ಇಲ್ಲಿದೆ ಓದಿ..!

0
96

ಅಭಯ ಮನಗೂಳಿ
ಬಾಗಲಕೋಟೆ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವುದು ಇದೇ ಮೊದಲಲ್ಲ. ಆರಂಭದಲ್ಲಿ ರೆಡ್ಡಿ ಸಮುದಾಯದ ಪ್ರಾಬಲ್ಯ ಹೊಂದಿದ್ದ ಕ್ಷೇತ್ರ ಮುಂದೆ ಲಿಂಗಾಯತರ ತೆಕ್ಕೆ ಬಿದ್ದಿತು. ಅದನ್ನೂ ಬ್ರೇಕ್ ಮಾಡಿ ದಾಖಲೆ ಸೃಷ್ಟಿಸಿದವರು ಅಹಿಂದ ವರ್ಗದ ಎಚ್.ವೈ. ಮೇಟಿ.

1957ರ ಮೈಸೂರು ರಾಜ್ಯವಾಗಿದ್ದ ಕಾಲದಿಂದ 1973ಕ್ಕೆ ಕರ್ನಾಟಕ ಉದಯವಾಗಿ 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಜರುಗಿದ ಚುನಾವಣೆವರೆಗೆ ಈ ಕ್ಷೇತ್ರವನ್ನು ಆಳಿದವರು ರೆಡ್ಡಿ ಸಮುದಾಯದ ನಾಯಕರು. 1957 ಹಾಗೂ 1962ರಲ್ಲಿ ಶಾಸಕರಾಗಿದ್ದ ಬಿ.ಟಿ.ಮುರನಾಳ ಅವರು ಎಸ್. ನಿಜಲಿಂಗಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಕ್ಷೇತ್ರವನ್ನು ತ್ಯಾಗ ಮಾಡಿದ್ದರು. 1962ರಲ್ಲಿ ಹೊಸದುರ್ಗ ಕ್ಷೇತ್ರದಲ್ಲಿ ಎಸ್. ನಿಜಲಿಂಗಪ್ಪ ಅವರು ಸೋಲು ಕಂಡಾಗ ಬಿ.ಟಿ.ಮುರನಾಳ ಅವರು ಬಾಗಲಕೋಟೆ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ನಿಜಲಿಂಗಪ್ಪ ಅವರು ವಿಧಾನಸಭೆಗೆ ಆಯ್ಕೆಯಾಗುವಂತೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಮೂರು ತಿಂಗಳ ಅವಧಿಗೆ ನಿಜಲಿಂಗಪ್ಪ ಅವರ ಆಪ್ತರಾಗಿದ್ದ ಎಸ್.ಆರ್.ಕಂಠಿ ಅಂದಿನ ಮುಖ್ಯಮಂತ್ರಿಗಳಾಗಿ ನಿಜಲಿಂಗಪ್ಪ ಗೆಲುವು ಸಾಧಿಸುತ್ತಿದ್ದಂತೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರು. ಅಂದಿನಿಂದ ರಾಜಕಾರಣದ ಭರತ ಎಂಬ ಬಿರುದನ್ನು ಎಸ್.ಆರ್.ಕಂಠಿ ಪಡೆದಿದ್ದರು ಎಂಬುದು ಜನಜನಿತ. ಮುಂದೆ 1968 ಮತ್ತು 1972ರಲ್ಲಿ ಮತ್ತೆ ಬಿ.ಟಿ.ಮುರನಾಳ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರು.

1978ರಲ್ಲಿ ಕರ್ನಾಟಕ ವಿಧಾನಸಭೆಯಾಗಿ ರಚನೆಗೊಂಡು ಚುನಾವಣೆ ಜರುಗಿದಾಗ ಪರಪ್ಪ ಕಳ್ಳಿಗುಡ್ಡ ಅವರು ಪ್ರಭುತ್ವ ಬೇಧಿಸಿ ವಿಜಯ ಸಾಧಿಸಿದರಾದರೂ ಅದು ಒಂದೇ ಅವಧಿಗೆ ಸೀಮಿತವಾಯಿತು. 1983 ಹಾಗೂ 1985 ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ವಿ.ಮಂಟೂರ ಶಾಸಕರಾದರೆ, 1989 ಹಾಗೂ 1994ರಲ್ಲಿ ಅಜಯಕುಮಾರ ಸರನಾಯಕ ಶಾಸಕರಾದರು. ಆದರೆ ಕೇಂದ್ರದಲ್ಲಿ ಸರ್ಕಾರ ಅಸ್ಥಿರಗೊಂಡಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸರನಾಯಕರು ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅವರಿಂದ ತೆರವಾದ ಶಾಸಕ ಸ್ಥಾನಕ್ಕೆ 1997ರ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಪಿ.ಎಚ್.ಪೂಜಾರ ರಾಜಕೀಯ ಪರೀಕ್ಷೆಗೆ ಮುಂದಾಗಿ ಗೆಲುವು ಸಾಧಿಸಿದರು. 1999ರ ಸಾರ್ವತ್ರಿಕ ಚುನಾವಣೆಯಲ್ಲೂ ಪಿ.ಎಚ್.ಪೂಜಾರ ಅವರಿಗೆ ಅದೃಷ್ಟ ಮತ್ತೆ ಕೈ ಹಿಡಿಯಿತು.

2004, 2008ರಲ್ಲಿ ವೀರಣ್ಣ ಚರಂತಿಮಠ ಗೆಲುವು ಸಾಧಿಸಿದರೆ ಕುರುಬ ಸಮುದಾಯದ ಎಚ್.ವೈ.ಮೇಟಿ ಅವರು 2013ರಲ್ಲಿ ಬಾಗಲಕೋಟೆಯಿಂದ ವಿಧಾನಸಭೆ ಪ್ರವೇಶಿಸುವಲ್ಲಿ ಸಫಲರಾದರು. 2018ರಲ್ಲಿ ವೀರಣ್ಣ ಚರಂತಿಮಠ ಗೆಲುವು ಸಾಧಿಸಿದರೆ, 2023ರಲ್ಲಿ ಎಚ್.ವೈ.ಮೇಟಿ ಅವರು ಗೆಲುವಿನ ಹಾರವನ್ನು ಮುಡಿಗೇರಿಸಿಕೊಂಡರು. ಆದರೆ ವಿಧಿಯಾಟ ಮೇಟಿ ಅವರು 2025ರ ನ. 4ರಂದು ನಿಧನರಾದರು. ಈಗ ಮತ್ತೆ ಉಪಚುನಾವಣೆ ಎದುರಾಗಿದೆ. ಕಣದಲ್ಲಿ ಮೇಟಿ ಅವರ ಪುತ್ರ ಉಮೇಶ ಹಾಗೂ ಬಿಜೆಪಿಯಿಂದ ವೀರಣ್ಣ ಚರಂತಿಮಠ ಅವರಿದ್ದಾರೆ. ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ಮತದಾರ ಪ್ರಭುಗಳು ನಿಶ್ಚಿಯಿಸಲಿದ್ದಾರೆ.

ಬಾಗಲಕೋಟೆ ಕ್ಷೇತ್ರಕ್ಕೆ ಇದು ಮೂರನೇ ಉಪಚುನಾವಣೆ ಆದರೆ, ಜಿಲ್ಲೆಗೆ ಇದು 9ನೇ ಉಪಚುನಾವಣೆ. ಜಮಖಂಡಿ, ಗುಳೇದಗುಡ್ಡ, ಹುನಗುಂದ ಕ್ಷೇತ್ರಗಳಿಗೆ ತಲಾ ಎರಡು ಬಾರಿ ಉಪಚುನಾವಣೆಗಳು ಜರುಗಿವೆ. ಬಾಗಲಕೋಟೆ ಕ್ಷೇತ್ರಕ್ಕೆ ಇದು ಮೂರನೇಯದ್ದು..!