Home Advertisement
Home ನಮ್ಮ ಜಿಲ್ಲೆ ಧಾರವಾಡ ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ: ಹುಬ್ಬಳ್ಳಿಯಲ್ಲಿ ಪರೀಕ್ಷೆ ರದ್ದು

ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ: ಹುಬ್ಬಳ್ಳಿಯಲ್ಲಿ ಪರೀಕ್ಷೆ ರದ್ದು

0
101

ಹುಬ್ಬಳ್ಳಿಯಲ್ಲಿ ಕನ್ನಡ ಹೋರಾಟ: ರೈಲ್ವೆ ಪರೀಕ್ಷೆಗೆ ಬ್ರೇಕ್

ಹುಬ್ಬಳ್ಳಿ: ರೈಲ್ವೆ ಬಡ್ತಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಮಂಗಳವಾರ ಕೇಶ್ವಾಪುರದ ರೈಲ್ವೆ ನೇಮಕಾತಿ ಕಛೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಇಂದು ಬೆಳಗ್ಗೆ ಸೌತ್ ವೆಸ್ಟ್ ರೈಲ್ವೆ ಇಲಾಖೆಯಲ್ಲಿ ರೈಲ್ವೆ ನೇಮಕಾತಿ ಸೆಲ್ ವತಿಯಿಂದ ರೇಲ್ವೆ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡುವ ಸಲುವಾಗಿ ಇಲಾಖಾ ಪರೀಕ್ಷೆ ಮಾರ್ಚ್‌ 17 ಮತ್ತು 18 ರಂದು ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ, ಪರೀಕ್ಷೆ ರದ್ದತಿಗೆ ಒತ್ತಾಯಿಸಿ ಹಾಗೂ ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಕನ್ನಡಕ್ಕೆ ಅನ್ಯಾಯ – ಕರವೇ ಆಕ್ರೋಶ: ಈ ವೇಳೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಸಾಗರ್‌ ಗಾಯಕವಾಡ್‌ ಹಾಗೂ ಹನುಮಂತಪ್ಪ ಮೇಟಿ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ, ಮಾರ್ಚ್ 17 ಮತ್ತು 18ರಂದು ನಡೆಯಲಿದ್ದ ರೈಲ್ವೆ ಇಲಾಖಾ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. “ಕನ್ನಡದಲ್ಲಿ ಪರೀಕ್ಷೆ ನಡೆಸಲೇಬೇಕು”, “ಕನ್ನಡಕ್ಕೆ ಅವಕಾಶ ಕೊಡಿ” ಎಂಬ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ : ಪರೀಕ್ಷಾ ಕೇಂದ್ರದ ಮೆಟ್ಟಿಲು ಮೇಲೆ ಕಾರ್ಯಕರ್ತರು ಕುಳಿತು ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ನಡೆಯುವ ಎಲ್ಲಾ ರೈಲ್ವೆ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಭರವಸೆ ಬಳಿಕ ತಣಿದ ಉದ್ವಿಗ್ನತೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ RRC( Railway Recruitment Cell) ಚೇರಮನ್ K.A.ಹಫೀಜ್ ಅವರು ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಬಳಿಕ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಇಂದಿನ ಹಾಗೂ ನಾಳೆಯ ಪರೀಕ್ಷೆಗಳನ್ನು ಮುಂದೂಡುವ ಕುರಿತು ನಿರ್ಧಾರ ಕೈಗೊಳ್ಳುವ ಹಾಗೂ ಮುಂದಿನ ದಿನಾಂಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸುವ ಭರವಸೆಯನ್ನು ನೀಡಿದರು. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಇಂದಿನ ಪರೀಕ್ಷೆ ರದ್ದು: ತೀವ್ರ ಪ್ರತಿಭಟನೆಯ ಹಿನ್ನಲೆಯಲ್ಲಿ ಮಂಗಳವಾರ ನಡೆದ ರೈಲ್ವೆ ಬಡ್ತಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ರದ್ದು ಮಾಡಲಾಯಿತು. ರೈಲ್ವೆ ಅಧಿಕಾರಿಗಳು ಹಾಜರಾದ ಅಭ್ಯರ್ಥಿಗಳಿಗೆ ಮಾಹಿತಿ ನೀಡಿ ಪರೀಕ್ಷಾ ಕೇಂದ್ರದಿಂದ ಹೊರಗೆ ಕಳುಹಿಸಿದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕರವೇ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಧಾರವಾಡ ಮುಖಂಡರಾದ ರುದ್ರೇಶ ಹವಳದ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.