ದಾವಣಗೆರೆ: ಶ್ವಾಸಕೋಶದ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಮೂರುವರೆ ತಿಂಗಳ ಹಸುಗೂಸು ಅನ್ವಿಕಾ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಮಗುವಿನ ಜೀವ ಉಳಿಸಲು ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗಳು ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದರೂ, ವಿಧಿಯಾಟದ ಮುಂದೆ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್–ಪವಿತ್ರ ದಂಪತಿಯ ಪುತ್ರಿ ಅನ್ವಿಕಾ ಕಳೆದ ಕೆಲವು ದಿನಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು.
ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ರವಾನಿಸಲು ವೈದ್ಯರು ನಿರ್ಧರಿಸಿದ್ದರು. ಅದರಂತೆ ಗುರುವಾರ ಸಂಜೆ ಆಂಬುಲೆನ್ಸ್ ಮೂಲಕ ಮಗುವನ್ನು ಕರೆದೊಯ್ಯುವ ವೇಳೆ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಆಂಬುಲೆನ್ಸ್ ವೇಗವಾಗಿ ಸಂಚರಿಸಲು ಅಗತ್ಯ ನೆರವು ನೀಡಿತ್ತು.
ಮಗು ಪ್ರಯಾಣಿಸುತ್ತಿದ್ದ ಆಂಬುಲೆನ್ಸ್ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ ಸಮೀಪ ತಲುಪಿದಾಗ ವಾಹನದ ಒಂದು ಚಕ್ರ ಪಂಕ್ಚರ್ ಆಗಿದೆ. ಕೂಡಲೇ ಚಾಲಕ ಸಮಯಪ್ರಜ್ಞೆ ಮೆರೆದು ಪರ್ಯಾಯ ಚಕ್ರವನ್ನು ಅಳವಡಿಸಿ, ಮತ್ತೆ ಪ್ರಯಾಣ ಮುಂದುವರಿಸಿದ್ದಾರೆ.
ಇದಾದ ಬಳಿಕ ಶಿವಮೊಗ್ಗ ಸಮೀಪ ಸಂಚರಿಸುತ್ತಿದ್ದಾಗ ಮಗುವಿನ ಪಲ್ಸ್ ರೇಟ್ ಏಕಾಏಕಿ ಕಡಿಮೆಯಾಗಿದೆ. ತುರ್ತುವಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಗುವಿನ ಜೀವ ಉಳಿಸಲು ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿ ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ನಡೆಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅನ್ವಿಕಾ ಕೊನೆಯುಸಿರೆಳೆದಿರುವುದು ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ತೀವ್ರ ದುಃಖ ಮೂಡಿಸಿದೆ.
ಈ ಘಟನೆ ತುರ್ತು ವೈದ್ಯಕೀಯ ಸೇವೆ, ಜಿರೋ ಟ್ರಾಫಿಕ್ ವ್ಯವಸ್ಥೆ ಹಾಗೂ ಆರೋಗ್ಯ ಸಿಬ್ಬಂದಿಯ ಮಾನವೀಯ ಸೇವೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುವುದರ ಜೊತೆಗೆ, ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ನೋವಿನ ಸಂಗತಿಯಾಗಿ ಪರಿಣಮಿಸಿದೆ. ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದ್ದು, ಗ್ರಾಮದಲ್ಲಿಯೂ ಶೋಕದ ವಾತಾವರಣ ನಿರ್ಮಾಣವಾಗಿದೆ.
- ದೇಣಿಗೆ ವಿವಾದ: ಸಂಸತ್ತಿನಲ್ಲಿ ವಿನೂತನ ಪ್ರತಿಭಟನೆಗೆ ಸ್ಪೀಕರ್ ಅಸಮಾಧಾನ
- ಕಾವೇರಿ ವಿವಾದ: ‘ಕೂಡಲೇ ಸುಪ್ರೀಂಗೆ ಹೋಗಿ’ – CMಗೆ ಬಿಎಸ್ವೈ ಸಲಹೆ
- ಕಾಳಿ ನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ: ಆದರೂ ಮಾಲಿನ್ಯದ ಆತಂಕ ಇನ್ನೂ ಸಂಪೂರ್ಣ ದೂರವಾಗಿಲ್ಲ
- NEET-UG 2026: 69,170 ಅಭ್ಯರ್ಥಿಗಳ ಅಂಕಪಟ್ಟಿ ಪ್ರಕಟಿಸಿದ KEA
- ‘ಜಿರೋ ಟ್ರಾಫಿಕ್’ ನೆರವಾದರೂ ಉಳಿಯದ 3 ತಿಂಗಳ ಕಂದಮ್ಮ!






















