ಬಜೆಟ್ ವಿಶ್ಲೇಷಣೆ: ಉತ್ತರ ಕನ್ನಡಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಲಾಭ, ದೊಡ್ಡ ಯೋಜನೆಗಳ ಕೊರತೆ
ದಾಂಡೇಲಿ (ಉತ್ತರ ಕನ್ನಡ): 2026–27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ನಂತರ ರಾಜ್ಯದ ವಿವಿಧ ಜಿಲ್ಲೆಗಳ ಅಭಿವೃದ್ಧಿ ಕುರಿತ ಚರ್ಚೆಗಳು ಜೋರಾಗಿವೆ. ಅರಣ್ಯ ಸಂಪತ್ತು, ಕರಾವಳಿ ಸೌಂದರ್ಯ, ಪ್ರವಾಸೋದ್ಯಮ ಹಾಗೂ ಜಲ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ದೃಷ್ಟಿಯಿಂದ ಈ ಬಜೆಟ್ ಅನ್ನು ವಿಶ್ಲೇಷಿಸಿದಾಗ ಕೆಲವು ಆಶಾದಾಯಕ ಅಂಶಗಳ ಜೊತೆಗೆ ಕೆಲವು ನಿರಾಶೆಗಳೂ ಕಂಡುಬರುತ್ತಿವೆ.
ಆರೋಗ್ಯ ಕ್ಷೇತ್ರಕ್ಕೆ ಬಲ : ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸುಮಾರು ₹100 ಕೋಟಿ ಅನುದಾನ ಘೋಷಣೆ ಮಾಡಿರುವುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಬಲ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರಿಂದ ಜಿಲ್ಲೆಯ ಜನರು ಉತ್ತಮ ಆರೋಗ್ಯ ಸೇವೆಗಳನ್ನು ಸ್ಥಳೀಯ ಮಟ್ಟದಲ್ಲೇ ಪಡೆಯುವ ಸಾಧ್ಯತೆ ಹೆಚ್ಚಲಿದೆ.
ಇದೇ ವೇಳೆ ತದಡಿ ಪ್ರದೇಶದಲ್ಲಿ ಪರಿಸರ ಸ್ನೇಹಿ ವಸತಿ ವ್ಯವಸ್ಥೆ ಮತ್ತು ವಾಕಿಂಗ್ ಕಾರಿಡಾರ್ ನಿರ್ಮಾಣ ಘೋಷಿಸಿರುವುದು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆ ಇದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ : ಪ್ರಕೃತಿ ಸಂಪತ್ತಿನಿಂದ ಸಮೃದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಬಜೆಟ್‌ನಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿರುವುದು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪರೋಕ್ಷವಾಗಿ ಲಾಭವಾಗುವ ಸಾಧ್ಯತೆ ಇದೆ.
ಪ್ರಸಿದ್ಧ ಪ್ರವಾಸಿ ತಾಣಗಳಾದ ಗೋಕರ್ಣ, ಕುಮಟಾ,ಮುರ್ಡೇಶ್ವರ, ಕಾರವಾರ ಹಾಗೂ ದಾಂಡೇಲಿ ಮತ್ತು ಜೋಯಿಡಾ ಪ್ರದೇಶಗಳಲ್ಲಿ ಪರಿಸರಾಧಾರಿತ ಪ್ರವಾಸೋದ್ಯಮ ವಿಸ್ತರಣೆಗೆ ಇದು ನೆರವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿ: ರಾಜ್ಯ ಮಟ್ಟದಲ್ಲಿ ರಸ್ತೆ ಹಾಗೂ ಸಾರಿಗೆ ವ್ಯವಸ್ಥೆಗೆ ನೀಡಿರುವ ಆದ್ಯತೆ ಉತ್ತರ ಕನ್ನಡ ಜಿಲ್ಲೆಗೆ ಪರೋಕ್ಷವಾಗಿ ಪ್ರಯೋಜನಕಾರಿಯಾಗುವ ಸಾಧ್ಯತೆ ಇದೆ. ಪರ್ವತ ಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿರುವ ಈ ಜಿಲ್ಲೆಯಲ್ಲಿ ಉತ್ತಮ ರಸ್ತೆ ಸಂಪರ್ಕವು ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಬಹಳ ಮುಖ್ಯವಾಗಿದೆ.
ಹಿಂದುಳಿದ ವರ್ಗಗಳಿಗೆ ನೆರವು : ಜಿಲ್ಲೆಯಲ್ಲಿ ಆದಿವಾಸಿ ಹಾಗೂ ಹಿಂದುಳಿದ ವರ್ಗಗಳ ಜನಸಂಖ್ಯೆ ಗಮನಾರ್ಹವಾಗಿದೆ. ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ಈ ವರ್ಗಗಳ ಶಿಕ್ಷಣ, ವಸತಿ ಹಾಗೂ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ.
ವಿಶೇಷವಾಗಿ ಸಿದ್ದಾಪುರ, ಯಲ್ಲಾಪುರ ಮತ್ತು ಜೋಯಿಡಾ ಭಾಗಗಳ ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ಈ ಯೋಜನೆಗಳ ಪರಿಣಾಮ ಕಾಣುವ ಸಾಧ್ಯತೆ ಇದೆ.
ಜಿಲ್ಲೆಯ ನಿರೀಕ್ಷೆಗಳಿಗೆ ತಕ್ಕ ಘೋಷಣೆಗಳ ಕೊರತೆ : ಆದರೆ ಜಿಲ್ಲೆಯ ಜನರ ನಿರೀಕ್ಷೆಗಳ ದೃಷ್ಟಿಯಿಂದ ನೋಡಿದರೆ ಉತ್ತರ ಕನ್ನಡಕ್ಕೆ ನೇರವಾಗಿ ಘೋಷಿಸಲಾದ ದೊಡ್ಡ ಅಭಿವೃದ್ಧಿ ಯೋಜನೆಗಳ ಕೊರತೆ ಕಂಡುಬರುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ವಿಶೇಷವಾಗಿ ಕಾಳಿ ನದಿ ಆಧಾರಿತ ನೀರಾವರಿ ಯೋಜನೆಗಳು, ಕರಾವಳಿ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಸಮಗ್ರ ಪ್ಯಾಕೇಜ್ ಅಥವಾ ಕೈಗಾರಿಕಾ ಹೂಡಿಕೆಗಳಿಗೆ ಸಂಬಂಧಿಸಿದ ಪ್ರಮುಖ ಘೋಷಣೆಗಳು ಬಜೆಟ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಅರಣ್ಯ ಮತ್ತು ಪರಿಸರ ನಿಯಂತ್ರಣದಲ್ಲಿ ಬದುಕುತ್ತಿರುವ ಜಿಲ್ಲೆಯ ಜನತೆಗೆ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಸಾಧಿಸುವ ವಿಶೇಷ ಯೋಜನೆಗಳ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಮಗ್ರ ಅಭಿವೃದ್ಧಿಗೆ ಅಗತ್ಯ ಯೋಜನೆಗಳು: ಪ್ರವಾಸೋದ್ಯಮ, ಕೃಷಿ ಆಧಾರಿತ ಕೈಗಾರಿಕೆ, ಮೀನುಗಾರಿಕೆ ಮತ್ತು ಅರಣ್ಯ ಸಂಪತ್ತಿನ ಮೌಲ್ಯವರ್ಧನೆಗೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು ಎಂಬ ಅಭಿಪ್ರಾಯ ಜಿಲ್ಲೆಯ ಜನರಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ಹೇಳುವುದಾದರೆ, ಈ ಬಜೆಟ್ ಉತ್ತರ ಕನ್ನಡ ಜಿಲ್ಲೆಗೆ ಕೆಲವು ಪರೋಕ್ಷ ಅವಕಾಶಗಳನ್ನು ಒದಗಿಸಿದರೂ ಜಿಲ್ಲೆಯ ಭೌಗೋಳಿಕ, ಪರಿಸರ ಹಾಗೂ ಆರ್ಥಿಕ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸದಿರುವ ಕೊರತೆ ಕಂಡುಬರುತ್ತಿದೆ.























