Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಬಿಜೆಪಿ ಸಮಸ್ಯೆಗಳು ಶೀಘ್ರ ಪರಿಹಾರ: ವಿಜಯೇಂದ್ರ

ದಾವಣಗೆರೆ ಬಿಜೆಪಿ ಸಮಸ್ಯೆಗಳು ಶೀಘ್ರ ಪರಿಹಾರ: ವಿಜಯೇಂದ್ರ

0
79

ದಾವಣಗೆರೆ: ಜಿಲ್ಲಾ ಬಿಜೆಪಿಯಲ್ಲಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಪಕ್ಷದ ರಾಜ್ಯ ನಾಯಕರಿಗೆ ಸಂಪೂರ್ಣ ಅರಿವು ಇದ್ದು, ಎಲ್ಲರೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಕಾರ್ಯಕರ್ತರ ನಡುವೆ ಇರುವ ಸಣ್ಣಪುಟ್ಟ ಅಸಮಾಧಾನಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಅದಕ್ಕಾಗಿ ನಾವು ಮತ್ತು ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ ದಾವಣಗೆರೆಗೆ ಆಗಮಿಸಿದ್ದೇವೆ. ಸಮಸ್ಯೆಗಳನ್ನು ಪರಿಹರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಾಗುವುದು” ಎಂದರು.

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 8–10 ಅಕಾಂಕ್ಷಿಗಳು : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 8 ರಿಂದ 10 ಮಂದಿ ಟಿಕೆಟ್ ಅಕಾಂಕ್ಷಿಗಳಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು. “ಸೂಕ್ತ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹಿರಿಯರು ಕೂಡಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಜೊತೆಯೂ ಚರ್ಚೆ ಮಾಡಲಾಗುತ್ತದೆ” ಎಂದು ಹೇಳಿದರು.

150 ವಿಸ್ತಾರಕರಿಂದ ಸಂಘಟನೆ ಬಲಪಡಿಸುವ ಕೆಲಸ: ಜಿಲ್ಲೆಯಲ್ಲಿ ಈಗಾಗಲೇ 150 ವಿಸ್ತಾರಕರು ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ, ಬೂತ್ ಮಟ್ಟದ ಅಸಮಾಧಾನಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿ ಇದೆ ಎಂದು ಅವರು ತಿಳಿಸಿದರು.

“ಈ ಬಾರಿ ಎಲ್ಲ ಅಸಮಾಧಾನಗಳನ್ನು ನಿವಾರಿಸಿ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಗೆಲ್ಲುವ ಪಣ ತೊಟ್ಟಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.