SK Home Ad
Home ಸಿನಿ ಮಿಲ್ಸ್ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್

‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್

0
61

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಕಥಾಹಂದರ ಹೊಂದಿರುವ ಮತ್ತೊಂದು ವಿಭಿನ್ನ ಸಿನಿಮಾ ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಖ್ಯಾತ ಸಾಹಿತಿ, ಗೀತರಚನೆಕಾರ ಹಾಗೂ ನಟ ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಚಿತ್ರವನ್ನು ಗುರುಪ್ರಸಾದ್ ಚಂದ್ರಶೇಖರ್ ನಿರ್ದೇಶಿಸಿದ್ದು, ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಈ ಹಿಂದೆ ಅವರು ‘ಸೆಕೆಂಡ್ ಹಾಫ್’ ಹಾಗೂ ‘ಗಾಂಧಿ ಮತ್ತು ನೋಟು’ ಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ತಮ್ಮ ಮೊದಲ ನಿರ್ದೇಶನದಲ್ಲೇ ಕನ್ನಡ ಭಾಷೆ, ಸಮಾಜ ಮತ್ತು ರಾಜಕೀಯದ ಸೂಕ್ಷ್ಮ ವಿಚಾರಗಳನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ʼಕರಾವಳಿ’ : ಕಂಬಳ ಸಂಸ್ಕೃತಿಯ ಸಿನಿರೂಪಕ್ಕೆ ಉತ್ತಮ ಪ್ರತಿಕ್ರಿಯೆ

ಚಿತ್ರದ ಕಥೆ ಕನ್ನಡ ಭಾಷೆಯ ಸುತ್ತ ನಡೆಯುವ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿದೆ. ಟೀಸರ್‌ನಲ್ಲಿ ಡಾ. ನಾಗೇಂದ್ರ ಪ್ರಸಾದ್ ಅವರ ಪಾತ್ರದ ಜೊತೆಗೆ ರಾಜಕೀಯದ ಕೆಲವು ಪ್ರಮುಖ ಅಂಶಗಳನ್ನು ಮಾತ್ರ ಅನಾವರಣಗೊಳಿಸಲಾಗಿದ್ದು, ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಲಾಗಿದೆ.

ಚಿತ್ರದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುವ ನಾಯಕ ಸಮಾಜದಲ್ಲಿ ಯಾವ ರೀತಿಯ ಬದಲಾವಣೆ ತರಲು ಪ್ರಯತ್ನಿಸುತ್ತಾನೆ, ಕಾಲಕ್ರಮೇಣ ಆತನ ಚಿಂತನೆ ಮತ್ತು ವ್ಯಕ್ತಿತ್ವ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದೇ ಕಥೆಯ ಪ್ರಮುಖ ಅಂಶವಾಗಿದೆ. ಸಾಮಾಜಿಕ ಸಂದೇಶದ ಜೊತೆಗೆ ರಾಜಕೀಯದ ಒಳನೋಟವನ್ನೂ ಚಿತ್ರ ಒಳಗೊಂಡಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: ಗದಗ: RDPR ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಚಿತ್ರದ ಸಂಗೀತಕ್ಕೆ ಚರಣ್ ಅರ್ಜುನ್ ಸ್ವರ ಸಂಯೋಜಿಸಿದ್ದು, ಎರಡು ಹಾಡುಗಳಿಗೆ ಡಾ. ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ಬರೆದಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಫೋಕ್ ಭಜನೆ ಹಾಗೂ ಬಿಟ್ ಹಾಡುಗಳು ಚಿತ್ರದ ವಿಶೇಷ ಆಕರ್ಷಣೆಯಾಗಿವೆ. ಚಿತ್ರದಲ್ಲಿರುವ ‘ಕನ್ನಡ ನನ್ನ ಕನ್ನಡ’ ಹಾಡನ್ನು ಕಳೆದ ವರ್ಷದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು ಗಮನಾರ್ಹ.

ಚಿತ್ರದಲ್ಲಿ ವೈಜನಾಥ್ ಬಿರಾದಾರ್, ಡಿಂಪಲ್ ಜೀವನ್, ಅಶ್ವಿತಾ ಹೆಗಡೆ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ಶ್ರೀನಾಥ್ ವಶಿಷ್ಠ, ಶ್ರೀನಿವಾಸ್ ಪ್ರಭು, ಕಲಾಮಾಧ್ಯಮ ಪರಮೇಶ್ವರ್, ಅಂಕಿತಾ ಗೌಡ, ದತ್ತಾತ್ರೇಯ ಜಮಾದಾರ್ ಹಾಗೂ ಮಾವಳ್ಳಿ ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: UGNEET: KEA ಮಹತ್ವದ ಪ್ರಕಟಣೆ – ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬಿವಿಎಂ ಕ್ರಿಯೇಷನ್ಸ್, ಡಿಎಲ್‌ವಿ ಪ್ರೊಡಕ್ಷನ್ಸ್ ಹಾಗೂ ಅನಿಕೇತನ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಬಿ. ಶಿವಶಂಕರ್, ದತ್ತಾತ್ರೇಯ ಜಮಾದಾರ್ ಹಾಗೂ ಶಶಿಪ್ರಸಾದ್ ಚಂದ್ರಶೇಖರ್ ನಿರ್ಮಾಪಕರಾಗಿದ್ದಾರೆ. ಸಾಮಾಜಿಕ ಸಂದೇಶ, ರಾಜಕೀಯದ ಆಯಾಮ ಮತ್ತು ಕನ್ನಡದ ಮೇಲಿನ ಅಭಿಮಾನವನ್ನು ಒಟ್ಟುಗೂಡಿಸಿರುವ ಈ ಸಿನಿಮಾ ಇದೀಗ ಸಿನಿಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆ ಹುಟ್ಟಿಸಿದೆ.