ಸುನಿಲ್ ಗವಾಸ್ಕರ್, ಕಪಿಲ್ ದೇವ್ ಸೇರದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರಿಂದ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್‌ಗೆ ತಕ್ಷಣ ವೈದ್ಯಕೀಯ ನೆರವು ನೀಡಲು ಪಾಕಿಸ್ತಾನ ಸರ್ಕಾರಕ್ಕೆ ಜಂಟಿ ಮನವಿ
ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಮತ್ತು ಜೈಲು ಪರಿಸ್ಥಿತಿಗಳ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಜಗತ್ತಿನ ವಿವಿಧ ದೇಶಗಳ ಮಾಜಿ ಕ್ರಿಕೆಟ್ ನಾಯಕರು ಮತ್ತು ದಿಗ್ಗಜ ಆಟಗಾರರು ಒಗ್ಗಟ್ಟಾಗಿ ಜಂಟಿ ಹೇಳಿಕೆಯನ್ನು ಹೊರಡಿಸಿ, ಇಮ್ರಾನ್ ಖಾನ್ ಅವರಿಗೆ ತಕ್ಷಣ ಹಾಗೂ ಸಮರ್ಪಕ ವೈದ್ಯಕೀಯ ನೆರವು ನೀಡುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್, ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ವೆಸ್ಟ್ ಇಂಡೀಸ್‌ನ ಲೆಜೆಂಡ್ ಕ್ಲೈವ್ ಲಾಯ್ಡ್, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಸೇರಿದಂತೆ ಅನೇಕ ದಿಗ್ಗಜರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಕೋಲಾರ: ದೇಶದ ಮೊದಲ ಟಾಟಾ–ಎರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ
ಇಮ್ರಾನ್ ಖಾನ್ ಆರೋಗ್ಯ ಸ್ಥಿತಿ ಬಗ್ಗೆ ಆತಂಕ: 2026ರ ಫೆಬ್ರವರಿ 17ರಂದು ಬಿಡುಗಡೆಗೊಂಡ ಜಂಟಿ ಹೇಳಿಕೆಯಲ್ಲಿ, ಇಮ್ರಾನ್ ಖಾನ್ ಅವರ ಆರೋಗ್ಯ ದಿನೇದಿನೇ ಹದಗೆಡುತ್ತಿದೆ ಎಂದು ಉಲ್ಲೇಖಿಸಲಾಗಿದೆ. ವಿಶೇಷವಾಗಿ, ಬಂಧನದಲ್ಲಿರುವ ಸಂದರ್ಭದಲ್ಲಿ ಅವರ ದೃಷ್ಟಿ ಸಮಸ್ಯೆ ಗಂಭೀರವಾಗಿರುವ ಬಗ್ಗೆ ವರದಿಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಮಾಜಿ ನಾಯಕರು ತಿಳಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿ ಇರುವ ಇಮ್ರಾನ್ ಖಾನ್ ಅವರು ಸೂಕ್ತ ವೈದ್ಯಕೀಯ ಆರೈಕೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕ್ರಿಕೆಟ್ ಮತ್ತು ನಾಯಕತ್ವದ ಮಹತ್ವದ ಕೊಡುಗೆ: ಕ್ರಿಕೆಟ್ ದಿಗ್ಗಜರು ಇಂದು ನೀಡಿದ ಹೇಳಿಕೆಯಲ್ಲಿ, ಇಮ್ರಾನ್ ಖಾನ್ ಅವರು ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್ ಮತ್ತು ನಾಯಕರಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದೆ. 1992ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ವಿಜಯದತ್ತ ಮುನ್ನಡೆಸಿದ ನಾಯಕತ್ವವನ್ನು ದಿಗ್ಗಜರು ವಿಶೇಷವಾಗಿ ಸ್ಮರಿಸಿದ್ದಾರೆ. ಅವರು ಕೇವಲ ಕ್ರಿಕೆಟಿಗರಷ್ಟೇ ಅಲ್ಲದೆ, ಪಾಕಿಸ್ತಾನದ ಪ್ರಧಾನಿಯಾಗಿಯೂ ದೇಶಕ್ಕೆ ಸೇವೆ ಸಲ್ಲಿಸಿದ ನಾಯಕ ಎಂದು ಉಲ್ಲೇಖಿಸಲಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಅವರ ಸಾಧನೆಗೆ ಗೌರವ ನೀಡಬೇಕೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮನೆ ಪರವಾನಿಗೆ ನಿರಾಕರಣೆ: ಗ್ರಾಪಂ ಕಚೇರಿಯಲ್ಲಿ ರೈತ ಆತ್ಮಹತ್ಯೆ ಯತ್ನ
ಪಾಕಿಸ್ತಾನ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳು: ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನ ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ. ಇಮ್ರಾನ್ ಖಾನ್ ಅವರಿಗೆ ಅವರು ಆಯ್ಕೆಮಾಡಿದ ತಜ್ಞ ವೈದ್ಯರಿಂದ ತಕ್ಷಣ ಹಾಗೂ ನಿರಂತರ ಚಿಕಿತ್ಸೆ ಒದಗಿಸಬೇಕು. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ಮಾನವೀಯ ಜೈಲು ಪರಿಸ್ಥಿತಿ ಕಲ್ಪಿಸಬೇಕು. ಕುಟುಂಬ ಸದಸ್ಯರಿಗೆ ನಿಯಮಿತವಾಗಿ ಭೇಟಿಗೆ ಅವಕಾಶ ನೀಡಬೇಕು. ಕಾನೂನು ಪ್ರಕ್ರಿಯೆಗಳನ್ನು ನ್ಯಾಯಯುತ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದಿದ್ದಾರೆ.
“ಕ್ರಿಕೆಟ್ – ರಾಷ್ಟ್ರಗಳನ್ನು ಒಗ್ಗೂಡಿಸುವ ಸೇತುವೆ”: ದಿಗ್ಗಜರು ತಮ್ಮ ಹೇಳಿಕೆಯಲ್ಲಿ, “ಕ್ರಿಕೆಟ್ ರಾಷ್ಟ್ರಗಳ ನಡುವಿನ ಸ್ನೇಹ ಮತ್ತು ಗೌರವದ ಸೇತುವೆಯಾಗಿದೆ. ಮೈದಾನದಲ್ಲಿ ಪೈಪೋಟಿ ಇದ್ದರೂ, ಹೊರಗಡೆ ಮಾನವೀಯತೆ ಉಳಿಯಬೇಕು” ಎಂದು ಮಾಜಿ ನಾಯಕರು ಹೇಳಿದ್ದಾರೆ. ಇಮ್ರಾನ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಕ್ರೀಡಾ ಮನೋಭಾವವನ್ನು ಸದಾ ಪಾಲಿಸಿಕೊಂಡು ಬಂದಿದ್ದು, ಈಗ ಅವರಿಗೆ ಅದೇ ಗೌರವ ದೊರಕಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೋಲಾರ: ಖಾಸಗಿ ಬಸ್ ಪಲ್ಟಿ- ಇಬ್ಬರ ಸ್ಥಿತಿ ಗಂಭೀರ, 40ಕ್ಕೂ ಹೆಚ್ಚು ಮಂದಿಗೆ ಗಾಯ
ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ಜೈಲು ಪರಿಸ್ಥಿತಿಗಳ ಕುರಿತು ಜಾಗತಿಕ ಕ್ರಿಕೆಟ್ ವಲಯ ವ್ಯಕ್ತಪಡಿಸಿರುವ ಈ ಒಗ್ಗಟ್ಟು, ಮಾನವೀಯತೆ ಮತ್ತು ಕ್ರೀಡಾ ಮೌಲ್ಯಗಳ ಪ್ರತೀಕವಾಗಿದೆ. ಇದೀಗ ಪಾಕಿಸ್ತಾನ ಸರ್ಕಾರ ಈ ಮನವಿಗೆ ಸ್ಪಂದಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಗೌರವಯುತ ವರ್ತನೆ ಒದಗಿಸುತ್ತದೆಯೇ ಎಂಬುದರತ್ತ ಜಾಗತಿಕ ಗಮನ ಕೇಂದ್ರೀಕೃತವಾಗಿದೆ.























