ಕೂಡು ಕುಟುಂಬ ವ್ಯವಸ್ಥೆಯ ಮಹತ್ವ ಸಾರಿದ ಜಯಚಂದ್ರನ್
ದಾಂಡೇಲಿ: ದಾಂಡೇಲಿಯ ಕೆನರಾ ವೆಲ್ಫೇರ್ ಟ್ರಸ್ಟಿನ ಇಂಗ್ಲೀಷ್ ಮೀಡಿಯಂ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಜೆ ಅಜ್ಜ–ಅಜ್ಜಿಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಎನ್.ಜಯಚಂದ್ರನ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಕೂಡು ಕುಟುಂಬ ವ್ಯವಸ್ಥೆಯ ಮಹತ್ವವನ್ನು ವಿವರಿಸಿದರು.
ಕೂಡು ಕುಟುಂಬ ವ್ಯವಸ್ಥೆಯ ಮೌಲ್ಯಗಳ ನೆನಪು: “ಹಿಂದೆ ತಂದೆ, ತಾಯಿ, ಚಿಕ್ಕಪ್ಪ, ದೊಡ್ಡಪ್ಪ, ಅಜ್ಜ–ಅಜ್ಜಿ, ಮಕ್ಕಳು–ಮೊಮ್ಮಕ್ಕಳು ಎಲ್ಲರೂ ಒಂದೇ ಸೂರಿನಡಿ ಪ್ರೀತಿ, ವಿಶ್ವಾಸದಿಂದ ಬದುಕುತ್ತಿದ್ದೆವು. ಹಬ್ಬ–ಹರಿದಿನ, ಸಾಮೂಹಿಕ ಭೋಜನ ಎಲ್ಲವೂ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿತ್ತು. ಆದರೆ ಇಂದು ಆ ವ್ಯವಸ್ಥೆ ನಿಧಾನವಾಗಿ ಕ್ಷೀಣಿಸುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾವಿರ ದಿನಗಳ ಸಾಧನೆ: GDP, GST ಸಂಗ್ರಹದಲ್ಲಿ ಕರ್ನಾಟಕ ದಾಖಲೆ
1978ರಲ್ಲಿ ಅಮೇರಿಕಾದಲ್ಲಿ ಆರಂಭವಾದ ‘ಗ್ರ್ಯಾಂಡ್ ಪೆರಂಟ್ಸ್ ಡೇ’ ಹಿನ್ನೆಲೆಯನ್ನು ವಿವರಿಸಿದ ಅವರು, ಅಜ್ಜ–ಅಜ್ಜಿಯರ ನಿಷ್ಕಲ್ಮಷ ಪ್ರೀತಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳನ್ನು ಅಜ್ಜ–ಅಜ್ಜಿಯರ ಪ್ರೀತಿಯಿಂದ ದೂರ ಮಾಡಬಾರದು ಎಂದು ಪಾಲಕರಿಗೆ ಕರೆ ನೀಡಿದರು.
ಮಕ್ಕಳಲ್ಲಿ ಮೌಲ್ಯ ಸಂಸ್ಕಾರ ಬೆಳೆಸುವ ಅಗತ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ನಾಯ್ಕ ಮಾತನಾಡಿ, “ಸಂಬಂಧಗಳ ಕೊಂಡಿಗಳು ಕಳಚದಂತೆ ಮಕ್ಕಳಲ್ಲಿ ಅಜ್ಜ–ಅಜ್ಜಿಯರ ಪ್ರೀತಿ, ಮಾರ್ಗದರ್ಶನ ದೊರೆಯುವಂತೆ ಮಾಡುವುದು ಪಾಲಕರ ಕರ್ತವ್ಯ. ಇದರಿಂದ ಮಕ್ಕಳಲ್ಲಿ ಮೌಲ್ಯ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸಬಹುದು” ಎಂದರು.
ಇದನ್ನೂ ಓದಿ: ಭರವಸೆ ಪಾಲನೆ ಮುಂದುವರಿಯಲಿದೆ: ಹಾವೇರಿಯಲ್ಲಿ ಸಿಎಂ ಭರವಸೆ
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಶಾಂತ ಬಸೂರತೆಕರ, ರಾಘವೇಂದ್ರ ಗಡಕರ, ರೇಣುಕಾ ಕಿಲ್ಲೇಕರ, ಅಶೋಕ ಮಾನೆ, ಲಕ್ಷ್ಮಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕರಾದ ಸುಜಾತಾ ಭೋಜ ಹಾಗೂ ಫಿರ್ದೋಶ್ ಸೇರಿದಂತೆ ಸಿಬ್ಬಂದಿ ಸಹಕಾರ ನೀಡಿದರು.
ಮಕ್ಕಳು ಅಜ್ಜ–ಅಜ್ಜಿಯರಿಗೆ ಸಮರ್ಪಿಸಿದ ಹಾಡು, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಪೋಷಕರು ಹಾಗೂ ಅಜ್ಜ–ಅಜ್ಜಿಯರು ಸಂತಸದಿಂದ ಭಾಗವಹಿಸಿ ಶಾಲೆಯ ಈ ಪ್ರಯತ್ನವನ್ನು ಮೆಚ್ಚಿದರು.























