ಬೆಂಗಳೂರಿನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ

0
1

ಬೆಂಗಳೂರು: ಕನ್ನಡದ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದ ಕಿರುತೆರೆ ನಟಿ ನಂದಿನಿ (26), ನಗರದ ರಾಜರಾಜೇಶ್ವರಿ ನಗರದ ಖಾಸಗಿ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ವಿಜಯನಗರ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ, ವೃತ್ತಿ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು. ಭಾನುವಾರ ಮಧ್ಯರಾತ್ರಿ ಅವರು ವಾಸವಿದ್ದ ಪಿಜಿಯಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಾವಿಗೂ ಮುನ್ನ ನಂದಿನಿ ಡೆತ್‌ನೋಟ್ ಬರೆದಿಟ್ಟಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಂದಿನಿ ಅವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆಯ ನಿಧನದ ನಂತರ ಆ ಕೆಲಸವನ್ನು ಅನುಕಂಪದ ಆಧಾರದ ಮೇಲೆ ನಂದಿನಿ ಅವರೇ ಮುಂದುವರಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಆದರೆ, ನಂದಿನಿ ಅವರಿಗೆ ಶಿಕ್ಷಕಿ ವೃತ್ತಿಗಿಂತ ನಟನೆಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಇದರೊಂದಿಗೆ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಈ ಕೌಟುಂಬಿಕ ಒತ್ತಡ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು ಅವರು ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಅಂತ್ಯಕ್ರಿಯೆ: ಆರ್​ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ ಅವರ ಅಂತ್ಯಕ್ರಿಯೆ ಚಿಗಟೇರಿಯಲ್ಲಿ ಜರುಗಿತು.

Previous articleಶ್ರೀಮಂತ ದೇಗುಲಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಗೆ ಅಗ್ರಸ್ಥಾನ