SK Home Ad
Home ನಮ್ಮ ಜಿಲ್ಲೆ ಹಾಸನ ಕಾಡಾನೆ ಸೆರೆ ಕಾರ್ಯಾಚರಣೆ ವಿಫಲ: ಐದು ಗಂಟೆಗಳ ಕಾರ್ಯಾಚರಣೆ ವ್ಯರ್ಥ

ಕಾಡಾನೆ ಸೆರೆ ಕಾರ್ಯಾಚರಣೆ ವಿಫಲ: ಐದು ಗಂಟೆಗಳ ಕಾರ್ಯಾಚರಣೆ ವ್ಯರ್ಥ

0
50

ಹಾಸನ(ಬೇಲೂರು): ಹತ್ತು ಗಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಹಾಗೂ ಗುಂಪು ಕಾಡಾನೆಗಳನ್ನು ಕಾಡಿನಿಂದ ಓಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯಾಚರಣೆ ಎರಡನೇ ದಿನವೂ ವಿಫಲವಾಗಿದೆ.

ಬೇಲೂರು ತಾಲೂಕಿನ ಕಾನಹಳ್ಳಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಇಂದು ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ, ಇಬ್ಬರನ್ನು ಬಲಿ ಪಡೆದಿರುವ ಗುಂಪಿನಿಂದ ಬೇರ್ಪಟ್ಟ ಎರಡು ಸಲಗಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಸಾಧ್ಯವಾಗಿಲ್ಲ.

ಕುಮ್ಕಿ ಆನೆಗಳ ನೆರವಿನೊಂದಿಗೆ ಸಾಕಾನೆಗಳ ಬಳಿಗೆ ತೆರಳಿ ಕಾಡಾನೆಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಪಶುವೈದ್ಯರು ಶತಾಯಗತಾಯ ಪ್ರಯತ್ನಿಸಿದರು. ಆದರೆ ಸಾಕಾನೆಗಳು ಸಮೀಪಿಸುತ್ತಿದ್ದಂತೆ ಎರಡು ಸಲಗಗಳು ಸ್ಥಳದಿಂದ ಓಡಿ ಹೋಗುತ್ತಿದ್ದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಯಿತು.

ಡ್ರೋನ್ ಕ್ಯಾಮೆರಾ ಬಳಸಿ ಕಾಡಾನೆಗಳ ಇರುವಿಕೆಯನ್ನು ಪತ್ತೆಹಚ್ಚಲು ಡ್ರೋನ್ ಸ್ವ್ಯಾಡ್ ನಿರಂತರವಾಗಿ ಪ್ರಯತ್ನಿಸಿತು. ಕಾಡಾನೆಗಳ ಸ್ಥಳವನ್ನು ಪತ್ತೆಹಚ್ಚಿದರೂ, ಅವುಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಸೂಕ್ತ ಅವಕಾಶ ಸಿಗಲಿಲ್ಲ. ಹೀಗಾಗಿ ಇಡೀ ದಿನ ನಡೆದ ಕಾರ್ಯಾಚರಣೆ ನಿರೀಕ್ಷಿತ ಫಲ ನೀಡಲಿಲ್ಲ.

ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಸಿಎಫ್ ಏಡುಕುಂಡಲ, ಡಿಎಫ್‌ಒ ಹರೀಶ್ ಸೇರಿದಂತೆ ಎಸಿಎಫ್‌ಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಪ್ರಶಾಂತ್, ಶ್ರೀಕಂಠ, ಏಕಲವ್ಯ, ರೋಹಿತ್, ಅಶೋಕ, ಅಯ್ಯಪ್ಪ ಹಾಗೂ ಮಾಣಿಕ್ಯ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಇನ್ನು ಕಾರ್ಯಾಚರಣೆ ವೇಳೆ ಸಾರ್ವಜನಿಕರ ಸುರಕ್ಷತೆಗಾಗಿ ಕಾಡಾನೆಗಳು ರಸ್ತೆ ದಾಟುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಒಬ್ಬರು ಡಿವೈಎಸ್‌ಪಿ, ಒಬ್ಬರು ಸಿಪಿಐ, ಆರು ಮಂದಿ ಪಿಎಸ್‌ಐ ಹಾಗೂ ಮೂವರು ಡಿಆರ್ ಪೊಲೀಸ್ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ತೊಡಗಿದ್ದರು.

ಇದರೊಂದಿಗೆ ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಎರಡನೇ ದಿನವೂ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ವಿಫಲವಾಗಿದ್ದು, ನಾಳೆಯೂ ಕಾರ್ಯಾಚರಣೆ ಮುಂದುವರಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.