ಉತ್ತರ ಕನ್ನಡ(ದಾಂಡೇಲಿ): ಹಬ್ಬಗಳ ಸಂಭ್ರಮದ ನಡುವೆ ದಾಂಡೇಲಿಯ ಜೀವನಾಡಿ ಕಾಳಿ ನದಿ ತ್ಯಾಜ್ಯದ ಭಾರದಿಂದ ಮಲೀನಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೂಜೆ ಮುಗಿದ ಬಳಿಕ ಹೂವು, ಹಾರ, ಪೂಜಾ ಸಾಮಗ್ರಿಗಳು, ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು ಹಾಗೂ ನಿರುಪಯುಕ್ತ ವಸ್ತುಗಳನ್ನು ನದಿಗೆ ತಂದು ಸುರಿಯುವ ಪ್ರವೃತ್ತಿ ಹೆಚ್ಚುತ್ತಿರುವುದು ನದಿಯ ಪರಿಸರ ವ್ಯವಸ್ಥೆಗೆ ಗಂಭೀರ ಸವಾಲಾಗಿದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ನೂರಾರು ಗಣೇಶ ಮೂರ್ತಿಗಳ ವಿಸರ್ಜನೆ, ದೀಪಾವಳಿ, ನವರಾತ್ರಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭಗಳಲ್ಲಿ ಪೂಜಾ ತ್ಯಾಜ್ಯಗಳನ್ನು ನದಿಗೆ ಹಾಗೂ ನದಿದಂಡೆಗೆ ಎಸೆಯಲಾಗುತ್ತಿದೆ. ನದಿಗೆ ಕಸ ಹಾಕಬಾರದು ಎಂಬ ಎಚ್ಚರಿಕೆ ಫಲಕಗಳನ್ನು ಸೇತುವೆಯ ಮೇಲೆ ಅಳವಡಿಸಿದ್ದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ವಿಪರ್ಯಾಸವೆಂದರೆ, ಕಸ ಎಸೆಯಬೇಡಿ ಎಂದು ಸೂಚಿಸುವ ಫಲಕಗಳ ಪಕ್ಕದಲ್ಲಿಯೇ ತ್ಯಾಜ್ಯ ಎಸೆಯಲಾಗುತ್ತಿದೆ. ಕೆಲವರು ದೂರದ ಪ್ರದೇಶಗಳಿಂದ ಕಾರು, ಜೀಪುಗಳಲ್ಲಿ ಬಂದು ಕಸದ ಚೀಲಗಳನ್ನು ನದಿಗೆ ಸುರಿಯುತ್ತಿರುವುದು ಪರಿಸರ ಕಾಳಜಿಯ ಕೊರತೆಯನ್ನು ಎತ್ತಿತೋರಿಸುತ್ತಿದೆ.
ಜಲಚರ ಜೀವಿಗಳಿಗೆ ಅಪಾಯದ ಗಂಟೆ: ನದಿಗೆ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ನೀರಿನಲ್ಲಿ ದೀರ್ಘಕಾಲ ಉಳಿದು, ಕ್ರಮೇಣ ಮೈಕ್ರೋಪ್ಲಾಸ್ಟಿಕ್ಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಇವು ಮೀನುಗಳು ಸೇರಿದಂತೆ ಜಲಚರ ಜೀವಿಗಳ ಆಹಾರ ಸರಪಳಿಯನ್ನು ಪ್ರವೇಶಿಸಿ ಪರಿಸರ ಸಮತೋಲನಕ್ಕೆ ಧಕ್ಕೆ ತರಬಹುದು. ಕೊಳೆಯುವ ಪೂಜಾ ತ್ಯಾಜ್ಯಗಳ ಅತಿಯಾದ ಸಂಗ್ರಹದಿಂದ ನೀರಿನಲ್ಲಿನ ಆಮ್ಲಜನಕದ ಪ್ರಮಾಣವೂ ಕುಸಿಯುವ ಅಪಾಯವಿದೆ. ಇದು ನದಿಯನ್ನು ಅವಲಂಬಿಸಿರುವ ಜೀವಜಗತ್ತಿಗೆ ಎಚ್ಚರಿಕೆಯ ಸಂಕೇತವಾಗಿದೆ.
ಆಡಳಿತ ಎಚ್ಚೆತ್ತುಕೊಳ್ಳುವುದು ಯಾವಾಗ?: ಕೇವಲ ಎಚ್ಚರಿಕೆ ಫಲಕಗಳನ್ನು ಹಾಕುವುದರಿಂದ ನದಿ ಮಾಲಿನ್ಯ ತಡೆಯಲು ಸಾಧ್ಯವಿಲ್ಲ. ನಗರಸಭೆ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಆಡಳಿತ ವ್ಯವಸ್ಥೆಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.





















