SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಗೋಮಾತೆಯಾದರೂ ಸರ್ಕಾರಕ್ಕೆ ಬೆಲೆ ಇಳಿಸುವ ಬುದ್ಧಿ ನೀಡಲಿ

ಗೋಮಾತೆಯಾದರೂ ಸರ್ಕಾರಕ್ಕೆ ಬೆಲೆ ಇಳಿಸುವ ಬುದ್ಧಿ ನೀಡಲಿ

0
11

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಸುವ ಮೂಲಕ ರಾಜ್ಯ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ಏರಿಸಿರುವ ಬೆಲೆಯನ್ನು ಇಳಿಸುವ ಬುದ್ಧಿಯನ್ನು ಗೋಮಾತೆ ಸರ್ಕಾರಕ್ಕೆ ನೀಡಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿವೆ. ಸಾಲದೆಂಬಂತೆ ಹಾಲು, ಮೊಸರು, ಬೆಣ್ಣೆ, ತುಪ್ಪ ಈಗ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದ ದರವನ್ನೂ ಕೈಗೆಟುಕದಂತೆ ಏರಿಸಲಾಗಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ನಾನು ಭಾವನೆಯೊಂದಿಗೆ ರಾಜಕಾರಣ ಮಾಡುವುದಿಲ್ಲ, ಬದುಕಿನೊಂದಿಗೆ ರಾಜಕಾರಣ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹೇಳಿದ್ದರು. ಹಾಗಾದರೆ ಬಡವರ ಬದುಕಿನೊಂದಿಗೆ ನೀವು ಚೆಲ್ಲಾಟವಾಡುತ್ತಿಲ್ಲವೇ? ತಕ್ಷಣ ಬಸ್ ಪ್ರಯಾಣದ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕೆಂದು ಅವರು ಒತ್ತಾಯಿಸಿದರು.

ಗೋಪೂಜೆಯಲ್ಲಿ ಭಾವನೆ ಮತ್ತು ಬದುಕು ಎರಡೂ ಅಡಕವಾಗಿವೆ. ಗೋವನ್ನು ತಾಯಿಯ ರೂಪದಲ್ಲಿ ಪೂಜಿಸುವುದು ನಮ್ಮ ಭಾವನೆಯಾದರೆ, ಬದುಕಿಗೂ ಗೋಮಾತೆಯೇ ಆಧಾರ. ಭಾವನೆ ಮತ್ತು ಬದುಕಿನ ನಡುವಿನ ಸಂಬಂಧವನ್ನು ಗೋಮಾತೆ ಕಲಿಸುತ್ತಾಳೆ ಎಂದರು.

ಜನರ ಅಪೇಕ್ಷೆಯಂತೆ ರಾಜ್ಯದಲ್ಲಿ ಹೆಚ್ಚಿನ ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಬೇಕು. ಸರ್ಕಾರವೇ ಜಾಗ ನೀಡಿದರೂ ಅಲ್ಲಿ ನಿರ್ಮಿಸಿರುವ ಗೋಶಾಲೆಯನ್ನು ಅರಣ್ಯ ಇಲಾಖೆಯ ಜಾಗ ಎಂದು ಹೇಳಲಾಗುತ್ತಿದೆ. ಗೋಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.