SK Home Ad
Home ಸುದ್ದಿ ರಾಜ್ಯ ಶಿರಸಿಯ ಯುವಕನಿಂದ ಜಾಗತಿಕ ಮಟ್ಟದ ಅತ್ಯಾಧುನಿಕ ಯಂತ್ರಗಳ ನಿರ್ಮಾಣ

ಶಿರಸಿಯ ಯುವಕನಿಂದ ಜಾಗತಿಕ ಮಟ್ಟದ ಅತ್ಯಾಧುನಿಕ ಯಂತ್ರಗಳ ನಿರ್ಮಾಣ

0
6

‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ‘ಕನ್ನಡದ ಜೆನ್‌ ಜ಼ೀ ಸಾಧಕರು’ ಸರಣಿಯಲ್ಲಿ ಪ್ರಕಟವಾದ ಲೇಖನ

– ರವೀಂದ್ರ ಮಾವಖಂಡ
ಅತ್ಯಾಧುನಿಕ ಇಂಜಿನಿಯರಿಂಗ್ ಆವಿಷ್ಕಾರಗಳ ಆಧಾರದ ಮೇಲೆ ರೂಪುಗೊಂಡ ‘ಡೀಪ್ ಟೆಕ್ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್ ಉತ್ಪಾದನಾ ರಂಗದಲ್ಲೂ ಸಂಚಲನ ಸೃಷ್ಟಿಸುತ್ತಿರುವ ಜೆನ್ ಜೀ ಉದ್ಯಮಿ ಪ್ರವರ ಆರ್. ಹೆಗಡೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹುಳಗೋಳ (ಅರಸಾಪುರ) ಎಂಬ ಹಳ್ಳಿಯಲ್ಲಿ ‘ಪ್ರೊ ಭಾರತ್ ಟೆಕ್ನಾಲಜೀಸ್’ ಮೂಲಕ ದೇಶೀಯ ಹಾರ್ಡ್‌ವೇರ್ ಉತ್ಪಾದಿಸುವ ಭರವಸೆಯ ಕೇಂದ್ರವನ್ನು ರೂಪಿಸುತ್ತಿದ್ದಾರೆ.

ಶಿರಸಿಯ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್‌ನಲ್ಲಿ ಇಲೆಕ್ಟ್ರಾನಿಕ್ಸ್ ಡಿಪ್ಲೊಮಾ ಪೂರ್ಣಗೊಳಿಸಿದ, 27ರ ಹರೆಯದ ಯುವ ಉದ್ಯಮಿ ಪ್ರವರ ಆರ್. ಹೆಗಡೆ 2025ರಲ್ಲಿ ‘ಪ್ರೋಭಾರತ್ ಟೆಕ್ನಾಲಜೀಸ್ ಸಂಸ್ಥೆಯನ್ನು ಸ್ಥಾಪಿಸಿದರು. ಇದನ್ನು ದೇಶೀಯ ಹಾರ್ಡ್‌ವೇರ್ ಉತ್ಪಾದಿಸುವ ಭರವಸೆಯ ಕೇಂದ್ರವನ್ನಾಗಿ ರೂಪಿಸುತ್ತಿದ್ದಾರೆ.

ಡಿಪ್ಲೊಮಾ ಓದುವಾಗಲೇ ಇವರು ರೋಬೋಟಿಕ್ಸ್ ಹಾಗೂ ಡ್ರೋನ್ ವಿನ್ಯಾಸಗೊಳಿಸುವ ಹವ್ಯಾಸ ಹೊಂದಿದ್ದರು. ಅದಕ್ಕೆ ಬೇಕಾದ ಬಿಡಿಭಾಗಗಳ ಕೊರತೆ ಮತ್ತು ಡಿಜಿಟಲ್ ಪರಿಕಲ್ಪನೆಗಳಿಗೆ ತಕ್ಕಂತೆ ಭೌತಿಕ ರೂಪ ನೀಡುವ ತುಡಿತವೇ ಇವರನ್ನು 3ಡಿ ಮುದ್ರಣಕ್ಷೇತ್ರದತ್ತ ಕರೆತಂದಿತು. ಮಹಾನಗರಗಳ ಗದ್ದಲ, ದುಬಾರಿ ಜೀವನಶೈಲಿ, ನಿರಂತರ ಧಾವಂತದ ಜೀವನದಿಂದ ದೂರವಾಗಿ, ಹಳ್ಳಿಯ ಪ್ರಶಾಂತ ವಾತಾವರಣದಲ್ಲೇ ಜಾಗತಿಕ ಮಟ್ಟದ ಯಂತ್ರಗಳನ್ನು ತಯಾರಿಸಬಹುದೆಂಬ ವಿಶ್ವಾಸ ಇವರದು. ಇದಕ್ಕೆ ಪಾಲಕರು, ಊರಿನ ಹಿರಿಯರ ಬೆಂಬಲವೂ ಇದೆ.

ಸ್ವದೇಶಿ ಕೋರ್‌ಎಕ್ಸ್‌ವೈ ಕ್ರಾಂತಿ: ವಿದೇಶಗಳಿಂದ ದುಬಾರಿ ಯಂತ್ರಗಳನ್ನು ತರಿಸಿಕೊಳ್ಳುವುದಕ್ಕೆ ಪರ್ಯಾಯವಾಗಿ ಮೂಡಿದ ಪರಿಕಲ್ಪನೆ ‘ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ವರ್ಲ್ಡ್’. ಶೇ. 60ರಿಂದ 80ರಷ್ಟು ಸ್ವದೇಶಿ ಬಿಡಿಭಾಗಗಳನ್ನೇ ಬಳಸಿ ಅತ್ಯಂತ ವೇಗ ಹಾಗೂ ನಿಖರವಾದ ಹೈಸ್ಪೀಡ್ ಇಂಡಸ್ಟ್ರಿಯಲ್ ಗ್ರೇಡ್ ಕೋರ್‌ಎಕ್ಸ್‌ವೈ ಕೈನಮ್ಯಾಟಿಕ್ಸ್ ಆಧಾರಿತ ಪ್ರಿಂಟರ್‌ಗಳನ್ನು ಪ್ರವರ ಅಭಿವೃದ್ಧಿಪಡಿಸಿದ್ದಾರೆ.

ಹೈಪ್ರೆಸಿಷನ್ ಲೀನಿಯರ್ ಗೈಡ್‌ಗಳು ಮತ್ತು ಸ್ಟೆಪ್ಪರ್ ಡ್ರೈವರ್‌ಗಳಂತಹ ಅತ್ಯಂತ ಸೂಕ್ಷ್ಮ ಬಿಡಿಭಾಗಗಳನ್ನು ಸಣ್ಣ ಊರಿಗೆ ತರಿಸಿಕೊಳ್ಳುವುದು ಮೊದಲು ಕಷ್ಟವಾಗಿತ್ತು. ಕಾಲಕ್ರಮೇಣ ಸ್ಥಳೀಯರೊಡನೆ ಕೈಜೋಡಿಸಿದ ಪ್ರವರ, ಪೂರೈಕೆಯ ವ್ಯವಸ್ಥೆಯನ್ನು ಗಟ್ಟಿಗೊಳಿಸಿಕೊಂಡರು. ಅಷ್ಟೇ ಅಲ್ಲ, ಪ್ರಮುಖ ಮೆಕ್ಯಾನಿಕಲ್ ಬಿಡಿಭಾಗಗಳನ್ನು ತಮ್ಮದೇ 3ಡಿ ಪ್ರಿಂಟರ್‌ಗಳ ಮೂಲಕ ಸ್ಥಳೀಯವಾಗಿಯೇ ತಯಾರಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇವರ ಸಂಸ್ಥೆಯ MK1 ಸರಣಿಯ MK1 Core, MK1 Pro, MK1 Max ಎಂಬ ಮೂರು 3ಡಿ ಪ್ರಿಂಟರ್‌ಗಳು ಲಭ್ಯ. ಇವು ಅತಿ ನಿಖರ ಮುದ್ರಣ ಸಾಮರ್ಥ್ಯವುಳ್ಳವು. ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ವಿಸ್ತರಿಸಬಹುದಾದ ವಿನ್ಯಾಸ ಇವುಗಳ ವಿಶೇಷತೆ. ಆಮದು ಮಾಡಿಕೊಳ್ಳುವ ಯಂತ್ರಗಳ ಆರಂಭಿಕ ಬಂಡವಾಳ ವೆಚ್ಚವನ್ನು ಇವು ಶೇ. 20ರಿಂದ 40ರಷ್ಟು ಕಡಿಮೆ ಮಾಡಿವೆ. ಇಂಜಿನಿಯರಿಂಗ್ ಕಾಲೇಜುಗಳು, ಹೊಸ ಉದ್ಯಮಿಗಳಿಂದ ಇವುಗಳಿಗೆ ಅತ್ಯುತ್ತಮ ಸ್ಪಂದನ ದೊರೆತಿದೆ. ಮಂಗಳೂರಿನಲ್ಲಿ ಜರುಗಿದ ‘ಟೆಕ್ನೋವಾಂಜ಼ಾ 2026’ ತಂತ್ರಜ್ಞಾನ ಶೃಂಗಸಭೆ, ಹುಬ್ಬಳ್ಳಿಯಲ್ಲಿ ನಡೆದ ‘ಇನ್ಕಾಮೆಕ್ಸ್ 2026’ ಕೈಗಾರಿಕಾ ಮತ್ತು ವಾಣಿಜ್ಯ ವಸ್ತು ಪ್ರದರ್ಶನಗಳಲ್ಲಿ ಇವು ಮೆಚ್ಚುಗೆ ಪಡೆದಿವೆ.

ಮುಂದಿನ ತಲೆಮಾರಿನ `MK2’ ಸರಣಿಯು ಸ್ವಯಂಚಾಲಿತ ಉಪಕರಣ ಬದಲಾವಣೆ ವ್ಯವಸ್ಥೆಯನ್ನು ಒಳಗೊಳ್ಳಲಿದೆ. ಮ್ಯಾಗ್ನೆಟಿಕ್ ತಂತ್ರಜ್ಞಾನದ ಮೂಲಕ ಒಂದೇ ಯಂತ್ರದಲ್ಲಿ ವಿಭಿನ್ನ ಟೂಲ್‌ಹೆಡ್‌ಗಳನ್ನು ಬದಲಾಯಿಸಬಹುದು. ಎಫ್‌ಡಿಎಂ ತಂತ್ರಜ್ಞಾನ ಆಧಾರಿತ 3ಡಿ ಮುದ್ರಣ, ಲೇಸರ್ ಮೂಲಕ ಅಕ್ಷರ/ಚಿತ್ರದ ಕೆತ್ತನೆ, ಸಿಎನ್‌ಸಿ ಮಿಲ್ಲಿಂಗ್ (ಮರ / ಪ್ಲಾಸ್ಟಿಕ್‌ನಲ್ಲಿ ಬೇಕಾದ ವಿನ್ಯಾಸ ಮೂಡಿಸುವುದು), ವಿನೈಲ್ ಸ್ಟಿಕ್ಕರ್ ಕಟಿಂಗ್, ಪಿ.ಸಿ.ಬಿ. ಮಾದರಿ ತಯಾರಿ – ಹೀಗೆ ಹಲವು ಕೆಲಸಗಳನ್ನು ಒಂದೇ ಯಂತ್ರದಲ್ಲಿ ಮಾಡಬಹುದು. ಇಷ್ಟು ಕೆಲಸಗಳನ್ನು ಮಾಡುವಾಗಲೂ ಮೈಕ್ರಾನ್ ಅಳತೆಯ ಅತೀ ಸೂಕ್ಷ್ಮ ನಿಖರತೆಯನ್ನು ಕಾಯ್ದುಕೊಳ್ಳುವುದು, ಯಂತ್ರ ಕಂಪಿಸದಂತೆ ತಡೆಯುವುದು ಪ್ರಮುಖ ಸವಾಲಾಗಿತ್ತು. ಅದನ್ನು ನಿಯಂತ್ರಿಸುವುದರಲ್ಲಿಯೂ ಪ್ರವರ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಸರ್ಕಾರದ ಕರ್ನಾಟಕ ಸರ್ಕಾರದ ‘ಎಲಿವೇಟ್ 2025’ (ELEVATE 2025 – Idea2PoC) ಯೋಜನೆಯಡಿ ಅನುದಾನ ಪಡೆದಿರುವ ಪ್ರವರ; ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೂಲಕ ಪ್ರಾದೇಶಿಕ ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳ ‘ವಿಟಿಯು ನೈನ್ 2.0’ (VTU NAIN 2.0) ಮೌಲ್ಯಮಾಪನದ ತೀರ್ಪುಗಾರರೂ ಆಗಿದ್ದರು. ಪ್ರಸ್ತುತ ಧಾರವಾಡ ಐಐಟಿಯ ‘ಧರ್ತಿ ಫೌಂಡೇಷನ್ ಆಶ್ರಯದಲ್ಲಿ ತಜ್ಞರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಈ ಜೆನ್ ಜೀ ಕನ್ನಡಿಗ ‘ಪ್ರವರ’ ಹೆಸರಿಗಿರುವ ಅರ್ಥದಂತೆಯೇ ಉತ್ಕೃಷ್ಟ ಉತ್ಪನ್ನಗಳನ್ನು ರೂಪಿಸುತ್ತಿದ್ದಾರೆ. ಜಾಗತಿಕ ಮಟ್ಟದ ಉತ್ಪಾದನಾ ತಂತ್ರಜ್ಞಾನವನ್ನು ಸಣ್ಣ ಊರಿನಿಂದ ಮುನ್ನೆಲೆಗೆ ತರುತ್ತಿರುವ ಇವರ ಸಾಧನೆಯು, ತಂತ್ರಜ್ಞಾನ ಕ್ಷೇತ್ರದಲ್ಲಿ ನಾಡಿಗೆ ಕೀರ್ತಿ ತರುವುದರ ಜತೆಗೆ ಭಾರತವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಯಾಗಿದೆ.

ತಂತ್ರಜ್ಞಾನದ ಜತೆ ಪರಿಸರ ಕಾಳಜಿ: ಯಂತ್ರವಷ್ಟೇ ಅಲ್ಲದೆ, ಸ್ವಂತ ಸಾಫ್ಟ್‌ವೇರ್‌ಗಳಾದ ಪ್ರೋಸ್ಲೈಸರ್ ಮತ್ತು ಮೊಬೈಲ್/ಕಂಪ್ಯೂಟರ್ ಮೂಲಕ ದೂರದಲ್ಲೇ ಕುಳಿತು ಯಂತ್ರವನ್ನು ನಿಯಂತ್ರಿಸುವ ಪ್ರೋಕನೆಕ್ಟ್ ವ್ಯವಸ್ಥೆಯನ್ನೂ ಪ್ರವರ ರೂಪಿಸಿದ್ದಾರೆ. ಮುದ್ರಣದ ವೇಳೆ ಎಲ್ಲಿಯಾದರೂ ಸಂಭವಿಸಬಹುದಾದ ದೋಷಗಳನ್ನು ಸ್ವಯಂಚಾಲಿತವಾಗಿ ಸರಿಪಡಿಸಿಕೊಳ್ಳುವ ‘ಎಡ್ಜ್ ಎ.ಐ.’ ತಂತ್ರಜ್ಞಾನ ಹಾಗೂ ‘ಕ್ಲಿಪ್ಪರ್’ ತಂತ್ರಾಂಶ ಇದರಲ್ಲಿದೆ. ಮುದ್ರಣದ ಬಳಿಕ ಉಳಿಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ಥಳದಲ್ಲೇ ಮರುಬಳಕೆ ಮಾಡಿ, ಮತ್ತೆ ಮುದ್ರಣಕ್ಕೆ ಬೇಕಾದ ತಂತುವನ್ನಾಗಿ ಬದಲಾಯಿಸುವ ಮರುಬಳಕೆ ವ್ಯವಸ್ಥೆಯೂ ಇದೆ. ಇದು ತ್ಯಾಜ್ಯ ನಿರ್ವಹಣೆ ಹಾಗೂ ಸ್ಥಳೀಯ ವಲಯದ ಆರ್ಥಿಕತೆಗೆ ನೆರವಾಗಲಿದೆ.

ಜಾಗತಿಕ ಗುಣಮಟ್ಟದ ಉತ್ಪನ್ನ ನೀಡಿ: “ಕೇವಲ ಪರದೆಯ ಹಿಂದೆ ಇರಬೇಡಿ, ನೈಜ ವಸ್ತುಗಳನ್ನು ನಿರ್ಮಿಸಿ. ಸಾಫ್ಟ್‌ವೇರ್ ಎಷ್ಟು ಮುಖ್ಯವೋ, ಭೌತಿಕ ಜಗತ್ತಿನ ನೈಜ ಸಮಸ್ಯೆಗಳನ್ನು ಬಗೆಹರಿಸುವ ಹಾರ್ಡ್‌ವೇರ್ ಕೂಡ ಅಷ್ಟೇ ಮುಖ್ಯ. ಸೋಲಿಗೆ ಹೆದರಬೇಡಿ. ಹಾರ್ಡ್‌ವೇರ್‌ನಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗುವುದಿಲ್ಲ. ಆದರೆ ಪ್ರತಿ ಸೋಲೂ ವಿನ್ಯಾಸವನ್ನು ಉತ್ತಮಪಡಿಸುವ ಪಾಠ. ಸ್ಥಳೀಯವಾಗಿ ಯೋಚಿಸಿ, ಜಾಗತಿಕ ಗುಣಮಟ್ಟ ನೀಡಿ. ನೀವು ಎಲ್ಲಿದ್ದೀರಿ ಎಂಬುದು ಮುಖ್ಯವಲ್ಲ. ನೀವು ರೂಪಿಸುವ ಉತ್ಪನ್ನ ಜಾಗತಿಕ ಸ್ಪರ್ಧೆಯನ್ನು ಎದುರಿಸುವಂತಿರಬೇಕು” ಎಂದು ಪ್ರೋಭಾರತ್ ಟೆಕ್ನಾಲಜೀಸ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರವರ್ ಹೆಗಡೆ ಹೇಳುತ್ತಾರೆ.