ಚಿತ್ರದುರ್ಗ: ಸ್ಟಿಂಗ್ ಅಪರೇಷನ್ ಕುರಿತು ಹೆಚ್ಚು ಮಾತನಾಡುತ್ತಿದ್ದ, ಕಟ್ಟುಕತೆಗಳ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ ಎಂದು ಜಿಲ್ಲಾ ಸಚಿವ ಟಿ. ರಘುಮೂರ್ತಿ ಹೇಳಿದರು.
ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಟಿಂಗ್ ಆಪರೇಷನ್ ವಿಷಯ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಪರ ಮೇಲ್ನೋಟಕ್ಕೆ ಮಾತನಾಡುತ್ತಲೇ ಅವರ ವರ್ಚಸ್ಸು ಕುಂದಿಸುವ ಕೆಲಸಕ್ಕೆ ಹಾಕಿರುವುದು ಎಚ್.ಡಿ. ಕುಮಾರಸ್ವಾಮಿ ಎಂಬ ಸತ್ಯ ಹತ್ತಿರವಾಗುತ್ತಿದೆ ಎಂದರು.
ಸುಧೀರ್ಘ ಕಾಲ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಗೌಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಅಂತಹ ಪ್ರಯತ್ನದ ಮೂಲಕ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಸಿ ಬಳಿದು ಅಧಿಕಾರಕ್ಕೆ ಬರಲು ಮುಂದಾಗಿದ್ದು, ಕೆಟ್ಟ ರಾಜಕಾರಣಕ್ಕೆ ನಾಂದಿ ಹಾಡಿದೆ ಎಂದು ಹೇಳಿದರು.
ಅಧಿಕಾರ, ಚುನಾವಣೆಗಾಗಿ ಪರಸ್ಪರ ವಾಗ್ದಾಳಿ ಸಹಜ. ಆದರೆ, ಸ್ಟಿಂಗ್ ಅಂತಹ ಕೆಟ್ಟದ್ದರ ಮೂಲಕ ರಾಜಕಾರಣ ಮಾಡುವುದು ರಾಜ್ಯದ ರಾಜಕೀಯ ಇತಿಹಾಸಕ್ಕೆ ಬಹುದೊಡ್ಡ ಧಕ್ಕೆ ಉಂಟು ಮಾಡಿದೆ. ಈ ವಿಷಯದಲ್ಲಿ ಇನ್ನಷ್ಟು ತನಿಖೆ ಆಗಬೇಕಿದೆ. ಪ್ರಕರಣದಲ್ಲಿ ಭಾಗಿ ಆಗಿರುವ ಎಲ್ಲರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದರು.
ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಲಿತ ದಲಿತವೆಂಬ ಪದ ಬಳಕೆ, ಅನಗತ್ಯ ಟೀಕೆಗಳನ್ನು ಎಚ್ಡಿಕೆ ಮಾಡಿದ್ದು ಬೇಸರದ ಸಂಗತಿ. ಯಾವುದೇ ವ್ಯಕ್ತಿಯನ್ನು ಜಾತಿಯಿಂದ ಗುರುತಿಸುವುದು ಸರಿಯಲ್ಲ. ವೈಯಕ್ತಿಕ ನಿಂದನೆಗಳು, ಅವಹೇಳನಕಾರಿ ಪದಗಳ ಬಳಕೆ ನಿಲ್ಲಬೇಕು ಎಂದು ತಿಳಿಸಿದರು.






















