SK Home Ad
Home ಸುದ್ದಿ ದೇಶ 100 ಎಕರೆಯಲ್ಲಿ ತಲೆ ಎತ್ತಲಿದೆ `ನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯʼ ಟೌನ್‌ಶಿಪ್

100 ಎಕರೆಯಲ್ಲಿ ತಲೆ ಎತ್ತಲಿದೆ `ನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯʼ ಟೌನ್‌ಶಿಪ್

0
24

ಮುಂಬೈ: ಅನಾಥ ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಕೂಡ ಘನತೆಯಿಂದ ಕೂಡಿದ ಬದುಕನ್ನು ನಡೆಸಬೇಕೆಂಬ ಮಹದುದ್ದೇಶದೊಂದಿಗೆ ತಾವು 100 ಎಕರೆ ಪ್ರದೇಶದಲ್ಲಿ `ನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯ’ ಎನ್ನುವ ಮಾನವೀಯ ಉಪಕ್ರಮವನ್ನು ಆರಂಭಿಸುತ್ತಿರುವುದಾಗಿ ರಿಲಯನ್ಸ್ ಪ್ರತಿಷ್ಠಾನದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದ್ದಾರೆ.

ಕರ್ಜತ್‌ನಲ್ಲಿ ತಲೆ ಎತ್ತಲಿರುವ ಉದ್ದೇಶಿತ ಸೌಕರ್ಯ ಸಂಕೀರ್ಣಕ್ಕೆ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಹುಟ್ಟುಹಬ್ಬದಂದು ಘೋಷಿಸುತ್ತಿರುವ ಈ ಉಪಕ್ರಮವು ಸಂಪೂರ್ಣವಾಗಿ ಲಾಭರಹಿತವಾಗಿದ್ದು, ಸೇವೆಯ ಆಶಯವನ್ನು ಒಳಗೊಂಡಿದೆ. ನೂರು ಎಕರೆ ವಿಸ್ತೀರ್ಣದಲ್ಲಿ ಒಟ್ಟು 8 ಗ್ರಾಮಗಳನ್ನು ಅಭಿವೃದ್ಧಿ ಪಡಿಸಿ, 5 ಸಾವಿರಕ್ಕೂ ಹೆಚ್ಚು ಮಂದಿಗೆ ಶಾಶ್ವತ ಸೌಕರ್ಯದ ವ್ಯವಸ್ಥೆ ಮಾಡಲಾಗುವುದು.

ಟೌನ್-ಶಿಪ್ ಮಾದರಿಯಲ್ಲಿ ಮೈದಾಳಲಿರುವ ಈ ಗ್ರಾಮಗಳಿಗೆ ದೇಶದ ಪವಿತ್ರ ನದಿಗಳ ಹೆಸರನ್ನಿಡಲಾಗುವುದು. ಇಲ್ಲಿ ಮನೆ, ಅತ್ಯುತ್ತಮ ರಸ್ತೆಗಳು, ದೇವಾಲಯ, ಆಸ್ಪತ್ರೆ, ಮೈದಾನಗಳು, ಉದ್ಯಾನಗಳು, ಕೃಷಿಯೋಗ್ಯ ಭೂಮಿ ಮತ್ತು ಕಾರ್ಯಾಗಾರಗಳು ಇರಲಿವೆ. ಒಂದೊಂದು ಟೌನ್-ಶಿಪ್ ಕೂಡ ಇಲ್ಲಿಗೆ ಬರುವ ನಿವಾಸಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಬಣ್ಣ, ಚಿಹ್ನೆ ಮತ್ತು ಉದ್ಯಾನ ಹೊಂದಿರಲಿವೆ’ ಎಂದು ಹೇಳಿದ್ದಾರೆ.

ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ’ (ವಿ ಕೇರ್) ಎನ್ನುವ ಉದಾತ್ತ ಧ್ಯೇಯ ಈ ಉಪಕ್ರಮದ ಹಿಂದಿದ್ದು, ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಯೋಜನೆಯಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಆರೈಕೆ, ನೆಮ್ಮದಿ, ವೈದ್ಯಕೀಯ ಸೇವೆಗಳ ನೆರವು ಸಿಗಬೇಕೆನ್ನುವುದು ನನ್ನ ಕಳಕಳಿಯಾಗಿದೆ. ಜತೆಗೆ ಪರಸ್ಪರ ಸ್ನೇಹಸಂಬಂಧ ಮತ್ತು ಹಬ್ಬ-ಹರಿದಿನಗಳ ಆಚರಣೆಗೂ ಅವಕಾಶವಿರಲಿದೆ. ಹೀಗೆ ಆರೈಕೆದಾರರು, ವೈದ್ಯಕೀಯ ಸಿಬ್ಬಂದಿ ಮತ್ತು ನೆರವು ಸಿಬ್ಬಂದಿ ಸೇರಿ ಒಟ್ಟು 15 ಸಾವಿರ ಜನರ ಬೃಹತ್ ಸಮುದಾಯವು ಉದ್ದೇಶಿತನೀತಾ ಮುಕೇಶ್ ಅಂಬಾನಿ ಅನಂತ್ ಆಶ್ರಯ’ದಲ್ಲಿ ಮುಂಬರುವ ದಿನಗಳಲ್ಲಿ ನೆಲೆಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಟೌನ್-ಶಿಪ್ ನಲ್ಲಿ ಒಬ್ಬ ಮುಖ್ಯ ಕಾರ್ಯಕರ್ತರು ಪ್ರತಿಯೊಬ್ಬರ ವೈಯಕ್ತಿಕ ಆರೈಕೆ ಮತ್ತು ಯೋಗಕ್ಷೇಮಕ್ಕೆ ಬೇಕಾದ ಕ್ರಮಗಳ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲದೆ, ಪ್ರತೀ 6 ತಿಂಗಳಿಗೊಮ್ಮೆ ಇಲ್ಲಿನ ಕಾರ್ಯಕ್ರಮಗಳನ್ನು ಪರಾಮರ್ಶಿಸಿ, ಅಗತ್ಯವೆನಿಸಿದರೆ ಸೂಕ್ತ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಈ ಯೋಜನೆಯಿಂದ ಸ್ಥಳೀಯ ಪರಿಸರದ 1 ಸಾವಿರ ಜನರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಕೂಡ ಲಭ್ಯವಾಗಲಿದೆ. ಇದಲ್ಲದೆ, ಉಳಿದವರಿಗೆ ವಿಶ್ರಾಂತಿ ಆರೈಕೆ, ಸಂಪರ್ಕ ಕಾರ್ಯಕ್ರಮಗಳು ಮತ್ತು ಸಮುದಾಯ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ನೀತಾ ಅಂಬಾನಿ ನುಡಿದಿದ್ದಾರೆ.