ಒಸ್ಲೋ: 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಶುಕ್ರವಾರ (ಅ.9) ನಾರ್ವೆಯ ಓಸ್ಲೋದಲ್ಲಿ ಘೋಷಣೆಯಾಗಲಿದ್ದು, ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾವು ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಾಗಿ ಹೇಳಿದ್ದಾರೆ.
ವಿವಿಧ ಸಂಘರ್ಷಗಳನ್ನು ಅಂತ್ಯಗೊಳಿಸಲು ತಮ್ಮ ಆಡಳಿತ ಕೈಗೊಂಡಿರುವ ಪ್ರಯತ್ನಗಳನ್ನು ಉಲ್ಲೇಖಿಸಿರುವ ಟ್ರಂಪ್, ಶಾಂತಿ ಪ್ರಶಸ್ತಿಗೆ ತಾವು ಅರ್ಹರಾಗಿರುವುದಾಗಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಇತ್ತೀಚಿನ ಹೇಳಿಕೆಯಲ್ಲೂ ತಮ್ಮ ಸಾಧನೆಗಳನ್ನು ಪ್ರಸ್ತಾಪಿಸಿ ಪ್ರಶಸ್ತಿಗೆ ತಮ್ಮ ಹೆಸರು ಪರಿಗಣನೆಯಲ್ಲಿದೆ ಎಂದು ತಿಳಿಸಿದ್ದಾರೆ.
ಆದರೆ, ಟ್ರಂಪ್ ಅವರ ನಾಮನಿರ್ದೇಶನವನ್ನು ನಾರ್ವೆಯ ನೊಬೆಲ್ ಸಂಸ್ಥೆ ಅಧಿಕೃತವಾಗಿ ದೃಢಪಡಿಸಿಲ್ಲ. ನೊಬೆಲ್ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಾಮನಿರ್ದೇಶನಗೊಂಡಿದೆಯೇ ಎಂಬುದನ್ನು ನಾರ್ವೇಜಿಯನ್ ನೊಬೆಲ್ ಸಮಿತಿ 50 ವರ್ಷಗಳವರೆಗೆ ದೃಢೀಕರಿಸುವುದಿಲ್ಲ. ಹೀಗಾಗಿ ಟ್ರಂಪ್ ಅವರ ಹೇಳಿಕೆಯನ್ನು ಅಧಿಕೃತ ನಾಮನಿರ್ದೇಶನದ ದೃಢೀಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ.
287 ಅಭ್ಯರ್ಥಿಗಳ ನಾಮನಿರ್ದೇಶನ: 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಒಟ್ಟು 287 ಅಭ್ಯರ್ಥಿಗಳು ನಾಮನಿರ್ದೇಶನಗೊಂಡಿದ್ದಾರೆ. ಇವರಲ್ಲಿ 208 ಮಂದಿ ವ್ಯಕ್ತಿಗಳು ಹಾಗೂ 79 ಸಂಸ್ಥೆಗಳು ಸೇರಿವೆ. ಆದರೆ ಅಧಿಕೃತ ಅಭ್ಯರ್ಥಿಗಳ ಹೆಸರುಗಳನ್ನು ನೊಬೆಲ್ ಸಮಿತಿ ಬಹಿರಂಗಪಡಿಸಿಲ್ಲ.
ನೊಬೆಲ್ ಶಾಂತಿ ಪ್ರಶಸ್ತಿಯ ಘೋಷಣೆ ಅ. 9ರಂದು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.30ರ ಸುಮಾರಿಗೆ ನಡೆಯಲಿದೆ. ಪ್ರಶಸ್ತಿ ಘೋಷಣಾ ಸಮಾರಂಭ ಓಸ್ಲೋದಲ್ಲಿರುವ ನಾರ್ವೇಜಿಯನ್ ನೊಬೆಲ್ ಸಂಸ್ಥೆಯಲ್ಲಿ ನಡೆಯಲಿದೆ.
ಟ್ರಂಪ್ ಸೇರಿದಂತೆ ಹಲವು ಹೆಸರುಗಳು ಮಾಧ್ಯಮಗಳು ಹಾಗೂ ತಜ್ಞರ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದರೂ, ಅಂತಿಮವಾಗಿ ಪ್ರಶಸ್ತಿ ಯಾರಿಗೆ ದೊರೆಯಲಿದೆ ಎಂಬುದು ಘೋಷಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.






















