SK Home Ad
Home ಸುದ್ದಿ ರಾಜ್ಯ ಜಿಪಂ–ತಾಪಂ ಚುನಾವಣೆಯಲ್ಲಿ ಮಹಿಳೆಯರದ್ದೇ ಮೇಲುಗೈ: 2,476 ಸ್ಥಾನ ಮೀಸಲು

ಜಿಪಂ–ತಾಪಂ ಚುನಾವಣೆಯಲ್ಲಿ ಮಹಿಳೆಯರದ್ದೇ ಮೇಲುಗೈ: 2,476 ಸ್ಥಾನ ಮೀಸಲು

0
36
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸರ್ಕಾರ ಮೀಸಲಾತಿ ಅಧಿಸೂಚನೆ ಪ್ರಕಟಿಸಿದ್ದು, ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳು ಮೀಸಲಾಗಿವೆ. ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳ ಪೈಕಿ 571 ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳ ಪೈಕಿ 1,905 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಅಂದರೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಒಟ್ಟು 4,785 ಸ್ಥಾನಗಳ ಪೈಕಿ 2,476 ಸ್ಥಾನಗಳು ಮಹಿಳೆಯರ ಪಾಲಾಗಿವೆ. ಹೀಗಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ದೊರೆಯಲಿದೆ.

ಜಿಪಂನಲ್ಲಿ 571 ಮಹಿಳೆಯರಿಗೆ ಅವಕಾಶ: ರಾಜ್ಯದ 31 ಜಿಲ್ಲಾ ಪಂಚಾಯಿತಿಗಳಲ್ಲಿ ಒಟ್ಟು 1,129 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ 571 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಪ್ರವರ್ಗವಾರು ನೋಡಿದರೆ ಪರಿಶಿಷ್ಟ ಜಾತಿಯ 225 ಸ್ಥಾನಗಳ ಪೈಕಿ 121, ಪರಿಶಿಷ್ಟ ಪಂಗಡದ 102ರಲ್ಲಿ 59, ಹಿಂದುಳಿದ ವರ್ಗ ‘ಅ’ನ 183ರಲ್ಲಿ 98, ಹಿಂದುಳಿದ ವರ್ಗ ‘ಬಿ’ಯ 43ರಲ್ಲಿ 25 ಹಾಗೂ ಸಾಮಾನ್ಯ ವರ್ಗದ 576 ಸ್ಥಾನಗಳ ಪೈಕಿ 268 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ತಾಪಂನಲ್ಲಿ 1,905 ಮಹಿಳೆಯರಿಗೆ ಮೀಸಲು: ರಾಜ್ಯದ 31 ಜಿಲ್ಲೆಗಳ 239 ತಾಲೂಕು ಪಂಚಾಯಿತಿಗಳ 3,656 ಸದಸ್ಯ ಸ್ಥಾನಗಳ ಪೈಕಿ 1,905 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ತಾಲೂಕು ಪಂಚಾಯಿತಿ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ 733 ಸ್ಥಾನಗಳ ಪೈಕಿ 429, ಪರಿಶಿಷ್ಟ ಪಂಗಡದ 394ರಲ್ಲಿ 287, ಹಿಂದುಳಿದ ವರ್ಗ ‘ಅ’ನ 508ರಲ್ಲಿ 306, ಹಿಂದುಳಿದ ವರ್ಗ ‘ಬಿ’ಯ 111ರಲ್ಲಿ 64 ಹಾಗೂ ಸಾಮಾನ್ಯ ವರ್ಗದ 1,910 ಸ್ಥಾನಗಳ ಪೈಕಿ 819 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು: ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ, 2010ರ ಮೂಲಕ ಈ ಮೀಸಲಾತಿ ಜಾರಿಗೆ ಬಂದಿದೆ.

ಹೊಸ ಮೀಸಲಾತಿ ಅಧಿಸೂಚನೆಯಿಂದ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತಿದೆ. ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಆಕಾಂಕ್ಷಿಗಳ ಚಟುವಟಿಕೆಯೂ ಹೆಚ್ಚಾಗುವ ನಿರೀಕ್ಷೆಯಿದೆ.

ಚುನಾವಣಾ ಪ್ರಕ್ರಿಯೆಯ ಮುಂದಿನ ಹಂತದಲ್ಲಿ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣ ಮತ್ತಷ್ಟು ರಂಗೇರುವ ನಿರೀಕ್ಷೆಯಿದೆ.