SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಶಾಸಕರ ಭೇಟಿಗೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ: 7 ಜನರ ವಿರುದ್ಧ ಪ್ರಕರಣ

ಶಾಸಕರ ಭೇಟಿಗೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ: 7 ಜನರ ವಿರುದ್ಧ ಪ್ರಕರಣ

0
38

ದಾವಣಗೆರೆ: ಸ್ಥಳೀಯ ಶಾಸಕರನ್ನು ಭೇಟಿ ಮಾಡಲು ಬಂದಿದ್ದ ಕಾರು ಕನ್ಸಲ್ಟೆನ್ಸಿ ಉದ್ಯಮಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಏಳು ಜನರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯ ದೇವರಾಜ ಅರಸು ಬಡಾವಣೆಯ ನಿವಾಸಿ ಮೊಹಮ್ಮದ್ ಖಾಲೀದ್ (33) ಹಲ್ಲೆಗೊಳಗಾದವರು. ಸೆ. 26ರಂದು ರಾತ್ರಿ ಸುಮಾರು 8.30ಕ್ಕೆ ಮಟ್ಟಿಕಲ್ಲಿನ ಕಲ್ಲೇಶ್ವರ ರೈಸ್ ಮಿಲ್ ಬಳಿ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸಾಧಿಕ್ ಪೈಲ್ವಾನ್ ಎಂಬಾತ ಮಾತನಾಡಬೇಕೆಂದು ಖಾಲೀದ್ ಅವರನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಸಾಧಿಕ್ ಪೈಲ್ವಾನ್ ಹಾಗೂ ಅಯೂಬ್ ಪೈಲ್ವಾನ್ ಅವರು ಖಾಲೀದ್ ಅವರನ್ನು ಹಿಡಿದುಕೊಂಡಿದ್ದು, ಅಲ್ಲಿಗೆ ಬಂದ ಅಲಿ ಅಕ್ಬರ್, ಹುಸೇನ್, ಹಸೇನ್, ಹಮ್ಜಾ ಹಾಗೂ ಜಾಕೀರ್ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

‘ನಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಸ್ಟೇಟಸ್ ಹಾಕುತ್ತೀಯಾ’ ಎಂದು ನಿಂದಿಸಿ ಕೈ-ಕಾಲುಗಳಿಂದ ಹಲ್ಲೆ ಮಾಡಿದ್ದಲ್ಲದೆ, ಜಾಕೀರ್‌ನ ಪ್ರಚೋದನೆಯ ಮೇರೆಗೆ ಹುಸೇನ್ ಕೈಯಲ್ಲಿದ್ದ ಕಬ್ಬಿಣದ ಪಂಚ್‌ನಿಂದ ಮೂಗಿಗೆ ಗುದ್ದಿದ್ದರಿಂದ ತೀವ್ರ ರಕ್ತಗಾಯವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮತ್ತೆ ಅಪಪ್ರಚಾರ ಮಾಡಿದರೆ ಪ್ರಾಣ ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಖಾಲೀದ್ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಮೊಹಮ್ಮದ್ ಅವೇಜ್ ಹಾಗೂ ಮುಸ್ತಫಾ ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ.

ಗಾಯಗೊಂಡ ಖಾಲೀದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೂರಿನ ಮೇರೆಗೆ ಸಾಧಿಕ್ ಪೈಲ್ವಾನ್, ಅಯೂಬ್ ಪೈಲ್ವಾನ್, ಅಲಿ ಅಕ್ಬರ್, ಹುಸೇನ್, ಹಸೇನ್, ಹಮ್ಜಾ ಹಾಗೂ ಜಾಕೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.