SK Home Ad
Home ನಮ್ಮ ಜಿಲ್ಲೆ ವಿಜಯನಗರ ಹಿಂದೂ–ಮುಸ್ಲಿಂ ಸೌಹಾರ್ದತೆಗೆ ಮಾದರಿಯಾದ ಹೂವಿನಹಡಗಲಿ: ಗಣಪತಿಗೆ ಮುಸ್ಲಿಂ ಬಾಂಧವರಿಂದ ಪೂಜೆ

ಹಿಂದೂ–ಮುಸ್ಲಿಂ ಸೌಹಾರ್ದತೆಗೆ ಮಾದರಿಯಾದ ಹೂವಿನಹಡಗಲಿ: ಗಣಪತಿಗೆ ಮುಸ್ಲಿಂ ಬಾಂಧವರಿಂದ ಪೂಜೆ

0
60
ಹೂವಿನಹಡಲಿಯಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಗಣಪತಿ ವಿಸರ್ಜನೆ; ಮುಸ್ಲಿಂ ಬಾಂಧವರಿಂದ ಪೂಜೆ

ಹೊಸಪೇಟೆ: ಗಣಪತಿ ಮೆರವಣಿಗೆ ವೇಳೆ ಉಂಟಾಗಿದ್ದ ಗೊಂದಲದ ಬಳಿಕ ಹೂವಿನಹಡಗಲಿ ಪಟ್ಟಣದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡಿದ್ದು, ಇಂದು ಸಂಜೆ ಗಣಪತಿ ವಿಸರ್ಜನೆ ನಡೆಯಲಿದೆ. ಇದಕ್ಕೂ ಪೂರ್ವದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಪರಸ್ಪರ ಸಹಕಾರದ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಹೂವಿನಹಡಗಲಿ ಪಟ್ಟಣದ ಕೊರವರ ಓಣಿಯಲ್ಲಿ ಮರುಪ್ರತಿಷ್ಠಾಪನೆಗೊಂಡ ಗಣಪತಿ ಮೂರ್ತಿಗೆ ಇಸ್ಲಾಂಪೇಟೆಯ ಮುಸ್ಲಿಂ ಬಾಂಧವರು ಪೂಜೆ ಸಲ್ಲಿಸಿದ್ದು ವಿಶೇಷ ಗಮನ ಸೆಳೆಯಿತು. ಪರಸ್ಪರ ಗೌರವ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಈ ಬೆಳವಣಿಗೆ ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಉಂಟಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎರಡೂ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿತ್ತು. ಮಾತುಕತೆ ಮತ್ತು ಸಮನ್ವಯದ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಲಾಗಿದ್ದು, ಎರಡೂ ಸಮುದಾಯಗಳ ಮುಖಂಡರು ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸಹಕಾರ ನೀಡಿದ್ದಾರೆ.

ಹೂವಿನಹಡಗಲಿ ಶಾಸಕ ಕೃಷ್ಣಾನಾಯಕ್ ಅವರ ನೇತೃತ್ವದಲ್ಲಿ ಗಣಪತಿ ಮೂರ್ತಿಯನ್ನು ಮರುಪ್ರತಿಷ್ಠಾಪಿಸಲಾಗಿತ್ತು. ಬಳಿಕ ಭಕ್ತಿಭಾವದಿಂದ ಇಂದು ಸಂಜೆ ಗಣಪತಿಗೆ ಬೀಳ್ಕೊಡುವ ನೀಡುವ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಇಸ್ಲಾಂಪೇಟೆಯ ಮುಸ್ಲಿಂ ಬಾಂಧವರು ಗಣಪತಿಗೆ ಪೂಜೆ ಸಲ್ಲಿಸಿದ್ದು, ಕಾರ್ಯಕ್ರಮದ ಪ್ರಮುಖ ವಿಶೇಷತೆಯಾಯಿತು.

ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿ, ಎಸ್ಪಿ ಜಾಹ್ನವಿ ಹಾಗೂ ಶಾಸಕ ಕೃಷ್ಣಾನಾಯಕ್ ಅವರ ನೇತೃತ್ವದಲ್ಲಿ ಎರಡೂ ಸಮುದಾಯಗಳ ಮುಖಂಡರೊಂದಿಗೆ ನಡೆದ ಶಾಂತಿ ಸಭೆ ಮತ್ತು ಸಮನ್ವಯದ ಪ್ರಯತ್ನಗಳು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಸಹಕಾರಿಯಾಗಿವೆ.

ಇಂದು ಸಂಜೆ ನಡೆಯುವ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.