ಕರ್ನಾಟಕದ ಅತ್ಯಂತ ವಿವಾದಿತ ಹಾಗೂ ದೀರ್ಘಕಾಲದ ಮೂಲಸೌಕರ್ಯ ಯೋಜನೆಯಾದ ನೈಸ್ ರಸ್ತೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ಮತ್ತೊಂದು ಸುತ್ತಿನ ಮಹಾಸಂಗ್ರಾಮ ಆರಂಭವಾಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ನೈಸ್ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಪರವಾಗಿ ಬೃಹತ್ ಹೋರಾಟ ನಡೆಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಡಿ.ಕೆ. ಶಿವಕುಮಾರ್, “ನೈಸ್ ಯೋಜನೆಯನ್ನು ಜಾರಿಗೆ ತಂದಿದ್ದು ನಾನಲ್ಲ, ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರೇ ಒಪ್ಪಂದಕ್ಕೆ ಸಹಿ ಹಾಕಿದ್ದು. ಒಪ್ಪಂದದ ಕಾಲಾವಧಿ ಮುಗಿಯುವ ಮುನ್ನ ರಸ್ತೆಯನ್ನು ಸರ್ಕಾರ ವಶಕ್ಕೆ ಪಡೆಯಲು ಸಾಧ್ಯವೇ? ಮೈಸೂರು, ಚನ್ನಪಟ್ಟಣ, ರಾಮನಗರ ಬೆಳೆಯುತ್ತಿದ್ದು, ಎಕ್ಸ್‌ಪ್ರೆಸ್‌ವೇ ಜೊತೆಗೆ ನೈಸ್ ರಸ್ತೆಯೂ ಅಗತ್ಯವಿದೆ” ಎಂದು ನೇರ ತಿರುಗೇಟು ನೀಡಿದ್ದಾರೆ.
ಈ ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ, ಕಳೆದ ಮೂರು ದಶಕಗಳಿಂದ ಕಡತಗಳಲ್ಲಿ ಹುದುಗಿರುವ ನೈಸ್ ಯೋಜನೆಯ ಅಸಲಿ ಸತ್ಯವೇನು? ನ್ಯಾಯಾಲಯಗಳ ಕಠಿಣ ತೀರ್ಪುಗಳು ಹಾಗೂ ಸರ್ಕಾರದ ಅಧಿಕೃತ ದಾಖಲೆಗಳು ಏನು ಹೇಳುತ್ತವೆ ಎಂಬುದನ್ನು ನಿಷ್ಪಕ್ಷಪಾತವಾಗಿ ಅವಲೋಕಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಯೋಜನೆಯ ಜನನ ಮತ್ತು ದೇವೇಗೌಡರ ಸಹಿ: 1990ರ ದಶಕದ ಆರಂಭದಲ್ಲಿ ಬೆಂಗಳೂರು-ಮೈಸೂರು ನಡುವಿನ ಹಳೆಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಮಿತಿಮೀರಿತ್ತು. ನಾಲ್ಕು ಗಂಟೆಗಳ ಈ ಪ್ರಯಾಣದ ದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದ ‘ನಿರ್ಮಿಸಿ-ಮಾಲೀಕತ್ವ ಹೊಂದಿ-ನಿರ್ವಹಿಸಿ-ಹಸ್ತಾಂತರಿಸಿ’ ಮಾದರಿಯ ಯೋಜನೆಗೆ ಮುಂದಾಯಿತು. 1995ರ ಫೆಬ್ರವರಿ 20ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಅಮೆರಿಕದ ರಾಜ್ಯ ಮ್ಯಾಸಚೂಸೆಟ್ಸ್ ಗವರ್ನರ್ ಉಪಸ್ಥಿತಿಯಲ್ಲಿ ಈ ಸಂಬಂಧ ಒಪ್ಪಂದಕ್ಕೆ ಸಹಿ ಬಿದ್ದಿತ್ತು. ನಂತರ ಸಚಿವ ಸಂಪುಟದ ಉಪಸಮಿತಿ ಪರಿಶೀಲನೆ ನಡೆಸಿ 1997ರ ಏಪ್ರಿಲ್ 3ರಂದು ಮೂಲ ಒಪ್ಪಂದಕ್ಕೆ ಅಧಿಕೃತ ಅಂಕಿತ ಹಾಕಿತು.
ಈ ಮಹತ್ವಾಕಾಂಕ್ಷೆಯ ಯೋಜನೆಯಡಿ 111 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ನಗರದ ದಕ್ಷಿಣ ಭಾಗವನ್ನು ಬೆಸೆಯುವ 41 ಕಿ.ಮೀ ಪೆರಿಫೆರಲ್ ವರ್ತುಲ ರಸ್ತೆ, ಲಿಂಕ್ ರಸ್ತೆ ಹಾಗೂ ಆರ್ಥಿಕ ಸ್ವಾವಲಂಬನೆಗಾಗಿ ಮಾರ್ಗಮಧ್ಯೆ 5 ಬೃಹತ್ ಟೌನ್‌ಶಿಪ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ ವಾಸ್ತವವಾಗಿ ಪೂರ್ಣಗೊಂಡಿದ್ದು 41 ಕಿ.ಮೀ ಪೆರಿಫೆರಲ್ ರಸ್ತೆ ಮತ್ತು ಕೇವಲ 5 ಕಿ.ಮೀ ಎಕ್ಸ್‌ಪ್ರೆಸ್‌ವೇ ಮಾತ್ರ.
ನೈಸ್ ಯೋಜನೆಯು ರಸ್ತೆ ನಿರ್ಮಾಣದ ಹೆಸರಿನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ದಂಧೆ ಎಂಬ ಆರೋಪ ಹೊರಿಸಿ ನ್ಯಾಯಾಲಯಗಳ ಮೆಟ್ಟಿಲೇರಲಾಗಿತ್ತು. ಆದರೆ ಈ ಆರೋಪವನ್ನು ನ್ಯಾಯಾಲಯಗಳು ಮೂರು ಬಾರಿ ಸಮಗ್ರವಾಗಿ ತಳ್ಳಿಹಾಕಿವೆ. 1998ರಲ್ಲಿ ಹೈಕೋರ್ಟ್ ಸಿಬಿಐ ತನಿಖೆಯ ಬೇಡಿಕೆಯನ್ನು ತಿರಸ್ಕರಿಸಿತು. ನಂತರ 2005ರಲ್ಲಿ ಹೈಕೋರ್ಟ್, ಸರ್ಕಾರದ ಆರೋಪಗಳು ಕೇವಲ ದುರುದ್ದೇಶಪೂರಿತ ಎಂದು ತೀರ್ಪು ನೀಡಿ, ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಆದೇಶಿಸಿತು. ಅಲ್ಲದೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿತು.
2006ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, “ಸರ್ಕಾರ ಮಾಡಿರುವ ವಂಚನೆಯ ಆರೋಪವು ಸಂಪೂರ್ಣ ಅಪ್ರಾಮಾಣಿಕತೆಯಿಂದ ಕೂಡಿದೆ. ಕಂಪನಿಯಿಂದ ಯಾವುದೇ ವಂಚನೆಯಾಗಿಲ್ಲ, ಬದಲಾಗಿ ರಾಜಕೀಯ ಕಾರಣಗಳಿಗಾಗಿ ಸರ್ಕಾರವೇ ಅಡ್ಡಿಪಡಿಸುತ್ತಿದೆ” ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಅಷ್ಟೇ ಅಲ್ಲದೆ, 2004ರಲ್ಲಿ ಎಚ್.ಡಿ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಭೂಸ್ವಾಧೀನ ತಡೆಹಿಡಿದ ಕ್ರಮವು ಸರ್ಕಾರದ ದುರುದ್ದೇಶವನ್ನು ಸಾಬೀತುಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ದಾಖಲಿಸಿತ್ತು. ನಂತರ ದೇವೇಗೌಡರು ನೀಡಿದ ಹೇಳಿಕೆಗಳ ವಿರುದ್ಧ ನೈಸ್ ಸಂಸ್ಥೆ ಹೂಡಿದ ಮಾನನಷ್ಟ ಮೊಕದ್ದಮೆಯಲ್ಲಿ ಸಿವಿಲ್ ನ್ಯಾಯಾಲಯವು ದೇವೇಗೌಡರಿಗೆ ₹2 ಕೋಟಿ ದಂಡ ವಿಧಿಸಿತ್ತು. ಈ ಆದೇಶದ ವಿರುದ್ಧ ದೇವೇಗೌಡರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಮಾನಹಾನಿಕರ ಹೇಳಿಕೆ ನೀಡುವುದಿಲ್ಲವೆಂಬ ಮುಚ್ಚಳಿಕೆಯೊಂದಿಗೆ ತಡೆಯಾಜ್ಞೆ ಪಡೆದಿದ್ದಾರೆ.
ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಕಾನೂನುಬಾಹಿರ ಎಂಬುದು ಹೋರಾಟಗಾರರ ಮತ್ತೊಂದು ಪ್ರಮುಖ ಆರೋಪ. ಆದರೆ 2000ನೇ ಇಸವಿಯಲ್ಲಿ ರಾಜ್ಯಪಾಲರ ಹೆಸರಿನಲ್ಲಿ ನಡೆದ ಅಧಿಕೃತ ಟೋಲ್ ರಿಯಾಯಿತಿ ಒಪ್ಪಂದದ ಪ್ರಕಾರ, ವಾರ್ಷಿಕ ಗರಿಷ್ಠ ಶೇಕಡಾ 10ರ ಮಿತಿಯೊಳಗೆ ಟೋಲ್ ಪರಿಷ್ಕರಣೆಗೆ ಸರ್ಕಾರವೇ ಅಧಿಕೃತ ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸುತ್ತಾ ಬಂದಿದೆ. ಈ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಹಾಗೂ 2011ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿವೆ.
ಇನ್ನು ನೈಸ್ ಸಂಸ್ಥೆಯು 13,000 ಎಕರೆ ಹೆಚ್ಚುವರಿ ಭೂಮಿ ಕಬಳಿಸಿದೆ ಎಂಬ ರಾಜಕೀಯ ಮಾತುಗಳು ಚಾಲ್ತಿಯಲ್ಲಿವೆ. ಆದರೆ 2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಅಧಿಕೃತ ನಡಾವಳಿಗಳ ಪ್ರಕಾರ, ಯೋಜನೆಯ 20,000 ಎಕರೆಯಲ್ಲಿ ಕಂಪನಿಗೆ ಹಸ್ತಾಂತರವಾಗಿದ್ದು ಕೇವಲ 7,124 ಎಕರೆ ಮಾತ್ರ. ಉಳಿದ 13,609 ಎಕರೆ ಜಮೀನನ್ನು ಸರ್ಕಾರವೇ ಕಂಪನಿಗೆ ನೀಡಿಲ್ಲ ಎಂಬುದು ಕಡತಗಳಲ್ಲಿ ಸ್ಪಷ್ಟವಾಗಿದೆ. ಪೆರಿಫೆರಲ್ ರಸ್ತೆಗೆ 554 ಎಕರೆ ಹೆಚ್ಚುವರಿ ಜಮೀನು ನೀಡಲಾಗಿದೆ ಎಂಬ ಅಂಶವಿದ್ದರೂ, ಒಟ್ಟಾರೆ ಯೋಜನೆಯಲ್ಲಿ ಕಂಪನಿಗೆ ಸಿಗಬೇಕಾದ ಸಾವಿರಾರು ಎಕರೆ ಭೂಮಿಯ ಕೊರತೆಯೇ ಎದ್ದು ಕಾಣುತ್ತದೆ.
ರೈತರಿಗೆ ಪರಿಹಾರ ಧನ ವಿತರಿಸುವ ಶಾಸನಬದ್ಧ ಹೊಣೆಗಾರಿಕೆ ಕೆಐಎಡಿಬಿ ಮೇಲಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ನೈಸ್ ಸಂಸ್ಥೆಯು 2003ರಿಂದ 2025ರ ಅವಧಿಯಲ್ಲಿ 16 ಕಂತುಗಳಲ್ಲಿ ಬರೋಬ್ಬರಿ ರೂ.360 ಕೋಟಿ ಪರಿಹಾರ ಮೊತ್ತವನ್ನು ಕೆಐಎಡಿಬಿ ಖಾತೆಗೆ ಜಮೆ ಮಾಡಿದೆ. ಆದರೆ ಜಮೀನು ನೀಡಿದ ರೈತರಿಗೆ ಉಚಿತ ನಿವೇಶನ ನೀಡುವ ‘ಪ್ರೋತ್ಸಾಹಕ ನಿವೇಶನ’ ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ. ಕೆಂಗೇರಿ ಇಂಟರ್‌ಚೇಂಜ್ ಬಳಿ 480 ನಿವೇಶನಗಳನ್ನು ಅಭಿವೃದ್ಧಿಪಡಿಸಲು ಸಂಸ್ಥೆ ಮುಂದಾದಾಗ, ಸುಪ್ರೀಂ ಕೋರ್ಟ್ ತೀರ್ಪಿನನ್ವಯ ವಸತಿ ಬಡಾವಣೆಗಳನ್ನು ಟೌನ್‌ಶಿಪ್‌ಗಳ ಒಳಗೇ ನಿರ್ಮಿಸಬೇಕು ಎಂದು ಹೇಳಿ ಸರ್ಕಾರ ಅನುಮೋದನೆ ನಿರಾಕರಿಸಿದೆ. ಇದು ಸ್ಥಳದ ವಿವಾದವೇ ವಿನಃ ಸಂಸ್ಥೆ ಪರಿಹಾರ ನೀಡಲು ನಿರಾಕರಿಸಿದ ವಿಷಯವಲ್ಲ.
ಮುಂದಿರುವ ಹಾದಿ ಏನು?: ಇತ್ತೀಚೆಗೆ ಹೈಕೋರ್ಟ್ ವಿಭಾಗೀಯ ಪೀಠವು ದಶಕಗಳಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ರೈತರ ಜಮೀನುಗಳ ಅಧಿಸೂಚನೆಯನ್ನು ರದ್ದುಪಡಿಸುವಾಗ, ಯೋಜನೆಯನ್ನು “ರಾಜ್ಯದ ಅತಿ ದೊಡ್ಡ ಹಗರಣಗಳಲ್ಲಿ ಒಂದು” ಎಂದು ಬಣ್ಣಿಸಿದೆ. ಇದು ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳೊಂದಿಗೆ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ನೈಸ್ ಯೋಜನೆ ಇಂದು ಕೇವಲ ಮೂಲಸೌಕರ್ಯ ಯೋಜನೆಯಾಗಿ ಉಳಿಯದೆ, ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ. ಮೂರು ದಶಕಗಳ ಈ ಕಗ್ಗಂಟನ್ನು ಬಗೆಹರಿಸಲು ಕೇವಲ ರಾಜಕೀಯ ಭಾಷಣಗಳಿಂದ ಸಾಧ್ಯವಿಲ್ಲ, ದಾಖಲೆಗಳ ಆಧಾರದ ಮೇಲೆ, ನ್ಯಾಯಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಂತ್ರಸ್ತ ರೈತರಿಗೆ ನ್ಯಾಯ ದೊರಕಿಸಿಕೊಡುವುದು ಮತ್ತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವುದೇ ಇಂದಿನ ಜರೂರಾಗಿದೆ.





















