SK Home Ad
Home ನಮ್ಮ ಜಿಲ್ಲೆ ದಾವಣಗೆರೆ ನಿಷೇಧಿತ ಪ್ಲಾಸ್ಟಿಕ್ ವಿರುದ್ಧ ಪಾಲಿಕೆ ದಾಳಿ : ₹1.68 ಲಕ್ಷ ದಂಡ

ನಿಷೇಧಿತ ಪ್ಲಾಸ್ಟಿಕ್ ವಿರುದ್ಧ ಪಾಲಿಕೆ ದಾಳಿ : ₹1.68 ಲಕ್ಷ ದಂಡ

0
103

ದಾವಣಗೆರೆ: ನಿಷೇಧಿತ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಳಕೆ, ಮಾರಾಟ ಹಾಗೂ ದಾಸ್ತಾನಿಗೆ ಕಡಿವಾಣ ಹಾಕಲು ದಾವಣಗೆರೆ ಮಹಾನಗರಪಾಲಿಕೆ ಅಧಿಕಾರಿಗಳು ಶನಿವಾರ ನಗರದ ವಿವಿಧೆಡೆ ದಾಳಿ ನಡೆಸಿದ್ದು, ಸುಮಾರು 180 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು ₹1.68 ಲಕ್ಷ ದಂಡ ವಿಧಿಸಿದ್ದಾರೆ.

ಮಹಾನಗರಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರನ್ನೊಳಗೊಂಡ ತಂಡವು ನಗರದ ಶಾಮನೂರು ರಸ್ತೆ, ಬಿಐಇಟಿ ರಸ್ತೆ, ಎಂಸಿಸಿ ‘ಬಿ’ ಬ್ಲಾಕ್‌ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ವಿವಿಧ ಉದ್ದಿಮೆಗಳ ಮೇಲೆ ತಪಾಸಣೆ ನಡೆಸಿತು.

ಈ ವೇಳೆ ನಿಷೇಧಿತ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಮಾರಾಟ ಹಾಗೂ ದಾಸ್ತಾನು ಮಾಡುತ್ತಿದ್ದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಯಿತು. ದಾಳಿಯ ಸಂದರ್ಭದಲ್ಲಿ ಮಾರಾಟಗಾರರು ಹಾಗೂ ದಾಸ್ತಾನುದಾರರಿಂದ ಸುಮಾರು 180 ಕೆ.ಜಿ. ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಯಿತು. ನಿಯಮ ಉಲ್ಲಂಘಿಸಿದವರಿಂದ ಒಟ್ಟು ₹1,68,000 ದಂಡ ಸಂಗ್ರಹಿಸಲಾಯಿತು.

ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್‌ ಅನ್ನು ಪಾಲಿಕೆ ವತಿಯಿಂದ ಶ್ರೆಡ್ಡಿಂಗ್‌ ಮಾಡಿ ನಾಶಪಡಿಸಿ, ಆರ್‌ಡಿಎಫ್‌ (Refuse Derived Fuel)ಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ.

ಬಟ್ಟೆ ಚೀಲ ಬಳಕೆಗೆ ಕರೆ : ನಗರದ ತರಕಾರಿ ವ್ಯಾಪಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಬಟ್ಟೆ ಚೀಲಗಳನ್ನು ಬಳಸುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದರು. ಗ್ರಾಹಕರೂ ಪ್ಲಾಸ್ಟಿಕ್‌ ಚೀಲಗಳ ಬದಲಿಗೆ ಮರುಬಳಕೆ ಮಾಡಬಹುದಾದ ಚೀಲಗಳನ್ನು ಬಳಸಬೇಕು ಎಂದು ಜಾಗೃತಿ ಮೂಡಿಸಲಾಯಿತು.

ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಅಥವಾ ದಾಸ್ತಾನು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮತ್ತೆ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಅಥವಾ ದಾಸ್ತಾನು ಮಾಡುತ್ತಿರುವುದು ಕಂಡುಬಂದರೆ ಪ್ರಸ್ತುತ ವಿಧಿಸಿರುವ ದಂಡದ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ನಿಷೇಧಿತ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಳಕೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿಯೂ ನಿರಂತರ ತಪಾಸಣೆ ಮತ್ತು ದಾಳಿ ನಡೆಸಲಾಗುವುದು ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.