SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಜನರ ಸಮಸ್ಯೆ ಆಲಿಸಿದ ಸಚಿವ ಕೆ.ಎಸ್.ಬಸವಂತಪ್ಪ; ಹೋಟೆಲ್‌ನಲ್ಲಿ ಮಂಡಕ್ಕಿ ಸವಿದ ಸಚಿವ

ಜನರ ಸಮಸ್ಯೆ ಆಲಿಸಿದ ಸಚಿವ ಕೆ.ಎಸ್.ಬಸವಂತಪ್ಪ; ಹೋಟೆಲ್‌ನಲ್ಲಿ ಮಂಡಕ್ಕಿ ಸವಿದ ಸಚಿವ

0
68
ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವ; ಸ್ಥಳೀಯರೊಂದಿಗೆ ಕುಳಿತು ಮಂಡಕ್ಕಿ ಸವಿದ ಬಸವಂತಪ್ಪ

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾರಿಗನೂರು ಕ್ರಾಸ್‌ನಲ್ಲಿ ಶನಿವಾರ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಜನರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಸ್ಥಳೀಯ ಹೋಟೆಲ್‌ನಲ್ಲಿ ಮುಖಂಡರೊಂದಿಗೆ ಮಂಡಕ್ಕಿ, ಮೆಣಸಿನಕಾಯಿ ಸವಿದರು.

ಕಳೆದ ಎರಡು ವಾರಗಳಿಂದ ರಾಜ್ಯ ಪ್ರವಾಸ ಹಾಗೂ ನಾಲ್ಕು ದಿನಗಳ ಬರಗಾಲ ಅಧಿವೇಶನದಲ್ಲಿ ಭಾಗವಹಿಸಿ ಕ್ಷೇತ್ರಕ್ಕೆ ಮರಳಿದ ಸಚಿವರು, ಶನಿವಾರ ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಹೊನ್ನೂರು ಗ್ರಾಮದಲ್ಲಿ ಮೃತಪಟ್ಟ ಈರಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಕಾರಿಗನೂರು ಗ್ರಾಮದಲ್ಲಿ ನಿಧನರಾದ ಕಾಂಗ್ರೆಸ್ ಮುಖಂಡ ನಾಗಣ್ಣ ಅವರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡರು.

ನಂತರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಚಿವ ಬಸವಂತಪ್ಪ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ಜನರು ತಮ್ಮ ಪ್ರದೇಶದ ರಸ್ತೆ, ಮೂಲಸೌಕರ್ಯ ಹಾಗೂ ಇತರ ಸ್ಥಳೀಯ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ ಸಚಿವರು, ತಕ್ಷಣ ಕ್ರಮ ಕೈಗೊಂಡು ಪರಿಹಾರ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಇನ್ನು ಕೆಲವು ಅಹವಾಲುಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸಾರ್ವಜನಿಕರೊಂದಿಗೆ ನೇರವಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿದ ಸಚಿವರ ಸರಳ ನಡೆ ಗಮನ ಸೆಳೆಯಿತು. ಜನಸಂಪರ್ಕ ಕಾರ್ಯಕ್ರಮಗಳ ಬಳಿಕ ಕಾರಿಗನೂರು ಗ್ರಾಮದ ಸ್ಥಳೀಯ ಹೋಟೆಲ್‌ವೊಂದರಲ್ಲಿ ಗ್ರಾಮದ ಮುಖಂಡರೊಂದಿಗೆ ಕುಳಿತು ಮಂಡಕ್ಕಿ ಹಾಗೂ ಮೆಣಸಿನಕಾಯಿ ಸವಿದರು.

ಸಚಿವರು ಸ್ಥಳೀಯರೊಂದಿಗೆ ಸಾಮಾನ್ಯವಾಗಿ ಬೆರೆತು ಉಪಾಹಾರ ಸೇವಿಸಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ಸಚಿವರ ಈ ಸರಳ ನಡೆ ಕುರಿತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತೇಜಸ್ವಿ ಪಟೇಲ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.