ಹುಬ್ಬಳ್ಳಿ: ಮಾದಕ ವಸ್ತು ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಗೋಕುಲ ರೋಡ್ ಠಾಣೆ ಪೊಲೀಸರು ಭೇದಿಸಿದ್ದಾರೆ. 1 ಕೆಜಿ 300 ಗ್ರಾಂ MDMA ಮಾತ್ರೆಗಳನ್ನು ವಶಪಡಿಸಿಕೊಂಡು, ತಮಿಳುನಾಡಿನ ಇಬ್ಬರು ಸೇರಿದಂತೆ ಮೂವರು ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಒಂದೂವರೆ ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
ತಮಿಳುನಾಡು ಕೊಯಿಮತ್ತೂರು ಮೂಲದ ರಘುಕೃಷ್ಣನ್ ಉರ್ಫ ಕುಳ್ಳಿ ರಾಮಸ್ವಾಮಿ (24), ರಾಜಕುಮಾರ ಶ್ರೀನಿವಾಸನ್ (21) ಹಾಗೂ ಹಳೇಹುಬ್ಬಳ್ಳಿ ಅರವಿಂದನಗರದ ಪ್ರವೀಣ ವಿಜಯ ಶೆಟ್ಟಿ ಬಂಧಿತ ಆರೋಪಿಗಳು.
ಗೋಕುಲ ರೋಡ್ ಠಾಣೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದ ಪಿಎಸ್ಐ ಸಚಿನ್ಕುಮಾರ ದಾಸರೆಡ್ಡಿ, ಸಿಬ್ಬದಿ ಲಕ್ಷ್ಮಣ ನಾಯಕ ಮತ್ತು ಸಂತೋಷ ಆಡೂರ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿ ಮೂವರನ್ನು ಬಂಧಿಸಿದೆ. ಸಿಬ್ಬಂದಿ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
ಆರೋಪಿಗಳ ವಿರುದ್ಧ ಇವೆ ಹಲವು ಪ್ರಕರಣ: ಆರೋಪಿ ರಘುಕೃಷ್ಣನ್ ವಿರುದ್ಧ ತಮಿಳುನಾಡಿನ ಕೊಯಿಮುತ್ತೂರು ಪೊಲೀಸ್ ಠಾಣೆ, ಚೆಟ್ಟಿಪಾಳಯಂ ಪೊಲೀಸ್ ಠಾಣೆ, ಮಧುಕ್ಕರೈ ಪೊಲೀಸ್ ಠಾಣೆ ಸೇರಿದಂತೆ ನಾಲ್ಕು ಪ್ರಕರಣ ದಾಖಲಾಗಿವೆ. ಪ್ರವೀಣ ಶೆಟ್ಟಿ ಎಂಬಾತನ ವಿರುದ್ಧ ಕರುಂಬಕಡೈ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.





















